ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಕಲ್ಯಾಣ ಆರಾಧನಾ ಮಹೋತ್ಸವ ಸಂಪನ್ನ

6 ದಿನಗಳವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮ
Last Updated 18 ಜುಲೈ 2019, 19:37 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಧರ್ಮನಾಥ ಭವನದಲ್ಲಿ ಎಲ್ಲರ ಆತ್ಮಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಬೃಹತ್ ಸಿದ್ಧ ಚಕ್ರ ಆರಾಧನಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.

ಧರ್ಮನಾಥ ಜಿನಮಂದಿರ ಸಮಿತಿ ಹಾಗೂ ಸಮ್ಯಕ್ತ್ವ ಮಹಿಳಾ ಮಂಡಳದ ಸಹಯೋಗದಲ್ಲಿ ಶನಿವಾರದಿಂದ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಶ್ರಾವಕ–ಶ್ರಾವಕಿಯರು ಭಾಗವಹಿಸಿದ್ದರು. ಧರ್ಮ ಧ್ವಜಾರೋಹಣ, ಮಂಗಲಕುಂಭ, ಪ್ರತಿಷ್ಠೆ, ಕಂಕಣ ಬಂಧನ, ಸಿದ್ಧ ಚಕ್ರ ಆರಾಧನೆ, ಸಾಮೂಹಿಕ ಪೂಜೆ, ಜಾಪ್ಯ ಆರತಿ ವಿಸರ್ಜನೆ, ಪಂಚಾಮೃತ ಅಭಿಷೇಕ, ಮಹಾಮಂತ್ರ, ಸುಪ್ರಭಾತ ಸ್ತೋತ್ರ, ನಿತ್ಯ ವಿಧಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಗುರುವಾರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ.ಪಾರ್ಶ್ವನಾಥ ಕೆಂಪಣ್ಣವರ, ‘ಜೈನರು ಶಾಂತಿಪ್ರಿಯರು. ಅಹಿಂಸಾ ಪರಮೋ ಧರ್ಮ ಎನ್ನುವುದು ಈ ಧರ್ಮದ ತಿರುಳು. ಈ ಧರ್ಮದ ತತ್ವಗಳನ್ನು ಇತರ ಧರ್ಮದವರು ಪಾಲಿಸುತ್ತಿದ್ದಾರೆ’ ಎಂದು ತಿಳಿಸಿದರು.

ಬಲವಾಗಿ ಬೇರೂರಿವೆ:

‘ಭರತ ಚಕ್ರವರ್ತಿ ಆಡಳಿತದ ಅವಧಿಯಲ್ಲಿ ಭಾರತ ಎನ್ನುವುದು ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಬರ್ಮಾ, ನೇಪಾಳ, ಭೂತಾನ್, ಶ್ರೀಲಂಕಾ, ಬಾಂಗ್ಲಾದೇಶ ವ್ಯಾಪ್ತಿಯನ್ನು ಒಳಗೊಂಡಿತ್ತು. ಅಲ್ಲೆಲ್ಲ ಇಂದಿಗೂ ಜೈನ ಧರ್ಮದ ಕುರುಹುಗಳು ಬಲವಾಗಿ ಬೇರೂರಿವೆ. ಇತರ ಧರ್ಮಗಳಂತೆ ಜೈನ ಧರ್ಮ ಭಾರತದಿಂದ ಹೊರಗೆ ಪ್ರಸಾರವಾಗಲಿಲ್ಲ. ಆದರೆ, ಸತ್ಯ, ಶಾಂತಿಯಿಂದ ಭಾರತದಲ್ಲಿದ್ದುಕೊಂಡೇ ಜಗತ್ತನ್ನು ಗೆದ್ದ ಏಕೈಕ ಧರ್ಮ ಇದಾಗಿದೆ’ ಎಂದು ಹೇಳಿದರು.

‘5–6ಸಾವಿರ ವರ್ಷಗಳ ಹಿಂದೆಯೇ ಜೈನ ಧರ್ಮ ಅಸ್ತಿತ್ವದಲ್ಲಿತ್ತು. ಜಾಗತಿಕ ಧರ್ಮ ಎನಿಸಿಕೊಂಡಿರುವ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಸಸ್ಯಾಹಾರವನ್ನು ಪ್ರಧಾನವಾಗಿ ಅಳವಡಿಸಿಕೊಂಡಿರುವ ಈ ಧರ್ಮದ ಜನರು ಸಾತ್ವಿಕತೆಯ ಜೀವನಕ್ಕೆ ಹೆಸರಾಗಿದ್ದಾರೆ’ ಎಂದರು.

‘ಬೆಳಗಾವಿ ಸೇರಿದಂತೆ ಜಿಲ್ಲೆಯಲ್ಲಿ ಜೈನ ಧರ್ಮದ ಬೇರುಗಳು ಗಟ್ಟಿಯಾಗಿವೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಸಮಾಜದವರಿದ್ದು, ಕೃಷ್ಣಾ ನದಿ ದಂಡೆಯ ಪ್ರದೇಶಗಳಲ್ಲಿ ಜೈನ ಮನೆತನಗಳು ಬಹು ಹಿಂದಿನಿಂದಲೂ ವಾಸವಾಗಿರುವುದು ಕಂಡುಬರುತ್ತದೆ. ಜೈನರ ಕೋಟೆ, ಕೊತ್ತಲಗಳು, ಬಸದಿಗಳು ಈ ಭಾಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿವೆ. ನಗರದ ಕೋಟೆಯಲ್ಲಿರುವ ಕಮಲ ಬಸದಿಯ ಸುಂದರ ಕೆತ್ತನೆಯ ದೇವಾಲಯವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಾಡಿಗೆ ಹಾಗೂ ದೇಶಕ್ಕೆ ಜೈನರ ಕೊಡುಗೆ ಸಾಕಷ್ಟಿದೆ’ ಎಂದು ಹೇಳಿದರು.

ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಸಂಸ್ಥಾಪಕ ಅಧ್ಯಕ್ಷ ಬಿ. ಗುಣಪಾಲ ಹೆಗ್ಡೆ ಮಾತನಾಡಿ, ‘ಬೃಹತ್ ಸಿದ್ಧ ಚಕ್ರ ಆರಾಧನಾ ಮಹೋತ್ಸವದಂಥ ಶ್ರೇಷ್ಠ ಆಚರಣೆಗಳನ್ನು ಜೈನ ಧರ್ಮ ಒಳಗೊಂಡಿದೆ’ ಎಂದರು.

ಮಾಣಿಕಬಾಗ ದಿಗಂಬರ ಜೈನ ಬೋಡಿಂಗ್ ಅಧ್ಯಕ್ಷ ಕೀರ್ತಿ ಕಾಗವಾಡ, ಅಣ್ಣಾಸಾಬ ಚೌಗುಲೆ ದಂಪತಿ, ಕೆ.ಡಿ. ಚೌಗುಲೆ, ಸಮ್ಯಕ್ತ್ವ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಮದನ ಶೆಟ್ಟರ, ಉಪಾಧ್ಯಕ್ಷೆ ರೇವತಿ ಅಡಿಕೆ, ಪದ್ಮಣ್ಣ ಶೆಟ್ಟಿ ಇದ್ದರು.

ಸಮ್ಯಕ್ತ್ವ ಮಹಿಳಾ ಮಂಡಳದವರು ಮಂತ್ರ ಪಠಿಸಿದರು. ರೂಪಾ ಪಾಯಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಎಂ. ಅಜಿತಕುಮಾರ ನಿರೂಪಿಸಿದರು. ಶೀಲಾ ಪುಣಜಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT