ಭಾನುವಾರ, ಆಗಸ್ಟ್ 1, 2021
22 °C
ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಅಂಗಡಿ ಸೂಚನೆ

ಹಳ್ಳಿಗಳಲ್ಲಿ ಶುದ್ಧ ನೀರು ಪೂರೈಕೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಹಳ್ಳಿಗಳಲ್ಲಿನ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ರುರ‌್ಬನ್ (ಎನ್‌ಆರ್‌ಯುಎಂ) ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಳ್ಳಿಯ ವಾತಾವರಣ ಉಳಿಸಿಕೊಂಡು ಪಟ್ಟಣದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿರುವ ಶ್ಯಾಮ್‌ಪ್ರಸಾದ್‌ ಮುಖರ್ಜಿ ರುರ‌್ಬನ್ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಹಳ್ಳಿಗಳಲ್ಲಿ ಚರಂಡಿ ನೀರು ಸಂಸ್ಕರಿಸಿ ಮರುಬಳಕೆಗೆ ಎಸ್‌ಟಿಪಿ ಘಟಕ ಸ್ಥಾಪಿಸಬೇಕು. ಚರಂಡಿಯ ನೀರು ಕೆರೆ ಅಥವಾ ನದಿಗೆ ಸೇರದಂತೆ ಯೋಜನೆ ರೂಪಿಸಬೇಕು’ ಎಂದು ತಿಳಿಸಿದರು.

‘ಕೊರೊನಾ ವೈರಸ್ ಸೋಂಕಿನಿಂದಾಗಿ ನಗರ ಪ್ರದೇಶಗಳಲ್ಲಿನ ಜನರು ಹಳ್ಳಿಗಳಿಗೆ ವಾಪಸ್ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಳ್ಳಿಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿವೆ. ಮುಂದಿನ 30 ವರ್ಷಗಳನ್ನು ಗುರಿಯಾಗಿಸಿಕೊಂಡು ಈಗಿನಿಂದಲೇ ಯೋಜನೆ ತಯಾರಿಸಬೇಕು’ ಎಂದರು.

‘2016-17ನೇ ಸಾಲಿನಲ್ಲಿ ಆರಂಭವಾದ ಅಭಿಯಾನದಲ್ಲಿ ತಾಲ್ಲೂಕಿನ ಕಂಗ್ರಾಳಿ ಕ್ಲಸ್ಟ್‌ರ್ ವ್ಯಾಪ್ತಿಯಲ್ಲಿ ಕಂಗ್ರಾಳಿ ಬಿ.ಕೆ., ಕಂಗ್ರಾಳಿ ಕೆ.ಎಚ್., ಮಂಡೋಳಿ ಮತ್ತು ಅಂಬೇವಾಡಿ ಗ್ರಾಮಗಳು ಆಯ್ಕೆಯಾಗಿವೆ. ಮೊದಲ ಹಂತದಲ್ಲಿ ₹ 452.95 ಕೋಟಿ ಬಿಡುಗಡೆಯಾಗಿದೆ. ಆದರೆ, ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡಿಲ್ಲದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ‘ಆಯ್ಕೆಯಾಗಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಜುಲೈ 10ರ ಒಳಗೆ ಸಲ್ಲಿಸಬೇಕು. ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲೇ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಮುಖ್ಯ ಲೆಕ್ಕಾಧಿಕಾರಿ ಪರುಶರಾಮ ದುಡಗುಂಟಿ, ಯೋಜನಾ ನಿರ್ದೇಶಕ ಎ.ಎಂ. ಪಾಟೀಲ, ಜಂಟಿ ಕೃಷಿ ನಿದೇಶಕ ಜಿಲಾನಿ ಮೊಕಾಶಿ ಇದ್ದರು.

ಇದಕ್ಕೂ ಮುನ್ನ ಸಚಿವರು, ಸ್ವಚ್ಛ ಭಾರತ ಅಭಿಯಾನದಲ್ಲಿ ತ್ಯಾಜ್ಯ ವಿಲೇವಾರಿಗೆ ಒದಗಿಸಲಾದ ವಾಹನಗಳನ್ನು 19 ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಹಸ್ತಾಂತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು