ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾಲದಲ್ಲಿ ಬೆಲೆ ದುಪ್ಪಟ್ಟು: ಸಚಿವೆ ಲಕ್ಷ್ಮಿ ಹೆಬ್ಬಾಳಕರ

Published 27 ಏಪ್ರಿಲ್ 2024, 6:18 IST
Last Updated 27 ಏಪ್ರಿಲ್ 2024, 6:18 IST
ಅಕ್ಷರ ಗಾತ್ರ

ಕಟಕೋಳ (ರಾಮದುರ್ಗ ತಾ.): ‘2014ರಲ್ಲಿ ಭಾರೀ ಬೆಲೆ ಏರಿಕೆಯಾಗಿದೆ ಎಂದು ಹೇಳಿ ಬಿಜೆಪಿ ಅಧಿಕಾರಕ್ಕೇರಿತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಲೆಗಳು ಎರಡು ಪಟ್ಟಿಗಿಂತ ಹೆಚ್ಚಾಗಿವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.

ರಾಮದುರ್ಗ ತಾಲ್ಲೂಕಿನ ಕಟಕೋಳದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ‘ಆಗ ಪೆಟ್ರೋಲ್ ದರ ₹50 ಇತ್ತು, ಈಗ ₹100 ಗಡಿ ದಾಟಿದೆ. ಆಗ ಸಿಲೆಂಡರ್ ಬೆಲೆ ₹450 ಇತ್ತು, ಇಂದು ₹1100 ದಾಟಿದೆ. ಬಹುತೇಕ ಎಲ್ಲ ಕಿರಾಣಿ ಸಾಮಗ್ರಿ ಬೆಲೆ ಈಗ ವಿಪರೀತ ಏರಿವೆ. ಬಿಜೆಪಿ ಕಾಲದಲ್ಲಿ ಬೆಲೆಗಳು ಇಳಿಯುವ ಬದಲು ದುಪ್ಪಟ್ಟಾಗಿದೆ’ ಎಂದು ಹೇಳಿದರು.

‘ಬೆಲೆ ಏರಿಕೆಯಿಂದ ತತ್ತರಿಸಿರುವವರಿಗೆ ಏನಾದರೂ ಸಹಾಯ ಮಾಡಬೇಕೆಂದು ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟುವ ವ್ಯವಸ್ಥೆ ಮಾಡಿದ್ದೇವೆ’ ಎಂದರು.

‘ಬಿಜೆಪಿಯವರು ಗ್ಯಾರಂಟಿಗಳನ್ನು ಪ್ರಶ್ನಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲು ಹೇಳುತ್ತಿದ್ದಾರೆ. ಬಡವರಿಗೆ ಯೋಜನೆಗಳನ್ನು ಕೊಡುವುದು ಅವರಿಗೆ ಬೇಕಾಗಿಲ್ಲ. ಸ್ವಾತಂತ್ರ್ಯ ಸಿಕ್ಕ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಭಾರತ ಅತ್ಯಂತ ಸಂಕಷ್ಟದಲ್ಲಿದ್ದಾಗ, ಮಹಾಮಾರಿಗಳು ಬಂದಾಗ, ಮೂಲಭೂತ ಸೌಲಭ್ಯಗಳಿಲ್ಲದಾಗ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡು ಇಂದು ಭಾರತವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನೆಹರೂ ಅವರು ತಂದ ಪಂಚವಾರ್ಷಿಕ ಯೋಜನೆ, ಹಸಿರು ಕ್ರಾಂತಿ, ಬ್ಯಾಂಕುಗಳ ರಾಷ್ಟ್ರೀಕರಣ ಮೊದಲಾದವುಗಳ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ತಂದು ನಿಲ್ಲಿಸಿದ್ದಾರೆ. ಆದರೆ, ಬಿಜೆಪಿಯವರು ಹತ್ತು ವರ್ಷಗಳಲ್ಲಿ ಮಾತ್ರ ಇದೆಲ್ಲ ಆಗಿದೆ ಎಂಬಂತೆ ಸುಳ್ಳು ಹೇಳುತ್ತಿದ್ದಾರೆ’ ಎಂದರು.

ಪ್ರದೀಪ ಪಟ್ಟಣ, ಸೋಮಶೇಖ ಸಿದ್ದಲಿಂಗಪ್ಪನವರ್, ರಾಯಪ್ಪ ಕತ್ತಿ, ಜಿ.ಬಿ.ರಂಗಣ್ಣಗೌಡರ್, ಪರ್ವತಗೌಡ ಪಾಟೀಲ, ಜಾವುರ್ ಹಾಜಿ, ಆರ್.ಕೆ.ಪಾಟೀಲ, ಮಾರುತಿ ಶಿರೆಗಾರ ಮೊದಲಾದವರು ಇದ್ದರು.

ಇದಕ್ಕೂ ಮೊದಲು ಬಸ್ ನಿಲ್ದಾಣದಿಂದ ಬಜಾರ್ ಪೇಟೆಯವರೆಗೆ ಬೃಹತ್ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT