ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಮಕ್ಕಳಿಗೇ ಟಿಕೆಟ್‌: ನಿಲ್ಲದ ಚರ್ಚೆ

Published 12 ಮಾರ್ಚ್ 2024, 3:57 IST
Last Updated 12 ಮಾರ್ಚ್ 2024, 3:57 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಸಭೆ ಚುನಾವಣೆಗೆ ಬೆಳಗಾವಿ ಕ್ಷೇತ್ರದಿಂದ ಮೃಣಾಲ್‌ ಹೆಬ್ಬಾಳಕರ ಹಾಗೂ ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್‌ ಅಂತಿಮವಾಗಿದೆ ಎಂಬ ಸುದ್ದಿ ಜಿಲ್ಲೆಯಲ್ಲಿ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಆದರೆ, ಸಚಿವರ ಆಪ್ತ ಮೂಲಗಳು ಈ ಬಗ್ಗೆ ಅಂತಿಮವಾಗಿಲ್ಲ. ಇನ್ನೂ ಚರ್ಚೆ ನಡೆದಿದೆ ಎಂದು ಹೇಳಿವೆ.

ಬೆಳಗಾವಿ ಕ್ಷೇತ್ರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮಣಾಲ್‌ ಹಾಗೂ ಡಾ.ಗಿರೀಶ ಸೋನವಾಲ್ಕರ ಅವರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಕಳುಹಿಸಲಾಗಿತ್ತು. ಡಾ.ಗಿರೀಶ ಸ್ಪರ್ಧೆಗೆ ಸ್ವತಃ ಲಕ್ಷ್ಮಿ ಹೆಬ್ಬಾಳಕರ ಸಹಮತ ವ್ಯಕ್ತಪಡಿಸಿದ್ದರು. ಆದರೆ, ಸೋಮವಾರ ಇದ್ದಕ್ಕಿದ್ದಂತೆ ಪಕ್ಷದ ನಡೆ ಬದಲಾಗಿದೆ ಎಂಬ ಮಾತುಗಳು ಪಕ್ಷದಲ್ಲಿ ಹರಿದಾಡುತ್ತಿವೆ.

ಚಿಕ್ಕೋಡಿ ಕ್ಷೇತ್ರದಿಂದ ಕೂಡ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಕುರುಬ ಸಮಾಜದ ಮುಖಂಡ ಲಕ್ಷ್ಮಣರಾವ್‌ ಚಿಂಗಳೆ ಅವರ ಹೆಸರು ಸೂಚಿಸಲಾಗಿತ್ತು. ತಮ್ಮ ಪುತ್ರಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಪದೇಪದೇ ಹೇಳುತ್ತಲೇ ಇದ್ದರು.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳಕರ, ‘ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ. ಬೆಳಗಾವಿ ಕ್ಷೇತ್ರಕ್ಕೆ ಮೃಣಾಲ್ ಹೆಬ್ಬಾಳಕರ್, ಚಿಕ್ಕೋಡಿ ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ‌ ಸ್ಪರ್ಧಿಸಲಿ ಎನ್ನುವುದು ಸ್ಥಳೀಯ ಮುಖಂಡರ ಆಶಯವಾಗಿದೆ. ಜಿಲ್ಲಾ ಮುಖಂಡರು ಹಾಗೂ ವರಿಷ್ಠರು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವರು’ ಎಂದರು.

‘ಚಿಕ್ಕೋಡಿಯಲ್ಲಿ ತಮ್ಮ ಪುತ್ರಿಯೇ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಬಗ್ಗೆ ಚರ್ಚೆ ನಡೆದಿದ್ದು ನಿಜ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಬೆಳಗಾವಿಗೆ ಬಂದಾಗ ಚರ್ಚಿಸಿದ್ದಾರೆ. ಆದರೆ, ನಾನು ‍ಪುತ್ರಿಯ ಅಭಿಪ್ರಾಯವನ್ನೂ ಕೇಳಬೇಕಿದೆ. ಅವರು ಬೇಡವೆಂದರೆ ಕಷ್ಟ. ಅಭ್ಯರ್ಥಿಗಳ ಆಯ್ಕೆಗಾಗಿ ಇನ್ನೊಂದು ಸುತ್ತಿನ ಚರ್ಚೆ ಮಾಡುತ್ತೇವೆ. ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಗೊಂದಲ ವಿಜಯಪುರದಲ್ಲಿ ಇಲ್ಲ. ಅಲ್ಲಿ ಒಬ್ಬರ ಹೆಸರನ್ನು ಮಾತ್ರ ಸೂಚಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT