ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: 38,497 ಅಭ್ಯರ್ಥಿಗಳಿಗೆ ಪದವಿ ಪ್ರದಾನ

ಸುವರ್ಣ ವಿಧಾನಸೌಧದಲ್ಲಿ ಆರ್‌ಸಿಯು 9ನೇ ಘಟಿಕೋತ್ಸವ ಮಾರ್ಚ್‌ 9ರಂದು
Last Updated 7 ಮಾರ್ಚ್ 2022, 10:10 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ದ 9ನೇ ಘಟಿಕೋತ್ಸವವನ್ನು ಮಾರ್ಚ್‌ 9ರಂದು ಬೆಳಿಗ್ಗೆ 11ಕ್ಕೆ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲಾಗಿದೆ’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘35,484 ಸ್ನಾತಕ ವಿದ್ಯಾರ್ಥಿಗಳು ಹಾಗೂ 2,739 ಸ್ನಾತಕೋತ್ತರ, 188 ಪಿ.ಜಿ. ಡಿಪ್ಲೊಮಾ ಮತ್ತು 86 ಅಭ್ಯರ್ಥಿಗಳಿಗೆ ಪಿಎಚ್.ಡಿ ಸೇರಿ 38,487 ಮಂದಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರ ಮೇಲುಗೈ:

‘10 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸುವರ್ಣ ಪದಕಗಳನ್ನು ವಿತರಿಸಲಾಗುವುದು. 148 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ಪ್ರಮಾಣಪತ್ರ ಕೊಡಲಾಗುವುದು. ಬಾಗಲಕೋಟೆಯ ಬಸವೇಶ್ವರ ಕಲಾ ಕಾಲೇಜಿನ ಸೌಮ್ಯಾ ಕುಂಬಾರ (ಎಂ.ಎ. ಕನ್ನಡ) ಅತಿಹೆಚ್ಚು ಅಂದರೆ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಚಿನ್ನದ ಪದಕ ಗಳಿಸಿದವರಲ್ಲಿ ವಿದ್ಯಾರ್ಥಿ ಒಬ್ಬರಷ್ಟೆ ಇದ್ದಾರೆ. ಉಳಿದವೆರೆಲ್ಲರೂ ವಿದ್ಯಾರ್ಥಿನಿಯರೇ ಆಗಿದ್ದಾರೆ’.

‘ಬೆಳಗಾವಿಯ ಕೆಎಲ್‌ಎಸ್‌ ಗೋಗಟೆ ವಾಣಿಜ್ಯ ಕಾಲೇಜಿನ ಅಕ್ಷತಾ ಭಟ್, ಜಮಖಂಡಿಯ ತುಂಗಳ ಸ್ಕೂಲ್ ಆಫ್ ಬೇಸಿಕ್ ಅಂಡ್ ಅಪ್ಲೈಯ್ಡ್ ಸೈನ್ಸ್‌ನ ಸಾವಿತ್ರಿ ಹಿರೇಮಠ, ಬೆಳಗಾವಿ ಕ್ಯಾಂಪಸ್‌ನ ಶ್ವೇತಾ ಗುಳನ್ನವರ, ಬಾಗಲಕೋಟೆಯ ಬಿವಿವಿ ಸಂಘದ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಸಪ್ನಾ ಕಜೂರ್, ನಿಪ್ಪಾಣಿಯ ಕೆಎಲ್‌ಇ ಜಿಐ ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಜ್ಯೋತಿ ಚವ್ಹಾಣ, ಮಹಾಲಿಂಗಪುರದ ಎಸ್‌ಸಿಪಿ ಕಲಾ ಕಾಲೇಜಿನ ಗಾಯತ್ರಿ ಬಾಗೇವಾಡಿ, ಗೋಕಾಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾವಿತ್ರಿ ಪರಕಾನಟ್ಟಿ ಮತ್ತು ಸಾವಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುರೇಶ್ ಬಿದರಿ ತಲಾ ಒಂದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ’ ಎಂದು ತಿಳಿಸಿದರು.

ನ್ಯಾಕ್‌ನಿಂದ ಉತ್ತಮ ಶ್ರೇಣಿ:

‘ವಿ.ವಿ.ಯು ಈಚೆಗೆ ನ್ಯಾಕ್ ಮನ್ನಣೆಯಲ್ಲಿ ಉತ್ತಮ ಶ್ರೇಣಿ ಗಳಿಸಿದೆ. ಇ–ಆಡಳಿತ ವ್ಯವಸ್ಥೆ ಜಾರಿಯಲ್ಲಿ ಮುಂಚೂಣಿಯಲ್ಲಿದೆ. ಪ್ರಸಕ್ತ ಶೈಕ್ಷಣಿ ವರ್ಷದಿಂದ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ–2020) ಅಳವಡಿಸಿಕೊಂಡು, ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿ.ವಿ.ಗೆ ಮೂರು ಜಿಲ್ಲೆಗಳ 408 ಕಾಲೇಜುಗಳು ಸಂಯೋಜನೆಗೊಂಡಿವೆ. 1.50 ಲಕ್ಷ ಅಧ್ಯಯನ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಎಲ್ಲರನ್ನೂ ಉತ್ತೀರ್ಣರನ್ನಾಗಿ ಮಾಡಿದ್ದರಿಂದ, ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿ ಸಂಖ್ಯೆ 1.78 ಲಕ್ಷಕ್ಕೆ ಏರಿದೆ. 42 ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶವಿದೆ. 21 ವಿಷಯಗಳ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 1,838 ವಿದ್ಯಾರ್ಥಿಗಳು ಓದುತ್ತಿದ್ದಾರೆ. 4 ವಿಷಯಗಳಲ್ಲಿ ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳಿವೆ. 435 ಮಂದಿ ಪಿಎಚ್‌.ಡಿ ಸಂಶೋಧನೆ ನಡೆಯುತ್ತಿದೆ. ಯುಜಿಸಿಯಿಂದ 2ಎಫ್‌ ಹಾಗೂ 12 ಬಿ ಮನ್ನಣೆ ಪಡೆದಿದೆ’ ಎಂದು ತಿಳಿಸಿದರು.

ಕುಲಸಚಿವರಾದ ಪ್ರೊ.ವೀರನಗೌಡ ಪಾಟೀಲ ಹಾಗೂ ಪ್ರೊ.ಬಸವರಾಜ ಪದ್ಮಶಾಲಿ ಮತ್ತು ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ ಪಾಲ್ಗೊಂಡಿದ್ದರು.

ಪ್ರಗತಿಯಲ್ಲಿದೆ

ನೂತನ ಕ್ಯಾಂಂಪಸ್‌ ನಿರ್ಮಾಣಕ್ಕೆ ಹಿರೇಬಾಗೇವಾಡಿಯ ಮಲ್ಲಪ್ಪನಗುಡ್ಡದ ಬಳಿ 126 ಎಕರೆ 27 ಗುಂಟೆ ಜಮೀನನ್ನು ಸರ್ಕಾರ ನೀಡಿದೆ. ಭೂಮಿಪೂಜೆ ನೆರವೇರಿದ್ದು, ಕಾಂಪೌಂಡ್ ಕಟ್ಟುವ ಕಾರ್ಯ ಪ್ರಗತಿಯಲ್ಲಿದೆ.

–ಪ್ರೊ.ಎಂ. ರಾಮಚಂದ್ರಗೌಡ, ಕುಲಪತಿ, ಆರ್‌ಸಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT