ಸೋಮವಾರ, ಮಾರ್ಚ್ 27, 2023
29 °C
ಕಳೇಬರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ

ಕುರಿಗಳ ಸಾವು: ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ತಾಲ್ಲೂಕಿನ ಅಗಸಗಿ ರಸ್ತೆಯಲ್ಲಿ ಬುಧವಾರ ಸಂಜೆ ಮರಳು ತುಂಬಿದ ಟಿಪ್ಪರ್ ಹರಿದು ನಮಗೆ ಸೇರಿದ 19 ಕುರಿಗಳು ಸಾವಿಗೀಡಾಗಿದ್ದು, ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಕುರಿಗಾಹಿ ಕುಟುಂಬದವರು ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸರಕು ಸಾಗಣೆ ವಾಹನದಲ್ಲಿ ಕುರಿಗಳ ಕಳೇಬರಗಳೊಂದಿಗೆ ಬಂದಿದ್ದ ಅವರು, ಅವುಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ನ್ಯಾಯ ಕೊಡಿಸಬೇಕು  ಎಂದು ಒತ್ತಾಯಿಸಿದರು.

ಕುರಿಗಳನ್ನು ಕಳೆದುಕೊಂಡಿರುವ ಕಡೋಲಿ ಗ್ರಾಮದ ಮಲ್ಲಪ್ಪ ಬೀರಪ್ಪ ಶಹಾಪೂರಕರ ಮಾತನಾಡಿ, ‘ನಾವು 150 ಕುರಿಗಳನ್ನು ಸಾಕಿದ್ದೇವೆ. ನಿತ್ಯವೂ ಮೇಯಿಸಲು ಹೋಗುತ್ತೇವೆ. ಹೀಗೆ ಹೋಗಿ ವಾಪಸಾಗುವಾಗ ಟಿಪ್ಪರ್‌ ಕುರಿಗಳ ಮೇಲೆ ವೇಗವಾಗಿ ಹರಿದು ಹೋಯಿತು. ಆಗ, 19 ಕುರಿಗಳು ಸ್ಥಳದಲ್ಲೇ ಸಾವಿಗೀಡಾದವು. 16 ಕುರಿಗಳಿಗೆ ಗಂಭೀರ ಗಾಯಗಳಾಗಿವೆ. 10 ಕುರಿಗಳು ಭಯದಲ್ಲಿ ಓಡಿಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಅವುಗಳನ್ನು ಮೇಯಿಸಲು ಹೋಗಿದ್ದ ಇಬ್ಬರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ಸ್ಥಳದಿಂದ ಪರಾರಿಯಾದ ಚಾಲಕ ಅಂಬೇವಾಡಿ ಬಳಿ ಟಿಪ್ಪರ್ ಬಿಟ್ಟು ಓಡಿ ಹೋಗಿದ್ದಾನೆ. ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರಿಗೂ ಮಾಹಿತಿ ಕೊಡಲಾಗಿದೆ. ಘಟನೆಯಿಂದ ನನಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು. ಚಾಲಕನ ನಿರ್ಲಕ್ಷ್ಯಕ್ಕೆ ನಮ್ಮ ಕುರಿಗಳು ಬಲಿಯಾಗಿವೆ. ಹೀಗಾಗಿ, ಸಾವಿಗೀಡಾದವು, ಗಾಯಗೊಂಡವು ಹಾಗೂ ತಪ್ಪಿಸಿಕೊಂಡಿರುವವು ಸೇರಿ ಒಟ್ಟು 45 ಕುರಿಗಳಿಗೆ ತಲಾ ₹ 15ಸಾವಿರದಂತೆ ಕೂಡಲೇ ಪರಿಹಾರ ಕಲ್ಪಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಮಲಗೌಡ ಪಾಟೀಲ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಟಿಪ್ಪರ್‌ಗಳನ್ನು ಚಾಲಕರು ಅತಿಯಾದ ವೇಗದಲ್ಲಿ ಚಲಾಯಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಪೊಲೀಸರು ಗಮನಹರಿಸಬೇಕು. ಚಾಲಕರ ಸಭೆ ನಡೆಸಿ, ಸ್ಪಷ್ಟ ಸೂಚನೆ ಕೊಡಬೇಕು. ಮುಂದಿನ  ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ನಷ್ಟ ಅನುಭವಿಸಿದ ಕಡೋಲಿಯ ಕುರಿಗಾಹಿಗೆ ಸಮರ್ಪಕ ಪರಿಹಾರ ಒದಗಿಸಬೇಕು’ ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು