ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಅವರನ್ನು ಪ್ರಚಾರಕ್ಕೆ ಕರೆತರುವ ಜವಾಬ್ದಾರಿ ಸತೀಶ ಮೇಲಿದೆ: ಅಶೋಕ ಪಟ್ಟಣ

ಪ್ರಜಾವಾಣಿ ಸಂದರ್ಶನ; ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಹೇಳಿಕೆ
Last Updated 25 ಏಪ್ರಿಲ್ 2019, 8:27 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಅಶೋಕ ಪಟ್ಟಣ ಅವರಿಗೆ ಕೆಪಿಸಿಸಿ ವಹಿಸಿದೆ. ಅಶೋಕ ಪಟ್ಟಣ ಅವರು 2008ರಿಂದ ಹತ್ತು ವರ್ಷಗಳ ಕಾಲ ರಾಮದುರ್ಗ ಶಾಸಕರಾಗಿದ್ದರು. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ರಾಮದುರ್ಗ ಜೊತೆ ಅಕ್ಕಪಕ್ಕದ ತಾಲ್ಲೂಕುಗಳ ಜೊತೆಯೂ ಒಡನಾಟ ಇಟ್ಟುಕೊಂಡಿದ್ದಾರೆ.

ಪಕ್ಷದ ಲೋಕಸಭಾ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ಪರವಾಗಿ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ತಮ್ಮ ಪ್ರಚಾರದ ಅನುಭವಗಳನ್ನು ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

* ಕ್ಷೇತ್ರದ ಚುನಾವಣಾ ವಾತಾವರಣ ಹೇಗಿದೆ?
– ಚೆನ್ನಾಗಿದೆ. ಕಾಂಗ್ರೆಸ್‌ ಪರವಾಗಿದೆ. ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ.

* ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೆಳಗಾವಿ ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ, ಇನ್ನುಳಿದ ಕ್ಷೇತ್ರದಲ್ಲಿ ನಿಮ್ಮ ಅಭ್ಯರ್ಥಿ ‘ಅಪರಿಚಿತ’ರಾಗಿದ್ದಾರೆ ಎನ್ನುವ ಮಾತಿದೆಯಲ್ಲ?
– ಸಾಧುನವರ ಅವರು ಶಿಕ್ಷಣ ಸಂಸ್ಥೆ ಹಾಗೂ ಹಣಕಾಸು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅತಿದೊಡ್ಡ ಶಿಕ್ಷಣ ಸಂಸ್ಥೆಯಾಗಿರುವ ಕೆ.ಎಲ್‌.ಇ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಇವುಗಳ ಮೂಲಕ ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದಾರೆ. ಜಿಲ್ಲೆಯ ಜನರ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ.

* ಪ್ರತಿಸ್ಪರ್ಧಿ ಬಿಜೆಪಿಯ ಸುರೇಶ ಅಂಗಡಿ ಅವರು ಈಗಾಗಲೇ ಮೂರು ಚುನಾವಣೆಗಳಲ್ಲಿ ಜಯಗಳಿಸಿ, ನಾಲ್ಕನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಇವರು ಎದುರು ಕಣಕ್ಕಿಳಿದಿರುವ ನಿಮ್ಮ ಪಕ್ಷದ ಅಭ್ಯರ್ಥಿ ಸಾಧುನವರ ಅವರಿಗೆ ಇದು ಮೊದಲನೇ ಚುನಾವಣೆ. ಅವರನ್ನು ಹೇಗೆ ಎದುರಿಸಲಿದ್ದಾರೆ?
– ಸುರೇಶ ಅಂಗಡಿ ಅವರು ಮೂರು ಬಾರಿ ಸಂಸದರಾಗಿದ್ದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಧಾರವಾಡ– ಸವದತ್ತಿ– ರಾಮದುರ್ಗ– ಬಾದಾಮಿ ರೈಲ್ವೆ ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಸಮೀಕ್ಷೆ ಕೂಡ ಮಾಡಲಾಗಿತ್ತು. ಆದರೆ, ಅದು ಇದುವರೆಗೆ ಅನುಷ್ಠಾನವಾಗಿಲ್ಲ. ಬೆಳಗಾವಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ತರಬೇಕಾಗಿತ್ತು. ಅಂತಹ ಯಾವ ಕೆಲಸವನ್ನೂ ಮಾಡಿಲ್ಲ. ಕೇವಲ ಅಲೆಗಳ ಮೇಲೆಯೇ ಗೆದ್ದುಬಂದಿದ್ದಾರೆ. ಅವರ ಕೊಡುಗೆ ಎಂಬುವುದು ಏನೂ ಇಲ್ಲ.

* ಈ ಸಲ ಲೋಕಸಭೆಗೆ ಸ್ಪರ್ಧಿಸಲು ಕೇವಲ ಇಬ್ಬರು ಮಾತ್ರ ಟಿಕೆಟ್‌ ಕೇಳಿದ್ದರಂತೆ. ಯಾಕೆ ಕಾಂಗ್ರೆಸ್ಸಿಗರಲ್ಲಿ ಅಂತಹ ನಿರುತ್ಸಾಹ ಕಂಡುಬಂದಿತ್ತು?
– ಪಕ್ಷದ ಹೈಕಮಾಂಡ್‌ ಮೊದಲು ನನಗೆ ಸ್ಪರ್ಧಿಸುವಂತೆ ಹೇಳಿತ್ತು. ಆದರೆ, ನಾನು ರಾಜ್ಯ ರಾಜಕಾರಣದಲ್ಲಿಯೇ ಇರಲು ಬಯಸಿದೆ. ಹೀಗಾಗಿ, ಲೋಕಸಭೆಗೆ ಒಲ್ಲೆ ಎಂದೆ. ನಂತರ ಡಾ.ವಿ.ಎಸ್‌. ಸಾಧುನವರ ಹಾಗೂ ಶಿವಕಾಂತ ಸಿದ್ನಾಳ ಅವರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಯಿತು. ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ಪರಿಗಣಿಸಿ ಸಾಧುನವರ ಅವರನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಗೆಲ್ಲಿಸಿ ತರಲು ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ.

* ಪಕ್ಷದ ಜಿಲ್ಲಾ ಮಟ್ಟದ ಮುಖಂಡರಲ್ಲಿ ಒಗ್ಗಟ್ಟು ಕಾಣಿಸುತ್ತಿಲ್ಲ, ಜಿಲ್ಲೆಯ ಪ್ರಭಾವಿ ಮುಖಂಡ ರಮೇಶ ಜಾರಕಿಹೊಳಿ ಪ್ರಚಾರದಲ್ಲಿ ಕಾಣಿಸುತ್ತಿಲ್ಲ ಯಾಕೆ?
– ಪಕ್ಷದ ಮುಖಂಡರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ, ರಮೇಶ ಜಾರಕಿಹೊಳಿ ಇದುವರೆಗೆ ಪ್ರಚಾರದಲ್ಲಿ ಭಾಗವಹಿಸಿಲ್ಲ ಎನ್ನುವುದು ನಿಜ. ಅವರು ನಮ್ಮ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರನ್ನು ಪ್ರಚಾರಕ್ಕೆ ಕರೆತರುವ ಜವಾಬ್ದಾರಿಯನ್ನು ಅವರ ತಮ್ಮ, ಸಚಿವ ಸತೀಶ ಜಾರಕಿಹೊಳಿ ಅವರಿಗೆ ವಹಿಸಿಕೊಡಲಾಗಿದೆ. ಅವರು ಕರೆದುಕೊಂಡು ಬರುತ್ತಾರೆ ಎನ್ನುವ ವಿಶ್ವಾಸವಿದೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಸೇರಿ ಪ್ರಯತ್ನ ನಡೆಸುತ್ತೇವೆ.

* ಈ ಸಲ ಲೋಕಸಭೆಗೆ ಸ್ಪರ್ಧಿಸಲು ಕೇವಲ ಇಬ್ಬರು ಮಾತ್ರ ಟಿಕೆಟ್‌ ಕೇಳಿದ್ದರಂತೆ. ಯಾಕೆ ಕಾಂಗ್ರೆಸ್ಸಿಗರಲ್ಲಿ ಅಂತಹ ನಿರುತ್ಸಾಹ ಕಂಡುಬಂದಿತ್ತು?
ಪಕ್ಷದ ಹೈಕಮಾಂಡ್‌ ಮೊದಲು ನನಗೆ ಸ್ಪರ್ಧಿಸುವಂತೆ ಹೇಳಿತ್ತು. ಆದರೆ, ನಾನು ರಾಜ್ಯ ರಾಜಕಾರಣದಲ್ಲಿಯೇ ಇರಲು ಬಯಸಿದೆ. ಹೀಗಾಗಿ, ಲೋಕಸಭೆಗೆ ಒಲ್ಲೆ ಎಂದೆ. ನಂತರ ಸಾಧುನವರ ಹಾಗೂ ಶಿವಕಾಂತ ಸಿದ್ನಾಳ ಅವರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಯಿತು. ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ಪರಿಗಣಿಸಿ ಸಾಧುನವರ ಅವರನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಗೆಲ್ಲಿಸಿ ತರಲು ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT