ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ 30 ದಿನ ಅಧಿವೇಶನ ನಡೆಸಲೇಬೇಕು: ಪ್ರಭಾಕರ ಕೋರೆ ಒತ್ತಾಯ

Last Updated 14 ಜುಲೈ 2021, 12:13 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಮಳೆಗಾಲದ ಅಧಿವೇಶನ ನಡೆಸಲೇಬೇಕು’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದ್ದಾರೆ.

‘2018ರ ನಂತರ ಇಲ್ಲಿ ಅಧಿವೇಶನ ನಡೆಯದೇ ಇರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಪ್ರತಿ ವರ್ಷ ಅಧಿವೇಶನವನ್ನು ಆಯೋಜಿಸುವ ಸಂಕಲ್ಪ ಮಾಡಿದ್ದರೂ ಅದು ಅನುಷ್ಠಾನಗೊಳ್ಳದಿರುವುದು ವಿಷಾದದ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.

‘ಉತ್ತರ ಕರ್ನಾಟಕದ ಬಹುದಿನಗಳ ಒತ್ತಾಸೆಯಾಗಿದ್ದ ಸುವರ್ಣ ವಿಧಾನಸೌಧದ ಕನಸು ನನಸಾಗಲು ಹಲವಾರು ದಶಕಗಳನ್ನೇ ತೆಗೆದುಕೊಂಡಿತು. ಮೊಟ್ಟ ಮೊದಲಿಗೆ ಕೆಎಲ್‌ಇ ಅಂಗಳದಲ್ಲಿ ಯಶಸ್ವಿಯಾಗಿ ಅಧಿವೇಶನವನ್ನು ನಾವು ಜರುಗಿಸಿ ತೋರಿಸಿದ್ದೆವು. ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯವಿದೆ. ಅಧಿವೇಶನ ಜರುಗಿದರೆ ಗಲಭೆ–ಗಲಾಟೆಗಳಾಗಬಹುದೆಂಬ ಸಂದೇಹವಿದ್ದ ಸನ್ನಿವೇಶದಲ್ಲಿ ಕೆಎಲ್‌ಇ ಅಂಗಳದಲ್ಲಿ ಒಂದಲ್ಲ ಎರಡು ಬಾರಿ ಅಧಿವೇಶನವನ್ನು ನಿರ್ವಿಘ್ನವಾಗಿ ನಡೆಸಿದ್ದು ಇತಿಹಾಸ. ಅಧಿವೇಶನ ಯಶಸ್ವಿಯಾದಾಗ ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಬೇಕು ಹಾಗೂ ಸುವರ್ಣ ವಿಧಾನಸೌಧ ನಿರ್ಮಿಸಬೇಕು ಎಂಬ ಒತ್ತಾಯಗಳು ಬಂದವು’ ಎಂದು ನೆನೆದಿದ್ದಾರೆ.

‘ಈ ಭಾಗದ ಕನ್ನಡಿಗರ ಆಶಯಕ್ಕೆ, ಹೋರಾಟಕ್ಕೆ, ಹೊಸ ಆಯಾಮಕ್ಕೆ ದಿಕ್ಕು ದೆಸೆ ಕಂಡು ಬಂತು. ಬಿಜೆಪಿ–ಜೆಡಿಎಸ್ ಸಮಿಶ್ರ ಸರ್ಕಾರವಿದ್ದ ಕಾಲವದು. ಬೆಳಗಾವಿಯಂತಹ ಪ್ರದೇಶದಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಗೊಳ್ಳುವುದೇ ಎಂದು ಉಳಿದವರು ತಿಳಿದುಕೊಂಡಿದ್ದರು. ಇಲ್ಲಿಯ ರಾಜಕೀಯ ಧುರೀಣರು, ಕಾರ್ಯಕರ್ತರು ಹಾಗೂ ಜನತೆಯ ಒತ್ತಾಸೆಯ ಫಲವಾಗಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಂತರ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಅವರ ಇಚ್ಛಾಶಕ್ತಿ ಫಲವಾಗಿ ₹ 400 ಕೋಟಿ ವೆಚ್ಚದಲ್ಲಿ ಸುವರ್ಣ ವಿಧಾನಸೌಧ ಕಟ್ಟಡ ನಿರ್ಮಾಣಗೊಂಡಿತು’ ಎಂದು ಸ್ಮರಿಸಿದ್ದಾರೆ

‘ಇದೆಲ್ಲವೂ ಸರಿಯಾಗಿಯೇ ಇತ್ತು. ತದನಂತರದಲ್ಲಿ ಮೂಲೋದ್ದೇಶ ಮರೆತು ಅಲ್ಪಾವಧಿಗೆ ಅಧಿವೇಶನಗಳು ಜರುಗಿದವು. ಶಾಸಕರ ಹಾಜರಾತಿ ಬಹು ಕಡಿಮೆ ಇರುತ್ತಿತ್ತು. ಪ್ರವಾಸಕ್ಕಾಗಿಯೇ ಶಾಸಕರು ಬಂದಂತೆ ಅನಿಸಿತು. ಸುವರ್ಣ ವಿಧಾನಸೌಧ ಕಟ್ಟಿದ ಉದ್ದೇಶವೇ ಸರಿಯಾಗಿ ಕಾರ್ಯಗತಗೊಳ್ಳದೆ ಇರುವುದು ವಿಪರ್ಯಾಸ’ ಎಂದು ವಿಷಾದಿಸಿದ್ದಾರೆ.

‘ಅಧಿವೇಶನಗಳು ಇಲ್ಲಿ ಯಶಸ್ವಿಯಾಗಿ ಪೂರ್ಣಾವಧಿಗೆ ನಡೆಯಬೇಕಾದರೆ ಶಾಸಕರ ಭವನ, ಸಿಬ್ಬಂದಿಗೆ ವಸತಿ ಗೃಹಗಳು, ಕ್ಯಾಂಟೀನ್‌ಗಳು ಅಗತ್ಯವಾಗಿ ನಿರ್ಮಾಣಗೊಳ್ಳಬೇಕು. ಈಗಿನ ವ್ಯವಸ್ಥೆಯಲ್ಲೇ ಮುಂದುವರಿದರೆ ಅಧಿವೇಶನಗಳು ಸರಿಯಾಗಿ ಜರುಗುವುದಿಲ್ಲ. ಮಳೆಗಾಲದಲ್ಲಾಗಲಿ ಅಥವಾ ಚಳಿಗಾಲದಲ್ಲಾಗಲಿ ಕನಿಷ್ಠ 30 ದಿನಗಳವರೆಗೆ ಪೂರ್ಣಾವಧಿಯ ಅಧಿವೇಶನ ನಡೆಯಬೇಕು. ಸರ್ಕಾರವು ಇತ್ತ ಗಮನಹರಿಸಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT