ಸೋಮವಾರ, ಮಾರ್ಚ್ 8, 2021
27 °C

ಪ್ರಧಾನಿ ಮೋದಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ: ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೊರೊನಾ ವೈರಾಣು ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ದೆಹಲಿಯಲ್ಲೇ ಕುಳಿತು ಎಲ್ಲವನ್ನೂ ನಾವೇ ಮಾಡುತ್ತೇವೆ ಎನ್ನುವ ಹಟವನ್ನು ಪ್ರಧಾನಿ ನರೇಂದ್ರ ಮೋದಿ ಬಿಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಲಾಕ್‌ಡೌನ್ ವಿಸ್ತರಣೆ ನಿರ್ಧಾರ ನಾವೇ ಮಾಡುತ್ತೇವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರಗಳನ್ನು ಕೇಂದ್ರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ರಾಜ್ಯಗಳಿಗೆ ಹೆಚ್ಚಿನ ಜವಾಬ್ದಾರಿ ಕೊಡಬೇಕು. ಅನುದಾನವನ್ನೂ ನೀಡಬೇಕು. ಆದರೆ, ಇದು ನಡೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರವಾಹ, ಅತಿವೃಷ್ಟಿ ವೇಳೆಯೂ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಸಿಎಸ್‌ಆರ್ ನಿಧಿ ಕೇಂದ್ರಕ್ಕೆ ಸೀಮಿತವಾಗಿ ಇಟ್ಟುಕೊಂಡಿದ್ದಾರೆ. ಅದು ರಾಜ್ಯಕ್ಕೆ ಬಂದು ಇಲ್ಲಿನ ಜನರಿಗೆ ಪರಿಹಾರ ವಿತರಣೆ ಆಗುವುದು ಯಾವಾಗ?’ ಎಂದು ಕೇಳಿದರು.

‘ದೆಹಲಿಯ ನಿಜಾಮುದ್ದಿನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ವಯಂಪ್ರೇರಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ಸೋಂಕು ಇದ್ದರೆ ಕುಟುಂಬಕ್ಕೆ ಹರಡುತ್ತದೆ ಎನ್ನುವುದನ್ನು ಅರಿಯಬೇಕು’ ಎಂದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತಪಾಸಣೆಗೆ ಒಳಗಾಗದವರಿಗೆ ಗುಂಡಿಕ್ಕುವುದು ಪರಿಹಾರವಲ್ಲ. ಪರಿಹಾರವೇನು ಎನ್ನುವುದನ್ನು ಕಂಡುಕೊಳ್ಳಬೇಕು. ಮಾಹಿತಿ ನೀಡದವರ ವಿರುದ್ಧ ಕ್ರಮಕ್ಕೆ ಅವಕಾಶವಿದೆ. ಮೊದಲು ಸೋಂಕು ಹರಡುವುದನ್ನು ನಿಯಂತ್ರಿಸಿ, ಬಳಿಕ ಕ್ರಮ ಕೈಗೊಳ್ಳಬೇಕು. ಒಂದು ಸಮುದಾಯದಿಂದ ಕೊರೊನಾ‌ ಬಂದಿದ್ದಲ್ಲ. ಸೋಂಕಿತರಲ್ಲಿ ಶೇ 10ರಷ್ಟು ಮಂದಿ ಒಂದು ಸಮುದಾಯದವರು ಇರಬಹುದು, ಉಳಿದವರಾರು? ಕೊರೊನಾ ವಿದೇಶದಿಂದ ಬಂದಿದೆ. ಒಂದೇ ಸಮುದಾಯ ಟಾರ್ಗೆಟ್ ಮಾಡಲಾಗದು’ ಎಂದು ಪ್ರತಿಕ್ರಿಯಿಸಿದರು.

‘ಪಡಿತರ ವಿತರಣೆ ಜೊತೆಗೆ ಹಣಕಾಸಿನ ನೆರವು ನೀಡಬೇಕು. ಬೇರೆ ರಾಜ್ಯಕ್ಕೆ ತರಕಾರಿ ಸಾಗಿಸಲು ವ್ಯವಸ್ಥೆ ಮಾಡಿ ರೈತರಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು