ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಪಿಯು ಪರೀಕ್ಷೆ ಫಲಿತಾಂಶ: ಪೋಷಕರಿಲ್ಲದ‌ ಕೊರಗು ಮೀರಿ ಸಾಧನೆ

Published 11 ಏಪ್ರಿಲ್ 2024, 5:53 IST
Last Updated 11 ಏಪ್ರಿಲ್ 2024, 5:53 IST
ಅಕ್ಷರ ಗಾತ್ರ

ಬೆಳಗಾವಿ: ‘ಚಿಕ್ಕವನಿದ್ದಾಗ ತಂದೆ, 6ನೇ ತರಗತಿಯಲ್ಲಿದ್ದಾಗ ತಾಯಿ ಮೃತಪಟ್ಟರು. ವಾಸಕ್ಕೆ ಸ್ವಂತ ಮನೆ, ಬೇರ್‍ಯಾವ ಆಸ್ತಿಯೂ ಇರಲಿಲ್ಲ. ಆದರೆ, ಓದಬೇಕೆಂಬ ಉತ್ಕಟವಾದ ಹಂಬಲವಿತ್ತು. ಹಾಗಾಗಿ ಹಾಸ್ಟೆಲ್‌ ಸೇರಿ ಓದು ಮುಂದುವರಿಸಿದ್ದೆ. ಇಲ್ಲಿ ಕಷ್ಟಪಟ್ಟು ಓದಿದ್ದಕ್ಕೆ ಈಗ ಫಲ ಸಿಕ್ಕಿದೆ. ಈ ಸಾಧನೆ ನನ್ನ ನೋವನ್ನೆಲ್ಲ ಮರೆಯಿಸಿದೆ’

ಇಲ್ಲಿನ ಸರ್ಕಾರಿ ಪುರುಷರ ಅನುಪಾಲನಾ ಗೃಹದಲ್ಲಿ ವಾಸವಿರುವ, ಈ ಬಾರಿ ಪಿಯು ದ್ವಿತೀಯ ವರ್ಷದ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ.86.66 ಅಂಕ ಗಳಿಸಿದ ಬಳ್ಳಾರಿ ಮೂಲದ ಶಂಕರ ‘ಪ್ರಜಾವಾಣಿ’ ಮುಂದೆ ಸಂತಸ ಹಂಚಿಕೊಂಡಿದ್ದು ಹೀಗೆ.

‘ಬಳ್ಳಾರಿ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಇದ್ದುಕೊಂಡು ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದೆ. ಆಗ ಶೇ.91ರಷ್ಟು ಅಂಕ ಗಳಿಸಿದ್ದೆ. ಈಗ ನಾನು ಬೆಳಗಾವಿಯ ಸರ್ಕಾರಿ ಸರ್ದಾರ್ಸ್‌ ಪಿಯು ಕಾಲೇಜಿನ ವಿದ್ಯಾರ್ಥಿ. ಅಕ್ಕ ಶ್ರೀದೇವಿ ಮೈಸೂರಿನ ಹಾಸ್ಟೆಲ್‌ನಲ್ಲಿದ್ದು, ಪದವಿ ಓದುತ್ತಿದ್ದಾರೆ. ಪ್ರೌಢಶಿಕ್ಷಣ ಪಡೆಯುತ್ತಿರುವ ತಮ್ಮ ರವಿ ಬೆಳಗಾವಿ ಬಾಲಕರ ಬಾಲಮಂದಿರದಲ್ಲಿದ್ದಾನೆ. ಹಾಸ್ಟೆಲ್‌ನಲ್ಲೇ ಮೂವರ ಬದುಕು’ ಎಂದು ಅವರು ಹೇಳಿದರು.

ಶಂಕರ ಕನ್ನಡ ವಿಷಯದಲ್ಲಿ 88, ಇಂಗ್ಲಿಷ್‌ನಲ್ಲಿ 61, ಇತಿಹಾಸದಲ್ಲಿ 95, ಅರ್ಥಶಾಸ್ತ್ರದಲ್ಲಿ 94, ರಾಜ್ಯಶಾಸ್ತ್ರದಲ್ಲಿ 93 ಮತ್ತು ಭುಗೋಳಶಾಸ್ತ್ರದಲ್ಲಿ 89, ಅಂಕ ಗಳಿಸಿದ್ದಾರೆ. ಬಿ.ಎ ಕೋರ್ಸ್‌ಗೆ ಪ್ರವೇಶ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಸಿದ್ಧತೆಯಲ್ಲಿರುವ ಅವರಿಗೆ ಭವಿಷ್ಯದಲ್ಲಿ ಪೊಲೀಸ್‌ ಅಧಿಕಾರಿಯಾಗುವ ಆಸೆ.

ತಿಂಗಳಿಗೊಮ್ಮೆ ಸಭೆ ನಡೆಸಿ ಮಕ್ಕಳ ಶೈಕ್ಷಣಿಕ ಗೊಂದಲ ಬಗೆಹರಿಸುತ್ತಿದ್ದೆವು. ನಿತ್ಯ ಸಂಜೆ ಟ್ಯೂಷನ್‌ ವ್ಯವಸ್ಥೆ ಮಾಡಿದ್ದೆವು. ಇಬ್ಬರು ಮಕ್ಕಳ ಸಾಧನೆ ಖುಷಿತಂದಿದೆ
–ಮಹಾಂತೇಶ ಭಜಂತ್ರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಕಲಿಕೆಗೆ ಬಡತನ ಅಡ್ಡಿಯಾಗುತ್ತಲೇ ಇತ್ತು
ಬೆಳಗಾವಿಯ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ವಾಸವಿರುವ ಪ್ರಕಾಶ ಲಗಮಣ್ಣ ಬೀರನೋಳಿ ಶೇ.88 ಅಂಕಗಳೊಂದಿಗೆ ಪಿಯು ಕಲಾ ವಿಭಾಗದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಲಿಂಗರಾಜ ಪಿಯು ಕಾಲೇಜಿನಲ್ಲಿ ಓದುತ್ತಿರುವ ಅವರು ಹುಕ್ಕೇರಿ ತಾಲ್ಲೂಕಿನ ಬಸಾಪುರದವರು. ‘ನನ್ನ ತಂದೆ ಕೃಷಿಕ. ತಾಯಿ ಮೃತಪಟ್ಟಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.91 ಅಂಕ ಗಳಿಸಿದ್ದ ನನಗೆ ಹೆಚ್ಚಿನ ವಿದ್ಯಾಭ್ಯಾಸದ ಆಸೆಯಿತ್ತು. ಆದರೆ ಇಡೀ ಕುಟುಂಬಕ್ಕೆ ಆಸರೆಯಾಗಿದ್ದು ಹತ್ತೇ ಗುಂಟೆ ಜಮೀನು. ಕಲಿಕೆಗೆ ಬಡತನ ಅಡ್ಡಿಯಾಗುತ್ತಲೇ ಇತ್ತು. ಹಾಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ರ ಮಾಹಿತಿ ಪಡೆದು ಬಾಲಕರ ಬಾಲಮಂದಿರಕ್ಕೆ ಬಂದೆ. ಇಲ್ಲಿ ಪ್ರವೇಶ ಸಿಕ್ಕಿದ್ದರಿಂದ ಓದಿಗೆ ಅನುಕೂಲವಾಯಿತು’ ಎಂದರು. ‘ನನ್ನ ಶೈಕ್ಷಣಿಕ ವೆಚ್ಚ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಸರ್ಕಾರದವರೇ ಮಾಡಿದ್ದಾರೆ. ಎಲ್ಲರ ಪ್ರೇರೇಪಣೆಯಿಂದ ಅಂದುಕೊಂಡ ಕನಸು ಸಾಕಾರವಾಗಿದೆ. ನನ್ನ ತಂದೆ ಉಪನ್ಯಾಸಕರು ಮತ್ತು ಸರ್ಕಾರಿ ಬಾಲಮಂದಿರದವರಿಗೆ ಈ ಸಾಧನೆ ಅರ್ಪಿಸುವೆ’ ಎಂದು ತಿಳಿಸಿದರು. ‘ನಿತ್ಯ ಬೆಳಿಗ್ಗೆ 6ಕ್ಕೆ ಎದ್ದರೆ ರಾತ್ರಿಯವರೆಗೆ ಸಿಕ್ಕ ಸಮಯವನ್ನೆಲ್ಲ ಅಧ್ಯಯನಕ್ಕೆ ಮೀಸಲಿಡುತ್ತಿದ್ದೆ. ಪರೀಕ್ಷೆ ಸಮೀಪಿಸಿದಾಗ ನಿತ್ಯ ಬೆಳಿಗ್ಗೆ 4ಕ್ಕೆ ಎದ್ದು ತಯಾರಿ ನಡೆಸುತ್ತಿದ್ದೆ’ ಎನ್ನುವ ಅವರು ಕನ್ನಡದಲ್ಲಿ 97 ಇಂಗ್ಲಿಷ್‌ನಲ್ಲಿ 62 ಇತಿಹಾಸದಲ್ಲಿ 93 ಅರ್ಥಶಾಸ್ತ್ರದಲ್ಲಿ 89 ಭೂಗೋಳದಲ್ಲಿ 93 ರಾಜ್ಯಶಾಸ್ತ್ರದಲ್ಲಿ 94 ಅಂಕ ಪಡೆದಿದ್ದಾರೆ. ಬಿ.ಎ ಕೋರ್ಸ್‌ಗೆ ಪ್ರವೇಶ ಪಡೆದು ಪೊಲೀಸ್‌ ಅಧಿಕಾರಿಯಾಗಬೇಕೆಂಬ ಕನಸು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT