ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: 29ರಂದು ನಿರ್ಧಾರ- ರಮೇಶ ಜಾರಕಿಹೊಳಿ

ಈಶ್ವರಪ್ಪ ಬಂದಾಗ ಚರ್ಚೆ: ರಮೇಶ ಜಾರಕಿಹೊಳಿ ಹೇಳಿಕೆ
Last Updated 27 ಆಗಸ್ಟ್ 2020, 13:31 IST
ಅಕ್ಷರ ಗಾತ್ರ

ಬೆಳಗಾವಿ: ‘ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಷಯದಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಆ.29ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಜಲಸಂ‍ಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಮರುಸ್ಥಾಪನೆಗೆ ಆಗ್ರಹಿಸಿ ರಾಜ್ಯದ ವಿವಿಧೆಡೆಯಿಂದ ಗುರುವಾರ ಬಂದು ಸುವರ್ಣ ವಿಧಾನಸೌಧದಿಂದ ಬೃಹತ್‌ ಮೆರವಣಿಗೆಯಲ್ಲಿ ನಗರದತ್ತ ಬರುತ್ತಿದ್ದ ರಾಯಣ್ಣನ ಅಭಿಮಾನಿಗಳು ಮತ್ತು ಹಾಲುಮತ ಸಮಾಜದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಅಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ 2018ರಲ್ಲಿ ನಾನೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ರಸ್ತೆ ವಿಸ್ತರಣೆ ಸಮಸ್ಯೆ ಹಾಗೂ ಕಾನೂನು ತೊಡಕು ಇರುವುದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಅಭಿಮಾನಿಗಳು ನಿಗದಿತ ಸ್ಥಳದಲ್ಲಿ ಸ್ಥಾಪನೆಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅದರ ಬಗ್ಗೆ ಸಮಗ್ರವಾಗಿ ಚರ್ಚಿಸಬೇಕಿದೆ. ಆ.29ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಇಲ್ಲಿಗೆ ಬರಲಿದ್ದಾರೆ. ಅವರೊಂದಿಗೂ ಚರ್ಚೆ ಮಾಡುತ್ತೇನೆ. ಜೊತೆಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ‌ ಮೊದಲಾದ ನಾಯಕರೊಂದಿಗೆ ಮಾತನಾಡಿ ನಿರ್ಣಯ ಕೈಗೊಳ್ಳುತ್ತೇವೆ. ಅಭಿಮಾನಿಗಳು ಸಹಕರಿಸಬೇಕು. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುತ್ತೇವೆ. ಅಲ್ಲಿವರೆಗೆ ಪ್ರತಿಭಟನೆ ಕೈಬಿಡಬೇಕು’ ಎಂದು ತಿಳಿಸಿದರು.

ಜಾಗದ ಬಗ್ಗೆ ಭರವಸೆ ಕೊಟ್ಟಿಲ್ಲ:ನಂತರ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ‘ಪೀರನವಾಡಿಯಲ್ಲಿ ಆ. 15ರಂದು ಸ್ಥಾಪಿಸಿದ್ದ ಸ್ಥಳದಲ್ಲೇ ಮರುಸ್ಥಾಪನೆ ಬಗ್ಗೆ ನಾನು ಭರವಸೆ ನೀಡಿಲ್ಲ. ನಿಗದಿತ ಸ್ಥಳದಲ್ಲೇ ಪ್ರತಿಷ್ಠಾಪಿಸಬೇಕು ಎನ್ನುವುದು ಪ್ರತಿಭಟನಾನಿರತ ರಾಯಣ್ಣ ಅಭಿಮಾನಿಗಳ ಆಗ್ರಹವಾಗಿದೆ. ಆದರೆ, ಕಾನೂನು ತೊಡಕಿರುವುದರಿಂದ ನಾನು ಅವರಿಗೆ ಜಾಗದ ಬಗ್ಗೆ ಯಾವುದೇ ಭರವಸೆ ಕೊಟ್ಟಿಲ್ಲ. ಹಾಲುಮತ ಸಮಾಜದ ನಾಯಕರೊಂದಿಗೆ ಸಭೆ ನಡೆಸಿ ಒಮ್ಮತದ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

‘ಹೊರಗಿನವರು ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳೀಯರು ನಮ್ಮ ಮುಂದೆ ಬರಲು ಹೆದರುತ್ತಿದ್ದಾರೆ. ಈಶ್ವರಪ್ಪ ಆ ಸಮಾಜದ ನಾಯಕ. ಅವರು ಬಂದು ಸಲಹೆ ನೀಡಲಿ. ಹೊಸ ಜಾಗವನ್ನು ಪರಿಶೀಲನೆ ಬಗ್ಗೆಯೂ ಜಿಲ್ಲಾಡಳಿತದೊಂದಿಗೆ ಚರ್ಚಿಸುತ್ತೇನೆ. ಕಾನೂನು ಚೌಕಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದರು.

ಪ್ರತಿಭಟನಾ ರ‍್ಯಾಲಿ:ಸುವರ್ಣ ವಿಧಾನಸೌಧದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಹೊರಟಿದ್ದ ಪ್ರತಿಭಟನಾ ರ‍್ಯಾಲಿಯನ್ನು ಬಿ.ಎಸ್. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಮೈದಾನದ ಬಳಿ ಪೊಲೀಸರು ತಡೆದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಮುಖಂಡರು ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದಿದ್ದರು.

ಇತ್ತ, ಪ್ರವಾಸಿಮಂದಿರದಲ್ಲಿ ಸ್ಥಳೀಯ ಹಾಲುಮತ ಸಮಾಜದ ಮುಖಂಡರು ಮತ್ತು ಕನ್ನಡಪರ ಸಂಘಟನೆಗಳ ಮುಂಖಡರ ಜೊತೆ ಚರ್ಚಿಸುತ್ತಿದ್ದ ಉಸ್ತುವಾರಿ ಸಚಿವರು ಸಭೆ ಮೊಟಕುಗೊಳಿಸಿ ಪ್ರತಿಭಟನಾ ಸ್ಥಳಕ್ಕೆ ತೆರಳಿ, ವಿವಾದ ಬಗೆಹರಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT