ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಅನುದಾನ ನಿಲ್ಲಿಸಿದ್ದ ರಮೇಶ ಜಾರಕಿಹೊಳಿ: ಲಕ್ಷ್ಮಿ

Last Updated 20 ಜನವರಿ 2022, 12:01 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರು ಗ್ರಾಮೀಣ ಕ್ಷೇತ್ರಕ್ಕೆ ಸರ್ಕಾರಿಂದ ಬರಬೇಕಾಗಿದ್ದ ಎಲ್ಲ ಅನುದಾನ ಹಾಗೂ ಕಾರ್ಯಾದೇಶವಾಗಿದ್ದ ಕೆಲಸಗಳನ್ನು ನಿಲ್ಲಿಸಿದ್ದರು’ ಎಂದು ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.

ತಾಲ್ಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಗುರುವಾರ ಅವರು ಮಾತನಾಡಿದರು.

‘ಗ್ರಾಮದಲ್ಲಿ ರಸ್ತೆ ಸುಧಾರಣೆಗೆ ₹ 4.50 ಕೋಟಿ ಮೊತ್ತದ ಕಾಮಗಾರಿಗೆ ಎರಡೂವರೆ ವರ್ಷದ ಹಿಂದೆಯೇ ಕಾರ್ಯಾದೇಶ ನೀಡಲಾಗಿತ್ತು. ಆದರೆ, ನಮ್ಮ ಸರ್ಕಾರ ಬಿದ್ದಿದ್ದರಿಂದ ನಡೆಸಲಾಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಚಿವರಾದ ರಮೇಶ ಅನುದಾನ ತಡೆ ಹಿಡಿದರು’ ಎಂದು ದೂರಿದರು.

‘ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿರುವುದು ಮತ್ತು ರೈತರಿಗೆ ಅನಾನುಕೂಲ ಆಗಿರುವುದನ್ನು 15 ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೆ. ಅವರು ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೀಗಾಗಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

‘ಸೂರ್ಯನಿಗೂ, ಚಂದ್ರನಿಗೂ ಒಮ್ಮೊಮ್ಮೆ ಗ್ರಹಣ ಹಿಡಿಯುತ್ತದೆ. ಇನ್ನು ಲಕ್ಷ್ಮಿ ಯಾವ ಗಿಡದ ತಪ್ಪಲು? ಜೀವನದಲ್ಲಿ ಒಮ್ಮೊಮ್ಮೆ ರಾಕ್ಷಸರು ಬಂದು ಹೋಗುತ್ತಿರುತ್ತಾರೆ. ಆದರೆ, ಸೂರ್ಯ ಸೂರ್ಯನೇ, ಚಂದ್ರ ಚಂದ್ರನೇ’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಅವರನ್ನು ಪರೋಕ್ಷವಾಗಿ ರಾಕ್ಷಸನಿಗೆ ಹೋಲಿಸಿದರು.

‘ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇನೆ. ಮುಂದೆಯೂ ಕ್ಷೇತ್ರದ ಜನರು ನನ್ನೊಂದಿಗೆ ನಿಲ್ಲಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT