ಮಂಗಳವಾರ, ಡಿಸೆಂಬರ್ 1, 2020
18 °C

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಕ್ರಮ: ರಮೇಶ ಕತ್ತಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲೆಯಲ್ಲಿ ‍ಪಕ್ಷದ ಮುಖಂಡರು ಮನೆಯೊಂದು ಮೂರು ಬಾಗಿಲು ಆಗಿದ್ದನ್ನು ಗಮನಿಸಿದ ಪಕ್ಷ ಹಾಗೂ ಸಂಘಟನೆ ಗಮನಿಸಿತ್ತು. ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿತ್ತು. ಹೀಗಾಗಿ, ಪಕ್ಷದ ಎಲ್ಲ ಮುಖಂಡರೂ ಒಂದಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಇಲ್ಲಿ ಶನಿವಾರ ನಡೆದ ಚುನಾವಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಾಲ ನೀಡಿಕೆ ವಿಷಯದಲ್ಲಿ ಬೇಡಿಕೆಯಷ್ಟು ಕೊಡಲಿಲ್ಲವೆಂದು ಕೆಲವು ನಿರ್ದೇಶಕರು ಅಸಮಾಧಾನಗೊಂಡಿದ್ದರು. ಬ್ಯಾಂಕ್‌ನ ಇತಿಮಿತಿಯಲ್ಲಿ ನಾವು ಕಾರ್ಯನಿರ್ವಹಿಸಬೇಕಾಗುತ್ತದೆ. ಇದನ್ನು ಅವರಿಗೆ  ತಿಳಿಸಿ ಹೇಳಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಮುಖಂಡರು ಸೂಚಿಸಿದ್ದಾರೆ. ಅದನ್ನು ಪಾಲಿಸುತ್ತೇವೆ’ ಎಂದರು.

‘ನೌಕರರ ಬೇಡಿಕೆಗಳಲ್ಲಿ ಒಂದಷ್ಟನ್ನು ಈಗಾಗಲೇ ಈಡೇರಿಸಿದ್ದೇವೆ. ಇನ್ನೂ ಕೆಲವು ಬಾಕಿ ಇವೆ. ಅವುಗಳನ್ನು ಈಡೇರಿಸಿ, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಪುನರಾಯ್ಕೆಯಿಂದ ಜವಾಬ್ದಾರಿ ಹೆಚ್ಚಾಗಿದ್ದು, ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ರಮೇಶ ಜಾರಕಿಹೊಳಿ ಜೊತೆ 1983ರಿಂದಲೂ ಆತ್ಮೀಯ ಸಂಬಂಧವಿದೆ. ಚಿಕ್ಕವನಿದ್ದಾಗಲೇ ನಾನು ತಂದೆ ಕಳೆದುಕೊಂಡೆ. ಸಹೋದರ ಉಮೇಶ ಕತ್ತಿ ಹಾಗೂ ರಮೇಶ ಜಾರಕಿಹೊಳಿ ಅವರನ್ನು ತಂದೆ ಸ್ಥಾನದಲ್ಲಿ ಕಾಣುತ್ತೇನೆ. ಅವರೂ ನನ್ನನ್ನು ಮಗನ ಸ್ಥಾನದಲ್ಲಿ ಕಾಣುತ್ತಿದ್ದಾರೆ’ ಎಂದು ಹೇಳಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎನ್ನುವುದು ನನ್ನ ಒತ್ತಾಯ. ಪಕ್ಷದವರು ಪರ್ಯಾಯದ ಬಗ್ಗೆ ಯೋಚಿಸುವುದಾದರೆ, ಆ ಸಂದರ್ಭದಲ್ಲಿ ಪಕ್ಷದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. 2014ರಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ 3ಸಾವಿರ ಮತಗಳ ಅಂತರದಿಂದ ಸೋತಿದ್ದೆ. ನಂತರದ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ರಾಜ್ಯಸಭಾ ಟಿಕೆಟ್‌ನಿಂದಲೂ ವಂಚಿತನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ... ನಮ್ಮಣ್ಣ ಉಮೇಶ ಕತ್ತಿ ಡೈಮಂಡ್; ಈ ಬಾರಿ ಮಂತ್ರಿ ಸ್ಥಾನ ಸಿಗಲಿದೆ: ರಮೇಶ ಕತ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು