ಬೆಳಗಾವಿ: ವಕ್ಫ್ ಮಂಡಳಿಯ ಹಕ್ಕು ಮತ್ತು ಸ್ವಾತಂತ್ರ್ಯ ಮೊಟಕುಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ‘ಮುಸ್ಲಿಮರಿಗೆ ಮಾರಕವಾಗಿರುವ ಈ ಕಾಯ್ದೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಇದನ್ನು ರದ್ದುಪಡಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದರು. ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು.
‘ವಕ್ಫ್ ಮಂಡಳಿಯಲ್ಲಿ ಬದಲಾವಣೆ ತರಲು ಎನ್‌ಡಿಎ ನೇತೃತ್ವದ ಸರ್ಕಾರ ಕರಾಳವಾದ ಕಾಯ್ದೆ ಜಾರಿಗೊಳಿಸುತ್ತಿದೆ. ಈ ಹಿಂದೆ ವಕ್ಫ್ ಮಂಡಳಿ ಆಸ್ತಿ ಕಬಳಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ಇತ್ತು. ಈಗ ಅದನ್ನು ರದ್ದುಪಡಿಸಲಾಗುತ್ತಿದೆ. ಯಾರಾದರೂ ವಕ್ಫ್ ಮಂಡಳಿ ಆಸ್ತಿಗೆ ಕನ್ನ ಹಾಕಲು ಯತ್ನಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ಮಕ್ಸೂದ್ ಮಕಾನದಾರ, ಇಮ್ರಾನ್ ಅತ್ತಾರ್, ಮಜೀದ್ ಶೇಖ್, ಇಸ್ಮಾಯಿಲ್ ವಣ್ಣೂರ, ಮೌಝಮ್‌ಜಾ ಮುಲ್ಲಾನಿ ಪ್ರತಿಭಟನೆ ನೇತೃತ್ವ ವಹಿಸಿದ್ದರು