ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ರಾಣಿ ಚನ್ನಮ್ಮ ನಾಟಕ

ವರ್ಣರಂಜಿತ ರಂಗಸಜ್ಜಿಕೆ, ಆನೆ, ಕುದುರೆ, ಒಂಟೆಗಳ ಮೇಳ ಕಣ್ತುಂಬಿಕೊಂಡ ಪ್ರೇಕ್ಷಕ ಬಳಗ
Last Updated 1 ಫೆಬ್ರುವರಿ 2023, 15:42 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಬ್ಬುಗತ್ತಲು ಆವರಿಸುತ್ತಿದ್ದಂತೆಯೇ ಅ‍ಪಾರ ಸಂಖ್ಯೆಯಲ್ಲಿ ಜಮಾಯಿಸಿದ ಜನ. ಸ್ವತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ, ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟದ ಮರುಸೃಷ್ಟಿಯ ಮೆಗಾ ನಾಟಕ ಕಣ್ತುಂಬಿಕೊಳ್ಳುವ ಕಾತರ. ನೂರಾರು ಕಲಾವಿದರು, ಆನೆ, ಒಂಟೆ, ಕುದುರೆಗಳನ್ನು ಒಳಗೊಂಡ ಅದ್ಧೂರಿ ರಂಗಸಜ್ಜಿಕೆ. ಆಕರ್ಷಕ ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ಮೂಡಿ ಬಂದ ನಾಟಕವನ್ನು ವೀಕ್ಷಿಸಿ, ಪುಳಕಿತಗೊಂಡ ಪ್ರೇಕ್ಷಕ ಗಣ...

ಪಟ್ಟಣದ ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಾಗೂ ಸೋಮವಾರ ‘ವೀರರಾಣಿ ಕಿತ್ತೂರು ಚನ್ನಮ್ಮ’ ನಾಟಕ ಪ್ರದರ್ಶನದಲ್ಲಿ ಕಂಡುಬಂದ ಕ್ಷಣಗಳಿವು. ಯಕ್ಸಂಬಾದ ಜೊಲ್ಲೆ ಗ್ರೂಫ್ ನೇತೃತ್ವದಲ್ಲಿ ಧಾರವಾಡದ ರಂಗಾಯಣ ತಂಡದ ಕಲಾವಿದರು ಪ್ರಸ್ತುತಪಡಿಸಿದ ನಾಟಕವನ್ನು ಗ್ರಾಮೀಣರು ಕಣ್ಣು ಪಿಟಕಿಸದೇ ನೋಡಿದರು.

ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಅವರ ನಿರ್ದೇಶನದಲ್ಲಿ ಮೂರೂವರೆ ಗಂಟೆಗೂ ಹೆಚ್ಚು ಕಾಲ ಪ್ರದರ್ಶನಗೊಂಡ ನಾಟಕದುದ್ದಕ್ಕೂ ಕಿತ್ತೂರು ಸಂಸ್ಥಾನದ ಸಂರಕ್ಷಣೆಗಾಗಿ ಬ್ರಿಟಿಷರು ಮತ್ತು ಪೇಶ್ವೆಗಳ ವಿರುದ್ದ ಹೋರಾಟ ನಡೆಸಿದ ಮಲ್ಲಸರ್ಜ ದೇಸಾಯಿ, ರಾಣಿ ಚನ್ನಮ್ಮ ಮತ್ತವರ ಸಹಚರ ಬಂಟರ ಸಾಹಸವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದರು.

ರಾಣಿ ಚನ್ನಮ್ಮನ ಜನನ, ಬಾಲ್ಯ, ತಾರುಣ್ಯ, ವಿದ್ಯೆ ಜೊತೆಗೆ ವ್ಯಕ್ತಿತ್ವದ ಚಿತ್ರಣ, ರಾಜನೀತಿ, ಆದರ್ಶ ತತ್ವಗಳನ್ನು ನಾಟಕದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು. ಮರಾಠಿಯ ‘ಜಾನತಾ ರಾಜಾ’ ಮೆಗಾ ನಾಟಕದ ಮಾದರಿಯಲ್ಲಿ ಈ ನಾಟಕದಲ್ಲಿಯೂ ಆನೆ, ಕುದುರೆ ಮತ್ತು ಒಂಟೆಗಳ ಬಳಕೆ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ರಾತ್ರಿ 11 ಗಂಟೆವರೆಗೆ ಜನ ಕದಲದೇ ನಾಟಕ ವೀಕ್ಷಿಸಿದರು. ಸೋಮವಾರ ಸಂಜೆ ನಡೆದ ನಾಟಕ ಪ್ರದರ್ಶನವನ್ನೂ ವೀಕ್ಷಿಸಲು ಅಪಾರ ಜನ ಆಗಮಿಸಿದ್ದರು.

ರಾಣಿ ಚನ್ನಮ್ಮನ ಪಾತ್ರ ನಿರ್ವಹಿಸಿದ ಸೂರ್ಯಕಲಾ ಅಪ್ಪಣ್ಣ ರಾಮದುರ್ಗ ಅವರು ಮನೋಜ್ಞವಾಗಿ ಅಭಿಯನಿಸಿದರು. ಚನ್ನಮ್ಮನ ಪಡಿಯಚ್ಚು ಕಂಡಂತೆ ಜನ ಚಪ್ಪಾಳೆಗಳ ಮೂಲಕ ಪದೇಪದೇ ಅಭಿನಂದಿಸಿದರು. ಸಂಗೊಳ್ಳಿ ರಾಯಣ್ಣನಾಗಿ ಕಿರಣ ಧಾರವಾಡ, ಥ್ಯಾಕರೆ ಆಗಿ ಧೀರಜ್‌ ಶೆಟ್ಟಿ ರಂಗಸಜ್ಜಿಕೆ ಮೇಲೆ ವಿಜೃಂಭಿಸಿದರು. ಎರಡೂ ಪಾತ್ರಗಳಿಗೆ ಜೀವತುಂಬಿದ ಕಲಾವಿದರ ವೀರಾವೇಶದ ಅಭಿನಯಕ್ಕೆ ಗ್ರಾಮೀಣ ಜನ ತಲೆದೂಗಿದರು.

ಮಲ್ಲಸರ್ಜನಾಗಿ ಬಂದ ಪ್ರಮೋದ ರಾಣೆಬೆನ್ನೂರ, ರುದ್ರಮ್ಮನ ವೇಷದಲ್ಲಿ ಅಶ್ವಿನಿ ಚಂದ್ರಪ್ಪ, ಸರದಾರ ಗುರುಸಿದ್ಧಪ್ಪನಾಗಿ ಬಸವರಾಜ ಪೋಲಾರಕಟ್ಟಿ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು.

*

‘ಚರಿತ್ರೆಗೆ ಜೀವಂತಿಕೆ ತರುವ ಯತ್ನ’

ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಇತಿಹಾಸವನ್ನು ಯುವ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ. ಧಾರವಾಡದ ರಂಗಾಯಣದ ಕಲಾವಿದರ ನಾಟಕವು ಚರಿತ್ರೆಗೆ ಜೀವಂತಿಕೆ ತಂದಿದೆ’ ಎಂದು ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಹೇಳಿದರು.

‘ಕಿತ್ತೂರು ಚನ್ನಮ್ಮನ ಚರಿತ್ರೆಯನ್ನು ನಾಟಕದ ಮೂಲಕ ಅದ್ಬುತವಾಗಿ ಪ್ರದರ್ಶಿಸಿದ್ದು, ಚಿಕ್ಕೋಡಿಯಲ್ಲಿ ಎರಡು ದಿನ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಫೆ.4 ಮತ್ತು 5 ರಂದು ನಿಪ್ಪಾಣಿಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT