ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಸಗಿ ವೈದ್ಯರ ನೋಂದಣಿ ಮಾಡಿಸಿ’- ಕವಟಗಿಮಠ

ಕೋವಿಡ್‌ ನಿಯಂತ್ರಣಕ್ಕೆ ಅಧಿಕಾರಿಗಳ ಜೊತೆ ಕವಟಗಿಮಠ ಸಭೆ
Last Updated 3 ಜೂನ್ 2021, 12:52 IST
ಅಕ್ಷರ ಗಾತ್ರ

ಹುಕ್ಕೇರಿ: ಖಾಸಗಿಯಾಗಿ ವೈದ್ಯ ವೃತ್ತಿ ಮಾಡುವವರು ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿ ಮಾಡುವಂತೆ ಸೂಕ್ತ ಕ್ರಮ ಜರುಗಿಸಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದರು.

ಅವರು ಗುರುವಾರ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕೋವಿಡ್‌ ನಿಯಂತ್ರಣ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ ‘ಖಾಸಗಿ ಆಸ್ಪತ್ರೆಯಲ್ಲಿ ಬಡವರಿಗೆ ಮಾಡಿದ ವೆಚ್ಚವನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿತ ಆಸ್ಪತ್ರೆ ಮರಳಿ ಪಡೆಯಬಹುದು‘ ಎಂದರು.

‘ಗ್ರಾಮೀಣ ಭಾಗದಲ್ಲಿ ಬಹುತೇಕ ವೈದ್ಯರು ಸ್ಟಿರಾಯ್ಡ್‌ ಮಾತ್ರೆ ಬಳಸಿ ರೋಗ ಗುಣಪಡಿಸುವರು. ಈ ಮಾತ್ರೆ ಸೇವಿಸುವುದರಿಂದ ಕಪ್ಪು ಶಿಲೀಂಧ್ರ ಸೋಂಕಿಗೆ ಗುರಿಯಾಗಬಹುದು. ಆದ್ದರಿಂದ ಸರ್ಕಾರ ಸೂಚಿಸಿದ ಮಾತ್ರೆಯನ್ನೇ ಕೊಡಬೇಕು‘ ಎಂದರು.

ಆರ್‌ಎಂಪಿ ವೈದ್ಯರನ್ನು ಒಂದೆಡೆ ಸೇರಿಸಿ ಸಭೆ ಜರುಗಿಸಬೇಕು. ಅವರಿಗೆ ಸ್ಟಿರಾಯ್ಡ್‌ ಮಾತ್ರೆಗಳ ಬಳಕೆಯಿಂದ ಆಗುವ ಅನಾಹುತದ ಬಗ್ಗೆ ಮಾಹಿತಿ ನೀಡಿ, ಕೋವಿಡ್‌ ನಿಯಂತ್ರಿಸಲು ಸರ್ಕಾರದ ಜೊತೆ ಕೈ ಜೋಡಿಸಲು ಸಹಕರಿಸುವಂತೆ ಹೇಳಬೇಕು ಎಂದರು.

ಮಂಜೂರಿ: ಕ್ಷೇತ್ರದ 7 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹುಕ್ಕೇರಿ–ಸಂಕೇಶ್ವರ ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆ ಸೇರಿ ಒಟ್ಟು 10 ಆಮ್ಲಜನಕ ಸಾಂದ್ರಕ ಮಂಜೂರು ಮಾಡುವುದಾಗಿ ಟಿಎಚ್ಒ ಡಾ.ಉದಯ ಕುಡಚಿ ಅವರಿಗೆ ತಿಳಿಸಿದರು.

ತಹಶೀಲ್ದಾರ್ ಡಾ.ದೊಡ್ಡಪ್ಪ ಹೂಗಾರ್, ತಾಲ್ಲೂಕು ಪಂಚಾಯ್ತಿ ಇಒ ಬಿ.ಕೆ.ಲಾಳಿ, ಸಿಪಿಐ ರಮೇಶ್ ಚಾಯಾಗೋಳ, ಸಹಾಯಕ ಕೃಷಿ ನಿರ್ದೇಶಕ ಮಹಾದೇವ್ ಪಟಗುಂದಿ, ಮುಖ್ಯಾಧಿಕಾರಿಗಳಾದ ಮೋಹನ್ ಜಾಧವ್ ಮತ್ತು ಜಗದೀಶ್ ಈಟಿ, ಸಿಡಿಪಿಒ ಮಂಜುನಾಥ ಪರಸನ್ನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಸಿದ್ನಾಳ, ತೋಟಗಾರಿಕೆ ಅಧಿಕಾರಿ ತಾತ್ಯಾಸಾಹೇಬ ನಾಂದಣಿ, ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ವಿ.ಬಿ.ನಾಗನೂರಿ, ಶಿಕ್ಷಣ ಇಲಾಖೆಯ ಸಿ.ಆರ್.ಸಿ. ಡಾ.ಬಿ.ಆರ್.ಹಂದೂರ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ ಇದ್ದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಶೈಲ್ ಹಿರೇಮಠ ಸ್ವಾಗತಿಸಿದರು.

ರಾಯಬಾಗದಲ್ಲಿಯೂ ಸಭೆ

ರಾಯಬಾಗ: ಸೋಂಕು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ರಾಯಬಾಗ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

ಸೋಂಕು ಹರಡುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರಿಗೆ ಬಿತ್ತನೆಯ ಬೀಜ, ರಸಗೊಬ್ಬರಗಳ ವಿತರಣೆ ಮಾಡುವಾಗ ಕೋವಿಡ್ ನಿಯಮ ಪಾಲಿಸುವಂತೆ ಬೀಜ ವಿತರಣಾ ಕೇಂದ್ರದವರಿಗೆ ಸೂಚಿಸುವಂತೆ ತಿಳಿಸಿದರು. ಸರ್ಕಾರ ನಿಗದಿ ಪಡಿಸಿರುವ ದರವನ್ನೇ ಪಡೆಯಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಡಿ.ಎಂ. ಐಹೊಳೆ, ಪಿ. ರಾಜೀವ್, ತಹಶೀಲ್ದಾರ್ ಮೋಹನ ಭಸ್ಮೆ ಮತ್ತು ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT