ಮಂಗಳವಾರ, ಜನವರಿ 25, 2022
24 °C
ಲಿಂಗಾಯತ ಕಾರ್ಡ್‌ ಬಳಸಿ ನನ್ನ ವಿರುದ್ಧ ವ್ಯವಸ್ಥಿತ ಸಂಚು: ಲಕ್ಷ್ಮಿಗೆ ರಮೇಶ ತಿರುಗೇಟು

ಒಂದೇ ವೇದಿಕೆಯಲ್ಲಿ ರಮೇಶ, ಲಖನ್ ಜಾರಕಿಹೊಳಿ ಪ್ರತ್ಯೇಕವಾಗಿ ಪ್ರಚಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನನ್ನ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ. ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದ್ದೇನೆ ಎಂದು ಹಬ್ಬಿಸುತ್ತಿದ್ದಾರೆ’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೆಸರು ಹೇಳದೆ ಟೀಕಿಸಿದರು.

ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ‘ಜಾರಕಿಹೊಳಿ ಕುಟುಂಬದ ಬೆಂಬಲಿಗರು’ ದೇಸಾಯಿ ಗಲ್ಲಿಯಲ್ಲಿ ಶನಿವಾರ ಆಯೋಜಿಸಿದ್ದ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಬಿಜೆಪಿಯ ಮಹಾಂತೇಶ ಕವಟಗಿಮಠ ಪರ ಮತ ಕೇಳಲು ಬಂದಿದ್ದೇನೆ. 2ನೇ ಅಭ್ಯರ್ಥಿ ಬೆಂಬಲಿಸಲು ಚರ್ಚಿಸುವುದಕ್ಕಾಗಿ ಭಾನುವಾರ ದೆಹಲಿಗೆ ಹೋಗುತ್ತಿದ್ದೇನೆ. ವರಿಷ್ಠರಿಂದ ಅನುಮತಿ ಪಡೆದು ಬಂದು ಬುಧವಾರ ಸ್ಪಷ್ಟ ಸೂಚನೆ ಕೊಡುತ್ತೇನೆ. ಕಾಂಗ್ರೆಸ್‌ ಕೆಡವಲು ಬೇಕಾದ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದೇನೆ’ ಎಂದರು.

‘ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ಇತ್ತೀಚಿಗೆ ನಡೆದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಸತೀಶ್ ಜಾರಕಿಹೊಳಿ ಸೋಲಿಸಿ, ಲಿಂಗಾಯತ ಸಮುದಾಯದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ನಾನೇ. ಆಗ ಜಾತಿ ಎಲ್ಲಿತ್ತು? ಮೋಸಗಾರರ ಮಾತನ್ನು ಕೇಳಬೇಡಿ’ ಎಂದು ತಿಳಿಸಿದರು.

‘ಹೋದ ವಿಧಾನಸಭೆ ಚುನಾವಣೆಯಲ್ಲಿ ಅವರ (ಲಕ್ಷ್ಮಿ ಹೆಬ್ಬಾಳಕರ) ಪರವಾಗಿ ಇಲ್ಲಿಗೆ (ಗ್ರಾಮೀಣ ಕ್ಷೇತ್ರ) ಬಂದು ಮತ ಕೇಳಿ ತಪ್ಪು ಮಾಡಿದ್ದೇನೆ. ಅದಕ್ಕಾಗಿ ಜನರ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಿರುತ್ತೇನೆ;’ ಎಂದು ಹೇಳಿದರು.

‘ಪಕ್ಷದ ವಿಚಾರ ಬಂದಾಗ ನಾನು ಕುಟುಂಬ ನೋಡಿಲ್ಲ. ಪಕ್ಷದ ಗೆಲುವೇ ಮುಖ್ಯ. ನಾನು ಬಸವ ತತ್ವದ ಪರಿಪಾಲಕನಾಗಿದ್ದೇನೆ. ಬಸವಣ್ಣ ಲಿಂಗಾಯತರಿಗೆ ಸೀಮಿತವಲ್ಲ. ಇಡೀ ಮಾನವ ಧರ್ಮಕ್ಕೆ ಸೇರಿದವರು. ಕೆಲವರು ಸೋಲಿನ ಭೀತಿಯಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

‘ನಮ್ಮ ಅಭ್ಯರ್ಥಿ ಕವಟಗಿಮಠ ಸ್ವಾಮಿಗಳು, ಲಿಂಗಾಯತರ ಗುರುಗಳು. ಕೆಎಲ್‌ಇ ಸಂಸ್ಥೆಯ ನಿರ್ದೇಶಕರೂ ಆಗಿದ್ದಾರೆ. ಈಗ ಲಿಂಗಾಯತ  ಕಾರ್ಡ್ ಬಳಸುತ್ತಿರುವವರ ಬಗ್ಗೆ ವಿಚಾರ ಮಾಡಿ’ ಎಂದು ಕೋರಿದರು.

‘ಲಖನ್‌ ಜಾರಕಿಹೊಳಿಯನ್ನು ನಾವು ಪಕ್ಷದಿಂದ ನಿಲ್ಲಿಸಿದ್ದೇವೆ ಎಂದು ಹಬ್ಬಿಸಿದ್ದಾರೆ. ಅವರು ನಿಂತಿದ್ದೇ ಒಳ್ಳೆಯದಾಯ್ತು. ಇಲ್ಲದಿದ್ದರೆ ಅವಿರೋಧ ಆಯ್ಕೆ ಆಗುತ್ತಿತ್ತು. ಅವರ ಸ್ಪರ್ಧೆಯಿಂದ ಪರಿಸ್ಥಿತಿ ಬದಲಾಗಿದೆ. ಒಬ್ಬರಿಗೆ ಸೊಕ್ಕು ಬಂದಾಗ ಇನ್ನೊಬ್ಬರನ್ನು ದೇವರು ಸೃಷ್ಟಿಸುತ್ತಾನೆ’ ಎಂದು ಹೆಬ್ಬಾಳಕರಗೆ ಟಾಂಗ್ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಮಾತನಾಡಿ, ‘ಲಿಂಗಾಯತನಾದ ನನ್ನನ್ನು ಡಿಸಿಸಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆ ಮಾಡಿದ ಜಾತ್ಯತೀತ ನಾಯಕ ರಮೇಶ ಜಾರಕಿಹೊಳಿ. ಅವರು ಮಹಾಂತೇಶಗೆ ಮತ ಕೇಳಲಿ, ನಾನು ಲಖನ್‌ ಜಾರಕಿಹೊಳಿ ಪರ ಪ್ರಚಾರ ಮಾಡುತ್ತೇನೆ’ ಎಂದು ರಮೇಶ ಎದುರಿನಲ್ಲೇ ಹೇಳಿದರು.

ರಮೇಶ ತೆರಳಿದ ಕೆಲ ಹೊತ್ತಿನಲ್ಲೇ ಅಲ್ಲಿಗೆ ಬಂದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ, ‘ಚುನಾವಣೆ ಬಂದಾಗ ಕಾಲಿಗೆ ಬೀಳುವವರು, ನಂತರ ಕಾಲೆಳೆಯುವವರನ್ನು ನೋಡಿದ್ದೀರಿ. ಅಭಿವೃದ್ಧಿ ಆಗಬೇಕೆಂದರೆ ಯಾರಿಗೆ ಮತ ಹಾಕಬೇಕು ಎಂದು ವಿಚಾರ ಮಾಡಿ. ವೈಯಕ್ತಿಕ ಸಮಸ್ಯೆ ಇರಲಿ ಅಥವಾ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ವಿಷಯವಿರಲಿ. ನಿಮ್ಮೊಂದಿಗೆ ಸದಾ ಇರುತ್ತೇನೆ’ ಎಂದು ಭರವಸೆ ನೀಡಿದರು.

‘ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದು ಹಬ್ಬಿಸಿದ್ದರು. ನನಗೆ ಯಾವ ಕಮಾಂಡೂ ಇಲ್ಲ. ಮತದಾರರು–ಕಾರ್ಯಕರ್ತರೇ ಹೈಕಮಾಂಡ್. ಉಹಾಪೋಹ ಹಬ್ಬಿಸುವುದನ್ನೆ ಬಂಡವಾಳ ಮಾಡಿಕೊಂಡಿರುವವರಿಗೆ ಕಿವಿಕೊಡಬೇಡಿ. ಪ್ರಥಮ ಪ್ರಾಶಸ್ತ್ಯದ ಮತ ಕೊಡಬೇಕು’ ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು