ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಮುಂದುವರಿದ ಮಳೆ: ಜನಜೀವನ ಅಸ್ತವ್ಯಸ್ತ

ತರಕಾರಿ ಬೆಳೆಗೆ ಹಾನಿ, ಸುಣಧೋಳಿ ಸೇತುವೆ ಮುಳುಗಡೆ
Last Updated 20 ಮೇ 2022, 10:26 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ‌ಜಿಲ್ಲೆಯ ಬಹುತೇಕ‌ ಕಡೆಗಳಲ್ಲಿ ‌ಜಿಟಿಜಿಟಿ‌ ಮಳೆ ಮುಂದುವರಿದಿದೆ. ಆಗಾಗ ಜೋರಾಗಿ‌ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಗುರುವಾರ ರಾತ್ರಿಯಿಂದಲೂ ವರ್ಷಧಾರೆ ಮುಂದುವರಿದಿದೆ. ಮೂಡಲಗಿ ತಾಲ್ಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಪರಿಣಾಮ, ಮೂಡಲಗಿ- ಸುಣದೋಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಕೆಳಹಂತದ ಸೇತುವೆ ಇದಾಗಿದ್ದು, ಅದರ ಮೇಲೆಯೇ ಅಪಾಯ ಲೆಕ್ಕಿಸದೆ ಜನರು ಸಂಚರಿಸುತ್ತಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ತೀರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ತಡರಾತ್ರಿ ಮಳೆಯಿಂದಾಗಿ ಮುಗಳಖೋಡದಲ್ಲಿ ಅವಾಂತರ ಸೃಷ್ಟಿಯಾಗಿದೆ. ಮೋಹನ ಲಮಾಣಿ ಎನ್ನುವವರ ಸೃಷ್ಟಿ ಸ್ವೀಟ್ ಮಾರ್ಟ್ ಅಂಗಡಿಗೆ ನೀರು ನುಗ್ತಿತ್ತು. ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸದಿದ್ದಕ್ಕೆ ಪುರಸಭೆ ಅಧಿಕಾರಿಗಳ ವಿರುದ್ಧ ವಿಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಕೊಣ್ಣೂರು–ಘೋಡಗೇರಿ ರಸ್ತೆ ಕಾಲುವೆಯಂತಾಗಿತ್ತು. ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿದ್ದರಿಂದ ಅವಾಂತರ ಸೃಷ್ಟಿಯಾಗಿತ್ತು. ಅಲ್ಲಿ ಸಂಚರಿಸಲು ಜನರು ಹರಸಾಹಸ ಪಟ್ಟರು. ನಿರ್ಮಾಣ ಹಂತದಲ್ಲಿರುವ ಕೆಳಸೇತುವೆಯಲ್ಲಿಯಲ್ಲಿ ನೀರು ಸಂಗ್ರಹವಾಗಿತ್ತು.

ಶಾಸಕರಿಂದ ಪರಿಶೀಲನೆ

ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ‌ ಮುಂಜಾನೆ ವಿವಿಧೆಡೆ ಸಂಚರಿಸಿ ಪರಿಸ್ಥಿತಿಯನ್ನು ‌ಪರಿಶೀಲಿಸಿದರು. ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದರು. ‘ಕೆಲವೆಡೆ‌ ರಸ್ತೆಗಳಲ್ಲಿ ನೀರು‌ ಸಂಗ್ರಹವಾಗಿದೆ. ಮನೆಗಳಿಗೆ ನೀರು ನುಗ್ಗಿಲ್ಲ. ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಕರಿಯಪ್ಪ ಕಾಲೊನಿ, ಪರಿಶಿಷ್ಟರ ಕಾಲೊನಿ, ಮರಾಠಾ ಕಾಲೋನಿ, ಗಾಂಧಿ ಕಾಲೊನಿ, ಶಾಸ್ತ್ರಿನಗರ, ಜಕ್ಕೇರಿ ಹೊಂಡ, ಸಾಯಿ ನೇಕಾರ ಕಾಲೊನಿ ಹಾಗೂ ಮಹಾದ್ವಾರ ರಸ್ತೆ ಪ್ರದೇಶದಲ್ಲಿ ಸಂಚರಿಸಿದರು. ಮಹಾದ್ವಾರ ರಸ್ತೆ 1ನೇ ಕ್ರಾಸ್‌ನಲ್ಲಿ ನೀರು ಸಂಗ್ರಹವಾಗಿತ್ತು. ಸಾಯಿ ನೇಕಾರ ಕಾಲೊನಿ ಪರಿಸರದಲ್ಲಿ ಕೆರೆಯ ನೀರು ರಸ್ತೆಯ ಮೇಲೆ ಬಂದಿದ್ದರಿಂದ, ಆ ಭಾಗದ 6 ಮನೆಗಳ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಅದನ್ನು ಬಿಟ್ಟರೆ ಯಾವುದೇ ದೊಡ್ಡ ಸಮಸ್ಯೆಗಳು ಎದುರಾಗಿಲ್ಲ’ ಎಂದು ಹೇಳಿದರು.

ಮುಖಂಡರಾದ ನಂದು ಮಿರಜಕರ, ರಾಜು ಭಾತಖಾಂಡೆ, ಆನಂದ ಚವ್ಹಾಣ, ಜಯಂತ ಜಾಧವ, ಭಾಗವತ, ನೀತಿನ ಘೋಡ್ಸೆ ಹಾಗೂ ನಗರಪಾಲಿಕೆ ಅಧಿಕಾರಿಗಳು ಇದ್ದರು.

ಗಾಂಧಿ ನಗರ ಸಮೀಪದಲ್ಲಿ ಸರ್ವಿಸ್ ರಸ್ತೆ ಕಾಲುವೆಯಂತಾಗಿತ್ತು. ಹಣ್ಣಿನ ಮಾರುಕಟ್ಟೆ ಆವರಣದಲ್ಲಿ ನೀರು ಸಂಗ್ರವಾಗಿ ಕೆರೆಯಂತಾಗಿತ್ತು.

ತರಕಾರಿ ಬೆಳೆಗಳಿಗೆ ಹಾನಿ

ತಾಲ್ಲೂಕಿನ ವಿವಿಧೆಡೆ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಮುಂಗಾರು ಹಂಗಾಮಿಗೆ ಹದಗೊಳಿಸಿದ್ದ ಕೃಷಿ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ವಡಗಾವಿ, ಹಳೆಬೆಳಗಾವಿ, ಹಲಗಾ, ಮಚ್ಛೆ, ಯಳ್ಳೂರ, ಬಸವನಕುಡಚಿ, ಕಡೋಲಿ, ಉಚಗಾಂವ ಮೊದಲಾದ ಕಡೆಗಳಲ್ಲಿ ರೈತರು ಬೆಳೆದಿದ್ದ ಮೆಣಸಿನಕಾಯಿ, ಟೊಮೊಟೊ, ಕೊತ್ತಂಬರಿ ಮೊದಲಾದ ತರಕಾರಿ ಬೆಳೆಗಳು ಜಲಾವೃತವಾಗಿ ಹಾನಿ ಸಂಭವಿಸಿದೆ.

‘ಎಕರೆಗೆ ಕನಿಷ್ಠ ₹ 50ಸಾವಿರ ನಷ್ಟ ಸಂಭವಿಸಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ಕಲ್ಪಿಸಬೇಕು’ ಎಂದು ರೈತ ಮುಖಂಡ ರಾಜು ಮರ್ವೆ ಮೊದಲಾದವರು ಒತ್ತಾಯಿಸಿದ್ದಾರೆ.

ಅಧಿಕಾಗಳಿಗೆ ಸಚಿವರ ಸೂಚನೆ

‘ಮಳೆ ಮತ್ತು ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಚುರುಕಾಗಿ ಕಾರ್ಯತತ್ಪರರಾಗಬೇಕು. ಅವಶ್ಯ ಕ್ರಮಗಳನ್ನು ದೈನಿಂದಿನ ಆಧಾರದ ಮೇಲೆ ಕೈಗೊಂಡು ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಜಿಲ್ಲೆಯಲ್ಲಿ 2–3 ದಿನಗಳಿಂದ ಸತತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮೇ 19ರಂದು ಜಿಲ್ಲೆಯಲ್ಲಿ ಸರಾಸರಿ 10 ಸೆಂ.ಮೀ. ಮಳೇಯಾಗಿದೆ. 3–4 ದಿನಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಸನ್ನದ್ಧವಾಗಿರಬೇಕು. ದಿನದ 24 ಗಂಟೆಯೂ ಸ್ಪಂದಿಸಬೇಕು. ಪರಿಹಾರ ಕಾರ್ಯ ಅಗತ್ಯವಿದ್ದಲ್ಲಿ ತುರ್ತಾಗಿ ಕೈಗೊಳ್ಳಬೇಕು’ ಎಂದು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT