ಭಾನುವಾರ, ಮೇ 29, 2022
30 °C

ಶಾಸಕ ಸ್ಥಾನಕ್ಕೆ ಸ್ಥಳದಲ್ಲೇ ರಾಜೀನಾಮೆ ಕೊಡುತ್ತೇನೆ: ಸತೀಶ್‌ಗೆ ರಮೇಶ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ ಜಿಲ್ಲೆ): ‘ಗೋಕಾಕ ಕ್ಷೇತ್ರದಲ್ಲಿ ಸರಿಯಾದ ರಸ್ತೆಗಳಿಲ್ಲ; ಅಭಿವೃದ್ಧಿಯಾಗಿಲ್ಲ’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಕ್ಕೆ ಅಲ್ಲಿನ ಬಿಜೆಪಿ ಶಾಸಕ ರಮೇಶ ಜಾರಕಿಕೊಳಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಮಾಧ್ಯಮದವರೆಲ್ಲರೂ ಕೂಡಿ ಹೋಗೋಣ. ಸತೀಶ ಹೇಳಿದ ಸ್ಥಿತಿ ಕ್ಷೇತ್ರದಲ್ಲಿದ್ದರೆ ಸ್ಥಳದಲ್ಲೇ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಇದು ಅವರಿಗೂ ಹಾಗೂ ನಿಮಗೂ (ಮಾಧ್ಯಮದವರಿಗೂ) ಸವಾಲು’ ಎಂದು ಹೇಳಿದರು.

‘ಕಬ್ಬಿನ ಗಾಡಿಗಳು ಹೋಗುವ ಕಡೆಗಳಲ್ಲಿ ಎಲ್ಲೋ ಅರ್ಧ ಕಿ.ಮೀ. ಹಾಳಾಗಿರಬಹುದಷ್ಟೆ’ ಎಂದರು.

‘ಅಭಿವೃದ್ಧಿ ವಿಚಾ‌ರದಲ್ಲಿ ನೀವೇ ವಿಶ್ಲೇಷಣೆ ನಡೆಸಿ. ಸುಮ್ಮನೆ ಅವರು ಸುಳ್ಳು ಅಪವಾದ ಮಾಡುತ್ತಾರೆ’ ಎಂದು ಟೀಕಿಸಿದರು.

‘ಅಥಣಿ ತಾಲ್ಲೂಕಿಗೆ ನೀರಾವರಿ ಯೋಜನೆ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಬಿಟ್ಟೆ. ಆ ಪಕ್ಷದವರೊಂದಿಗೆ ಮುಖ್ಯ ಜಗಳ ಶುರುವಾಗಿದ್ದು ಅಥಣಿ ವಿಷಯದಿಂದಲೇ ಹೊರತು ಗೋಕಾಕದ ವಿಷಯಕ್ಕಲ್ಲ. ಈ ಕ್ಷೇತ್ರದ ಜನರು ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಭರವಸೆ ನಂಬಿ ಮತ ಹಾಕಿದ್ದಾರೆ. ಇನ್ನೂ ಸಮಯವಿದೆ. ಬಿಜೆಪಿಯಿಂದಲೇ ಮಾಡಿಕೊಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಅದಾಗದಿದ್ದರೆ ಮುಂದೆ ಸ್ಪರ್ಧಿಸುವುದಿಲ್ಲ

‘ಮಹೇಶ ಕುಮಠಳ್ಳಿ ಹಾಗೂ ನಾನು ಸಚಿವನಾಗುವ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ’ ಎಂದರು.

‘ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ  ಸಂಪರ್ಕದಲ್ಲಿರುವುದು ನನಗೆ ಗೊತ್ತಿಲ್ಲ. ಈಚೆಗೆ ಉಮೇಶ ಕತ್ತಿ ಹಾಗೂ ಸವದಿ ಸಭೆ ನಡೆಸಿ ಏನು ಮಾತುಕತೆ ನಡೆಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಹೈಕಮಾಂಡ್‌ನವರು ಕರೆದಾಗ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

‘ಜಿಲ್ಲಾ ಬಿಜೆಪಿಯಲ್ಲಿ ಭಿನ್ನಾಭಿ‍ಪ್ರಾಯ ಉಂಟಾಗಿರುವುದನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ನಾಯಕತ್ವ ತೆಗೆದುಕೊಂಡು ಬಗೆಹರಿಸುತ್ತಾರೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ’ ಎಂದರು.

‘ಅಥಣಿಗೆ ನೀರಾವರಿ ಯೋಜನೆ ಆಗಲಿಲ್ಲವಾದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು