ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಜ್ಜು

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 33,807 ವಿದ್ಯಾರ್ಥಿಗಳ ನೋಂದಣಿ
Last Updated 25 ಮಾರ್ಚ್ 2022, 8:37 IST
ಅಕ್ಷರ ಗಾತ್ರ

ಬೆಳಗಾವಿ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 28ರಿಂದ ಏ.11ರವರೆಗೆ ನಡೆಯಲಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.

ಏಳು ವಲಯಗಳ 493 ಪ್ರೌಢಶಾಲೆಗಳ 17,118 ಬಾಲಕರು ಮತ್ತು 16,689 ಬಾಲಕಿಯರು ಸೇರಿದಂತೆ 33,807 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.

139 ಕೇಂದ್ರಗಳ 1,733 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. 139 ಮುಖ್ಯ ಸೂಪರಿಂಟೆಂಡೆಂಟ್‌ಗಳು, 12 ಉಪ ಮುಖ್ಯ ಸೂಪರಿಂಟೆಂಡೆಂಟ್‌ಗಳು, ತಲಾ 139 ಕಸ್ಟೋಡಿಯನ್‌ಗಳು ಮತ್ತು ಮೊಬೈಲ್ ಸ್ವಾಧೀನಾಧಿಕಾರಿಗಳು, 21 ತಾಲ್ಲೂಕು ಜಾಗೃತ ದಳ, 139 ಸ್ಥಾನಿಕ ಜಾಗೃತ ದಳ, 50 ಮಾರ್ಗಾಧಿಕಾರಿಗಳು, 278 ಆರೋಗ್ಯ ಸಿಬ್ಬಂದಿ, 278 ಪೊಲೀಸರು, 2,235 ಕೊಠಡಿ ಮೇಲ್ವಿಚಾರಕರು ಸೇರಿದಂತೆ ಒಟ್ಟು 5,302 ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಪೂರಕ ಹಾಗೂ ಸರಣಿ ಪರೀಕ್ಷೆಗಳನ್ನು ನಡೆಸಿ, ಅದರಲ್ಲಿನ ಫಲಿತಾಂಶದ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದುಳಿದವರ ಸುಧಾರಣೆಗಾಗಿ ವಿಶೇಷ ಕ್ರಿಯಾಯೋಜನೆ ರೂಪಿಸಿ ತರಗತಿಗಳನ್ನು ನಡೆಸಿ ಮಾರ್ಗದರ್ಶನ ನೀಡಲಾಗಿದೆ.

‘ಪ್ರತಿ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿನ ಮುಖ್ಯಶಿಕ್ಷಕರ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಪರೀಕ್ಷೆಗೆ ಅವಶ್ಯ ತಯಾರಿ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಮಾರ್ಗದರ್ಶನ ನೀಡಲಾಗಿದೆ. ಆತ್ಮಸ್ಥೈರ್ಯ ತುಂಬುವುದಕ್ಕಾಗಿ ಚಟುವಟಿಕೆಗಳನ್ನು ನಡೆಸಲಾಗಿದೆ. ಪರೀಕ್ಷಾ ಕ್ರಮದ ಬಗ್ಗೆ ಅವರಲ್ಲಿದ್ದ ಗೊಂದಲಗಳನ್ನು ನಿವಾರಿಸಲಾಗಿದೆ. ಸರಣಿ ಪರೀಕ್ಷೆಗಳನ್ನು ನಡೆಸಲಾಗಿದೆ. ಕೋವಿಡ್ ಕಾರಣದಿಂದಾಗಿ ಶೇ 20ರಷ್ಟು ಪಠ್ಯವನ್ನು ಕಡಿತಗೊಳಿಸಲಾಗಿದೆ’ ಎಂದು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬಸವರಾಜ ನಾಲತವಾಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಶ್ನೆಪತ್ರಿಕೆಗಳು ತಲುಪಿದ್ದು, ಠೇವಣಿ ಇಡಲಾಗಿದೆ. ಪರೀಕ್ಷಾ ಅಕ್ರಮಗಳು ನಡೆಯದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ತೆರೆಯುವಲ್ಲಿ, ಉತ್ತರ ಪತ್ರಿಕೆಗಳನ್ನು ಸೀಲ್ ಮಾಡುವಲ್ಲಿ, ಮುಖ್ಯ ಸೂಪರಿಂಟೆಂಡೆಂಟ್ ಕೊಠಡಿಯಲ್ಲಿ ಮತ್ತು ಪರೀಕ್ಷಾ ಕೇಂದ್ರದ ಕಾರಿಡಾರ್‌ನಲ್ಲಿ ಹೀಗೆ ಕನಿಷ್ಠ 4 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚನೆ ಇದೆ. ಅದನ್ನು ಪಾಲಿಸಲಾಗಿದೆ. ಕೆಲವೆಡೆ ಇನ್ನೂ ಹೆಚ್ಚಿನ ಕ್ಯಾಮೆರಾಗಳಿವೆ. ಪರೀಕ್ಷಾ ದಿನದಂದು ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸದಂತೆ ಹೆಸ್ಕಾಂನವರನ್ನು ಕೋರಲಾಗಿದೆ’ ಎಂದು ತಿಳಿಸಿದರು.

ಜನಪ್ರತಿನಿಧಿಗಳ ಸಾಥ್

ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅವರು ತಮ್ಮ ಪ್ರತಿಷ್ಠಾನದಿಂದ ಜಿಲ್ಲೆಯ 915 ಪ್ರೌಢಶಾಲೆಗಳ 56,856 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ಅನುಕೂಲ ಆಗಲೆಂದು ₹ 13 ಲಕ್ಷ ಮೊತ್ತದಲ್ಲಿ ‘ಗೆಲುವಿನನತ್ತ ನಮ್ಮ ಪಯಣ’ ಅಭ್ಯಾಸ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಅಂತೆಯೇ ಚಿಕ್ಕೋಡಿಯ ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ‘ಗೆಲುವಿನತ್ತ ನಮ್ಮ ಚಿತ್ತ’ ಎಂಬ ಶೀರ್ಷಿಕೆಯ ಪುಸ್ತಕಗಳನ್ನು ಅವರ ಕ್ಷೇತ್ರದಲ್ಲಿ ಮಕ್ಕಳಿಗೆ ವಿತರಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಿಂದ ಸಿದ್ಧಪಡಿಸಿದ ಪುಸ್ತಕಗಳಿವಾಗಿವೆ. ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯನ್ನು ಅಗ್ರಸ್ಥಾನಕ್ಕೆ ತರಬೇಕು ಎಂಬ ಶಿಕ್ಷಣ ಇಲಾಖೆಯ ಪ್ರಯತ್ನಕ್ಕೆ ಈ ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ.

ವಿದ್ಯಾರ್ಥಿಗಳ ನೋಂದಣಿ ವಿವರ

ವಲಯ;ಬಾಲಕರು;ಬಾಲಕಿಯರು;ಒಟ್ಟು

ಬೆಳಗಾವಿ ನಗರ;4,360;4,467;8,827

ಬೆಳಗಾವಿ ಗ್ರಾಮೀಣ;3,035;2,719;5,754

ಬೈಲಹೊಂಗಲ;2,159;2,107;4,266

ಖಾನಾಪುರ;1,910;1,877;3787

ರಾಮದುರ್ಗ;2,102;1,955;4,057

ಸವದತ್ತಿ;2,607;2,505;5,112

ಚನ್ನಮ್ಮನ ಕಿತ್ತೂರು;945;1,059;2,004

ಒಟ್ಟು;17,118;16,689;33,807

***

ಉಚಿತವಾಗಿ ಪ್ರಯಾಣಿಸಬಹುದು

ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

–ಬಸವರಾಜ ನಾಲತವಾಡ, ಡಿಡಿಪಿಐ, ಬೆಳಗಾವಿ ಶೈಕ್ಷಣಿಕ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT