ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಮ್ಮನ ಗುಡ್ಡಕ್ಕೆ ರೈಲ್ವೆ ಮಾರ್ಗ

ಏತ ನೀರಾವರಿ ಜಾರಿ: ಸಂಸದ ಜಗದೀಶ ಶೆಟ್ಟರ್ ಭರವಸೆ
Published 11 ಜುಲೈ 2024, 7:05 IST
Last Updated 11 ಜುಲೈ 2024, 7:05 IST
ಅಕ್ಷರ ಗಾತ್ರ

ಸವದತ್ತಿ: ‘ಲಕ್ಷಾಂತರ ಭಕ್ತರು ಭೇಟಿ ನೀಡುವ ಯಲ್ಲಮ್ಮ ದೇವಸ್ಥಾನಕ್ಕೆ ರೈಲ್ವೆ ಮಾರ್ಗ ಯೋಜನೆ ಹಾಗೂ ಈ ಭಾಗದಕ್ಕೆ ಏತ ನೀರಾವರಿ ಜಾರಿ ತಂದು ಜನತೆಗೆ ಅನುಕೂಲ ಕಲ್ಪಿಸಲು ಶ್ರಮ ವಹಿಸುವೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕ್ಷೇತ್ರದ ಜನತೆ ಮತ್ತು ಭಕ್ತಾದಿಗಳ ಬಹುದಿನದ ಬೇಡಿಕೆಯಾದ ರೈಲ್ವೆ ಮಾರ್ಗ ಕುರಿತು ಕೇಂದ್ರದ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಇಲಾಖೆಯ ನುರಿತ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಿ ಯೋಜನೆ ರೂಪಿಸಲು ಸೂಚಿಸಲಾಗಿದೆ. ಹಿಂದಿನ ಸಂಸದೆ ಮಂಗಳಾ ಅಂಗಡಿ ಕೇಂದ್ರದಿಂದ ₹11 ಕೋಟಿ ಅನುದಾನ ನೀಡಿದ್ದಾರೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ಟೆಂಡರ್ ಕರೆಯಲು ಸೂಚಿಸಲಾಗಿದೆ’ ಎಂದರು.

‘ಕಳಸಾ-ಬಂಡೂರಿ, ಮಹದಾಯಿ ತಿರುವು ಕುರಿತು ಚರ್ಚಿಸಲಾಗಿದೆ. ಕರ್ನಾಟಕಕ್ಕೆ 13 ಟಿಎಂಸಿ ಅಡಿ ನೀರು ಹಂಚಿಕೆಗೆ ಆದೇಶಿಸಲಾಗಿದೆ. ಈಚೆಗೆ ತಂಡವೊಂದು ವೀಕ್ಷಿಸಿ ರಾಜ್ಯದ ಪರ ವರದಿ ನೀಡಿದೆ’ ಎಂದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜನರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗೆ ಸ್ಪಂದಿಸುತ್ತೇನೆ. ತಾಲ್ಲೂಕಿನ ಎಲ್ಲ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು’ ಎಂದರು.

ಅಧಿಕಾರ ಇಲ್ಲವೆಂದು ಚಿಂತಿಸದಿರಿ: ‘ಕಾರ್ಯಕರ್ತರು ಅಧಿಕಾರವಿಲ್ಲವೆಂದು ಚಿಂತಿಸದಿರಿ. ನೀವೇ ಮುಂದಾಳತ್ವ ವಹಿಸಿ ಜನ ಪರ ಹೋರಾಟ ನಡೆಸಿ. ಮುಂದಿನ ಜಿಲ್ಲಾ ಪಂಚಾಯ್ತಿ‌, ತಾಲ್ಲೂಕು ಪಂಚಾಯ್ತಿ ಸೇರಿ ಎಲ್ಲ ಚುನಾವಣೆಗಳಲ್ಲೂ ಪಕ್ಷವನ್ನು ಅಧಿಕಾರಕ್ಕೇರಿಸಲು ಶ್ರಮಿಸಿರಿ’ ಎಂದರು.

‘ಮುಡಾ ಮತ್ತು ವಾಲ್ಮೀಕಿ ನಿಗಮ ಸೇರಿದಂತೆ ಕಾಂಗ್ರೆಸ್ ಸರಕಾರ ಹಗರಣಗಳ ಸುಳಿಯಲ್ಲಿ ಸಿಲುಕಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಹಿಂದಿನ ಬಿಜೆಪಿ ಸರ್ಕಾರದ ಕಾಮಗಾರಿಗಳು ಚಾಲ್ತಿಯಲ್ಲಿವೆ. ರಾಜ್ಯದಲ್ಲಿ ಅಭಿವೃದ್ಧಿಯೇ ಕೇಳುವಂತಿಲ್ಲ. ಹಣ ಮತ್ತು ಅಧಿಕಾರದ ದುರಪಯೋಗ ಮಾಡಿಕೊಂಡು ಚುನಾವಣೆಗೆ ಗೆಲ್ಲಲೆತ್ನಿಸಿದವರಿಗೆ ಜನತೆ ತಕ್ಕ ಉತ್ತರ ನೀಡಿದ್ದಾರೆ. ಈ ಎಲ್ಲ ಸನ್ನಿವೇಶ ಗಮನಿಸಿದರೆ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲದಾಗಿದೆ’ ಎಂದರು.

ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ‘ಕೆಲ ನ್ಯೂನತೆಗಳಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಈ ನ್ಯೂನತೆ ಸರಿಪಡಿಸಲು ಪ್ರಯತ್ನಿಸಲಾಗುವುದು’ ಎಂದರು.

‘ಸತ್ತಿಗೇರಿ ಏತ ನೀರಾವರಿ ಹಾಗೂ ಕಳಸಾ-ಬಂಡೂರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಇದರಿಂದ ಈ ಭಾಗದ ಎಲ್ಲ ರೈತರಿಗೆ ಅನುಕೂಲವಾಗಲಿದೆ. ಸಿಂಗಾರಗೊಪ್ಪ ಸೇರಿ ತಾಲ್ಲೂಕಿನ ಎಲ್ಲ ಜಾಕ್‌ವೆಲ್‌ನಲ್ಲಿ ಹಳೆಯದಾದ ಪಂಪಸೆಟ್‌ಗಳಿವೆ. ಇವುಗಳ ಪುನರುಜ್ಜೀವನಗೊಳಿಸಬೇಕಿದೆ. ಧಾರವಾಡ-ಸವದತ್ತಿ ಹೆದ್ದಾರಿ ನಿರ್ವಹಣೆ ಕೊರತೆ ಇದೆ’ ಎಂದು ಸಂಸದರ ಗಮನಕ್ಕೆ ತಂದರು.

ಹನಮಂತ ನಿರಾಣಿ, ಮಹಾಂತೇಶ ಕವಟಗಿಮಠ, ಪ್ರದೀಪ ಶೆಟ್ಟರ್, ಶಂಕರ ಮಾಡಲಗಿ, ಸುಭಾಷ ಪಾಟೀಲ, ವಿರುಪಾಕ್ಷ ಹನಸಿ, ಎಫ್.ಎಸ್. ಸಿದ್ದನಗೌಡರ, ವೈ.ವೈ. ಕಾಳಪ್ಪನವರ, ಬಸವರಾಜ ಹನಸಿ, ಈರಣ್ಣ ಚಂದರಗಿ, ರತ್ನಾ ಮಾಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT