ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜನರ ಆತಂಕ ನಿವಾರಣೆಯೆ ಸವಾಲು

ಕ್ವಾರಂಟೈನ್‌ ಕೇಂದ್ರ ಮಾಡಲು ಸ್ಥಳೀಯರಿಂದ ವಿರೋಧ
Last Updated 19 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮಾರಕ ಕೊರೊನಾ ವೈರಾಣು ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅವರ ಸಂಪರ್ಕಕ್ಕೆ ಬಂದವರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿ (ನಿಗಾ ವ್ಯವಸ್ಥೆ) ಇರಿಸಲು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ.

ಇಲ್ಲಿ ಕ್ವಾರಂಟೈನ್ ಮಾಡುವುದರಿಂದ ತಮಗೂ ಸೋಂಕು ತಗುಲಬಹುದು ಎಂಬ ಆತಂಕದಿಂದಾಗಿ ಜನರು ತಕರಾರು ತೆಗೆಯುತ್ತಿದ್ದಾರೆ. ವೈರಸ್ ಹರಡುವ ಭೀತಿಯ ನಡುವೆಯೂ ಅಂತರವನ್ನು ಮರೆತು ತಮ್ಮ ಪರಿಸರ ಸಂರಕ್ಷಣೆ ಉದ್ದೇಶದಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ಜಿಲ್ಲೆಯ ಹಲವು ಕಡೆಗಳಲ್ಲಿ ನಿತ್ಯವೂ ವರದಿಯಾಗುತ್ತಿವೆ. ಅಂಥವರ ಮನವೊಲಿಸುವುದಕ್ಕೆ ಅಧಿಕಾರಿಗಳು ಸುಸ್ತಾಗುತ್ತಿದ್ದಾರೆ. ಕೆಲವಡೆ, ಪೊಲೀಸ್ ಬಲ ಪ್ರಯೋಗಿಸಿ ಬಳಿಕ ಮನವೊಲಿಕೆ ಮಾಡಿದ ಪ್ರಸಂಗಗಳೂ ಕಂಡುಬಂದಿವೆ.

ವಿವಿಧೆಡೆ:ಕ್ವಾರಂಟೈನ್‌ಗಾಗಿ ಸಾಮಾನ್ಯವಾಗಿ ಹೋಟೆಲ್‌ಗಳು, ಲಾಡ್ಜ್‌ಗಳು, ವಸತಿನಿಲಯ ಅಥವಾ ಸರ್ಕಾರಿ ಶಾಲೆಗಳನ್ನು ಗುರುತಿಸಲಾಗುತ್ತಿದೆ. ಆ ಪ್ರದೇಶದಲ್ಲಿನ ಜನರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ‘ನಮ್ಮಲ್ಲೇ ಏಕೆ, ಬೇರೆ ಕಡೆ ಇರಿಸಿ’ ಎಂದು ಒತ್ತಾಯಿಸುತ್ತಿದ್ದಾರೆ. ಜನರಲ್ಲಿನ ಆತಂಕ ನಿವಾರಣೆಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ತಿಳಿವಳಿಕೆ ಮೂಡಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಶನಿವಾರದವರೆಗೆ 42 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಒಂದು ಸಾವು ಕೂಡ ಸಂಭವಿಸಿದೆ. ನೂರಾರು ಮಂದಿಯ ಮೇಲೆ ನಿಗಾ ವಹಿಸಲಾಗಿದೆ. ನೂರಾರು ಮಂದಿಯನ್ನು ಮನೆಗಳಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ಬರುವುದು ಇನ್ನೂ ಬಹಳಷ್ಟಿದೆ. ಹೀಗಾಗಿ, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಆತಂಕ ಹೆಚ್ಚಿಸಿದೆ. ಪರಿಣಾಮ, ತಮ್ಮ ಪರಿಸರದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡುವುದಕ್ಕೆ ಸ್ಥಳೀಯರು ವಿರೋಧ ದಾಖಲಿಸುತ್ತಿದ್ದಾರೆ.

ನಗರದಲ್ಲಿ ಹೋಟೆಲ್‌ಗಳಲ್ಲಿ:ಕೆಲವೆಡೆ ವಿರೋಧದ ನಡುವೆಯೂ, ನಗರದ ವಿವಿಧೆಡೆಯ 9 ಹೋಟೆಲ್‌ಗಳನ್ನು ಕ್ವಾರಂಟೈನ್‌ಗೆ ಬಳಸಲಾಗಿದೆ. ಇಲ್ಲಿ, 234 ಮಂದಿಯನ್ನು ಇರಿಸಲಾಗಿದೆ. ಈ ಕೇಂದ್ರಗಳತ್ತ ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಾಗಿದೆ.

ಭಾನುವಾರ ಇಲ್ಲಿನ ಬಾಂದೂರ್ ಗಲ್ಲಿ ಹಾಗೂ ಪಾಟೀಲ ಗಲ್ಲಿ ನಿವಾಸಿಗಳು ಕ್ವಾರಂಟೈನ್‌ ವಿರೋಧಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.

‘ಕ್ವಾರಂಟೈನ್ ವಿಷಯದಲ್ಲಿ ಆತಂಕಕ್ಕೆ ಒಳಗಾಗುವ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅವರ ಸಂಪರ್ಕದಲ್ಲಿದ್ದವರನ್ನು ಮಾತ್ರ ಹಲವು ಕಡೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದಕ್ಕಾಗಿ ಹೋಟೆಲ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕ್ವಾರಂಟೈನ್ ಮಾಡಿದವರಿಗೆ ಸೋಂಕು ಇರುತ್ತದೆ ಎಂದು ಭಾವಿಸಬಾರದು. ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT