ಗುರುವಾರ , ಅಕ್ಟೋಬರ್ 6, 2022
26 °C
ಆಕರ್ಷಿಸುವ ಮೌಲಿಕ ವಸ್ತುಗಳ ಸಂಗ್ರಹ

PV Web Exclusive| ಬೆಳಗಾವಿಯಲ್ಲೊಂದು ಪೊಲೀಸ್ ಮ್ಯೂಸಿಯಂ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನೀವು ಹಲವು ರೀತಿಯ ಮ್ಯೂಸಿಯಂಗಳನ್ನು ನೋಡಿರಬಹುದು. ಆದರೆ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ಮ್ಯೂಸಿಯಂ ವೀಕ್ಷಿಸಬೇಕಾದರೆ ನಗರದ ಪೊಲೀಸ್ ಕೇಂದ್ರಸ್ಥಾನಕ್ಕೆ ಬರಬೇಕು. ಇಲ್ಲಿ ಆಕರ್ಷಕವಾಗಿ ವಸ್ತುಸಂಗ್ರಹಾಲಯವೊಂದನ್ನು ರೂಪಿಸಲಾಗಿದೆ. ಪೊಲೀಸರ ಕಾರ್ಯದಲ್ಲಿ ನೆರವಾಗುವ ವಸ್ತುಗಳನ್ನು ಒಪ್ಪವಾಗಿ ಪ್ರದರ್ಶಿಸಲಾಗಿದೆ.

ಹಿಂದೆ ಪೊಲೀಸಿಂಗ್ ಯಾವ ರೀತಿ ಇತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅವರು ಬಳಸುತ್ತಿದ್ದ ವಸ್ತುಗಳು ಹೇಗಿದ್ದವು ಎನ್ನುವುದನ್ನು ಈಗಿನ ಹಾಗೂ ಮುಂದಿನ‌ ಪೀಳಿಗೆಗೂ ತಲುಪಿಸುವ ಉದ್ದೇಶದಿಂದ ಸಂಗ್ರಹಿಸಲಾಗಿದೆ. ಪರಂಪರೆ ಹಾಗೂ ಇತಿಹಾಸ ತಿಳಿಸಲು ಪ್ರಯತ್ನಿಸಲಾಗಿದೆ.

ಎರಡು ತೋಪುಗಳು ಮತ್ತು ಗ್ರನೈಡ್‌ಗಳು ಇತಿಹಾಸವನ್ನು ಸಾರಿ ಹೇಳುತ್ತಿವೆ. ಹಾಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಪರಿಕಲ್ಪನೆಯಲ್ಲಿ ಸಿದ್ಧವಾಗಿರುವ ಈ ಮ್ಯೂಸಿಯಂನಲ್ಲಿ, ಜಿಲ್ಲೆಯಾದ್ಯಂತ ಬಳಕೆಯಲ್ಲಿದ್ದ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ. ಇಲಾಖೆಯು ಈಗ ಆಧುನಿಕ ಸಾಮಗ್ರಿಗಳನ್ನು ಬಳಸುತ್ತಿದೆ. ಹಿಂದೆ ಎಂತಹ ಸಾಮಗ್ರಿಗಳು ಬಳಕೆಯಲ್ಲಿದ್ದವು ಎನ್ನುವುದು ಈ ಮ್ಯೂಸಿಯಂನಲ್ಲಿ ಒಂದೇ ಸೂರಿನಲ್ಲಿ ಅನಾವರಣಗೊಂಡಿದೆ.


ಬೆಳಗಾವಿಯ ಪೊಲೀಸ್ ಮ್ಯೂಸಿಯಂನಲ್ಲಿರುವ ಪರಿಕರಗಳು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಗ್ರನೈಡ್‌ಗಳು:

200ಕ್ಕೂ ಹೆಚ್ಚಿನ ಗ್ರನೈಡ್‌ಗನ್ನು ಪ್ರದರ್ಶಿಸಲಾಗಿದೆ. ನಂ.36 ಗ್ರನೈಡ್‌ಗಳವು. ಅವುಗಳ ತಾಂತ್ರಿಕ ಮಾಹಿತಿಯನ್ನೂ ಚಿತ್ರಸಹಿತ ನೀಡಲಾಗಿದೆ. ಅವುಗಳನ್ನು ಬಳಸಿ ‘ಕೆಎಸ್‌ಪಿ’ ಅಂದರೆ ಕರ್ನಾಟಕ ರಾಜ್ಯ ಪೊಲೀಸ್ ಎಂದು ಜೋಡಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಈವರೆಗೆ ಎಸ್ಪಿಗಳಾಗಿ ಕೆಲಸ ಮಾಡಿದವರ ಫೋಟೊ ಮಾಹಿತಿಯನ್ನೂ ಹಾಕಲಾಗಿದೆ. ಹಳೆಯ ಬೇಡಿಗಳು, ಗಲಾಟೆಗಳ ಸಂದರ್ಭದಲ್ಲಿ ರಕ್ಷಣೆಗೆ ಹಾಕಿಕೊಳ್ಳುತ್ತಿದ್ದ ಪರಿಕರಗಳನ್ನು ಜೋಪಾನ ಮಾಡಲಾಗಿದೆ. ನೋಡುಗರನ್ನು ಅಂದಿನ ಕಾಲಕ್ಕೆ ಕರೆದೊಯ್ಯುತ್ತವೆ.

ಜಿಲ್ಲೆಯ ಪೊಲೀಸರು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದ ಪದಕ, ಪಾರಿತೋಷಕಗಳನ್ನು ಶೋಕೇಸ್‌ನಲ್ಲಿ ಸಂಗ್ರಹಿಸಲಾಗಿದೆ. ಇವುಗಳು ಪೊಲೀಸರ ಕ್ರೀಡಾ ಸಾಧನೆಯನ್ನು ತಿಳಿಸುತ್ತಿವೆ.

ಇಲಾಖೆಗೆ ಸೇರಿದ 2 ಗ್ರಾಮಾಫೋನ್‌ಗಳನ್ನು ಸಂರಕ್ಷಿಸಿಡಲಾಗಿದೆ. ರೌಂಡ್ಸ್ ಪೌಚ್, ರೈಫಲ್ ಸ್ವಚ್ಛ ಮಾಡುವ ಸಾಮಗ್ರಿಗಳು, ಬಂಡಲ್ ವೇರ್, ಹಳೆಯ ವಾದ್ಯ ವೃಂದದ ಉಪಕರಣಗಳು, ಗಲಭೆ ನಿಗ್ರಹಕ್ಕೆ ಬಳಸುವ ಹಳೆಯ ಮತ್ತು ಹೊಸ ಉಪಕರಣಗಳನ್ನು ಇಡಲಾಗಿದೆ. ರೈಫಲ್, ಪಿಸ್ತೂಲ್ ಮತ್ತು ಗನ್‌ಗಳ ತಾಂತ್ರಿಕ ಮಾಹಿತಿಯನ್ನು ಚಿತ್ರಗಳ ಸಮೇತ ಕಟ್ಟಿಕೊಡಲಾಗಿದೆ.

ಪ್ರಕರಣಗಳ ತನಿಖೆಗಾಗಿ ಬಳಸುತ್ತಿದ್ದ ಕಿಟ್‌ ಹಾಗೂ ಅದು ಒಳಗೊಂಡಿರುವ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ವಿದ್ವಂಸಕ ಕೃತ್ಯ ತಪಾಸಣೆ ಉಪಕರಣಳು ಗಮನಸೆಳೆಯುತ್ತವೆ.


ಬೆಳಗಾವಿಯ ಪೊಲೀಸ್ ಮ್ಯೂಸಿಯಂನಲ್ಲಿರುವ ಗ್ರನೈಡ್‌ಗಳ ಸಂಗ್ರಹ ಮತ್ತು ಒಳನೋಟ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಮಾಹಿತಿ ಒದಗಿಸುವುದಕ್ಕಾಗಿ:

‘ಶಾಲಾ–ಕಾಲೇಜುಗಳ ಮಕ್ಕಳು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಇದರ ಉದ್ದೇಶವಾಗಿದೆ. ಪೊಲೀಸ್ ಇಲಾಖೆಯಲ್ಲಿ ಹಿಂದೆ ಬಳಸಲಾಗುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಒಂದೇ ಸೂರಿನಲ್ಲಿ ಪ್ರದರ್ಶಿಸಿರುವುದು ರಾಜ್ಯದಲ್ಲಿಯೇ ವಿಶೇಷ ಪ್ರಯತ್ನವಾಗಿದೆ. ರಾಜ್ಯದಲ್ಲಿಯೇ ಮೊದಲ ಪೊಲೀಸ್ ಮ್ಯೂಸಿಯಂ ಇದಾಗಿದೆ’ ಎನ್ನುತ್ತಾರೆ ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತು ಅಧಿಕಾರಿಗಳು.

ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಶೀಘ್ರವೇ ದೊರೆಯಲಿದೆ. ಕುತೂಹಲದಿಂದ ಬಂದವರಿಗೆ ವೀಕ್ಷಣೆಗೆ ಅವಕಾಶ ಕೊಡಲಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ಅನುವು ಮಾಡಿಕೊಡಲಾಗುತ್ತದೆ ಎನ್ನುತ್ತಾರೆ ಅವರು.

ಸರ್ಕಾರವು ಪೊಲೀಸರಿಗೆ ನೀಡುವ ಕರ್ನಾಟಕ ಪೊಲೀಸ್ ವಿದ್ಯಾನಿಧಿ ಯೋಜನೆ, ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ಯೋಜನೆಗಳು, ಪೊಲೀಸ್ ಪಬ್ಲಿಕ್ ಶಾಲೆಗಳು, ಪೊಲೀಸ್ ಕಲ್ಯಾಣ ಚಟುವಟಿಕೆಗಳು ಮೊದಲಾದವುಗಳ ಮಾಹಿತಿಯೂ ಇಲ್ಲಿದೆ. ಪೊಲೀಸ್ ಮಹಾನಿರ್ದೇಶಕರಾಗಿ ಕೆಲಸ ಮಾಡಿದವರ ಫೋಟೊ, ಹೆಸರು ಮತ್ತಿತರ ಮಾಹಿತಿ ಪ್ರದರ್ಶಿಸಲಾಗಿದೆ. ಮತ್ತಷ್ಟು ವಿಶೇಷ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶ ಅಧಿಕಾರಿಗಳದ್ದಾಗಿದೆ. ಬೆಳಗಾವಿಗೆ ಬಂದವರು ವೀಕ್ಷಿಸಬಹುದಾದ ತಾಣಗಳಿಗೆ ಈ ಮ್ಯೂಸಿಯಂ ಹೊಸ ಸೇರ್ಪಡೆಯಾಗಿದೆ.


ಬೆಳಗಾವಿಯ ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ಪೊಲೀಸ್ ಮ್ಯೂಸಿಯಂ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಸಂಚಾರಿ ಕಾರ್ಯಾಗಾರ ವಾಹನ:

ಹಿಂದೆ ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಒಂದೇ ಸಂಚಾರಿ ಕಾರ್ಯಾಗಾರ ವಾಹನ ಬೆಳಗಾವಿಯಲ್ಲಿತ್ತು. 4 ದಶಕಗಳ ಹಿಂದಿನ ಈ ವಾಹನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ.

ಇಲಾಖೆಗೆ ಸೇರಿದ ಜೀಪ್‌ ಮೊದಲಾದ ವಾಹನಗಳು ಕೆಟ್ಟರೆ ಈ ವಾಹನದಲ್ಲಿ ಮೆಕ್ಯಾನಿಕಲ್‌ಗಳು ತೆರಳಿ ದುರಸ್ತಿ ಮಾಡುತ್ತಿದ್ದರು. ಆ ವಾಹನವನ್ನು ಮ್ಯೂಸಿಯಂ ಆವರಣದಲ್ಲಿ ಪ್ರದರ್ಶಿಸಲಾಗಿದೆ. 1972ರ ಏ.9ರಂದು ಖರೀದಿಸಲಾದ ಈ ವಾಹನವು 2,89,179 ಕಿ.ಮೀ. ಸಂಚರಿಸಿದೆ. ಇಲಾಖೆಯ ವಾಹನಗಳ ದುರಸ್ತಿ ಕಾರ್ಯದಲ್ಲಿ ದೊಡ್ಡ ಕೊಡುಗೆ ನೀಡಿದೆ. ಹೀಗಾಗಿ, ಅದನ್ನು ಗೌರವಪೂರ್ವಕವಾಗಿ ಪ್ರದರ್ಶಿಸಲಾಗಿದೆ. ಅದರ ಮಹತ್ವವನ್ನು ತಿಳಿಸುವ ಕಾರ್ಯ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.