ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020-ಬೆಳಗಾವಿ| ಮುಂಗಾರಲ್ಲಿ ನೆರೆ, ಅತಿವೃಷ್ಟಿ; ಸಂಕಷ್ಟ

ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ
Last Updated 29 ಡಿಸೆಂಬರ್ 2020, 7:28 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ 2020ನೇ ವರ್ಷದ ಮುಂಗಾರು ಹಂಗಾಮಿನಲ್ಲಿ ನೆರೆ ಮತ್ತು ಅತಿವೃಷ್ಟಿ ಜನರನ್ನು ಬಾಧಿಸಿತು. ಸಂಕಷ್ಟದೊಂದಿಗೆ ನಷ್ಟವನ್ನೂ ತಂದೊಡ್ಡಿತು. ರೈತರು ಬೆಳೆ ಕಳೆದುಕೊಂಡು ಕಂಗಾಲಾದರು. ಮೂಲಸೌಕರ್ಯಗಳು ಹಾನಿಗೊಳಗಾಗಿ ಜನರು ತೀವ್ರ ತೊಂದರೆಗಳನ್ನು ಎದುರಿಸಬೇಕಾಯಿತು.

ಜುಲೈ 1ರಿಂದ ಆ.31ರವರೆಗೆ 476 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, ವಾಸ್ತವವಾಗಿ 603 ಮಿ.ಮೀ. ಅಂದರೆ ಶೇ 27ರಷ್ಟು ಜಾಸ್ತಿ ಮಳೆ ಬಿದ್ದಿತು.

ಆಗಸ್ಟ್‌ 4, 5, 6, 7, 16, 17ರಂದು ಹಂಗಾಮಿನಲ್ಲೇ ಅತಿ ಹೆಚ್ಚು ಮಳೆ ಸುರಿಯಿತು. ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳಲ್ಲಿ ಮಹಾಪೂರ ಉಂಟಾಯಿತು. ಮೂಡಲಗಿ, ಗೋಕಾಕ, ಚಿಕ್ಕೋಡಿ, ರಾಮದುರ್ಗ ಮತ್ತು ನಿಪ್ಪಾಣಿಯಲ್ಲಿ 2,767 ಕುಟುಂಬಗಳ 28,743 ಮಂದಿಯನ್ನು ಸ್ಥಳಾಂತರಿಸಲಾಯಿತು. ಇವರಲ್ಲಿ 26,272 ಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು. ನಿರಾಶ್ರಿತರಾದ ಉಳಿದವರನ್ನು ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿತ್ತು. ಇಬ್ಬರು ಮೃತಪಟ್ಟರು. 11 ದನಗಳು ಸಾವಿಗೀಡಾದವು.

ಹುಕ್ಕೇರಿಯಲ್ಲಿ ಅವಾಂತರ

ಹುಕ್ಕೇರಿ ಪಟ್ಟಣದಲ್ಲಿ ಒಂದು ದಿನ ಸುರಿದ ‘ದಾಖಲೆ’ ಮಳೆಯಿಂದಾಗಿ ಅಪಾರ ಆಸ್ತಿಪಾಸ್ತಿ ಹಾನಿಯಾಯಿತು. ಗ್ಯಾರೇಜ್‌ನಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟರು. ಹಲವರು ನಿರಾಶ್ರಿತರಾದರು. ಪರಿಹಾರ ಕೇಂದ್ರವನ್ನೂ ಮಾಡಲಾಗಿತ್ತು.

ಜಿಲ್ಲೆಯಲ್ಲಿ 2,588 ಮನೆಗಳಿಗೆ ಹಾನಿಯಾಗಿ, ₹ 45.21 ಲಕ್ಷ ನಷ್ಟ ಸಂಭವಿಸಿತು. 1 ಲಕ್ಷ ಹೆಕ್ಟೇರ್‌ ಕೃಷಿ ಬೆಳೆಗಳು ಮುಳುಗಿದ್ದರಿಂದ ₹ 1,334.03 ಕೋಟಿ, 3,479.6 ಹೆಕ್ಟೇರ್‌ ತೋಟಗಾರಿಕಾ ಬೆಳೆಗಳು ಹಾನಿಗೊಳಗಾದವು. ಇದರಿಂದ ₹ 37.59 ಕೋಟಿ ನಷ್ಟವಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಗೆ ರೈತರು ತಲುಪಿದರು. ಸೋಯಾಅವರೆ, ಹೆಸರು, ಮೆಕ್ಕೆಜೋಳ, ಹತ್ತಿ, ಕಬ್ಬು ಹಾಗೂ ಭತ್ತದ ಬೆಳೆಗಳು ಜಲಾವೃತವಾದವು. ಈ ಪೈಕಿ ಬಹಳ ಕ್ಷೇತ್ರಗಳಲ್ಲಿ ಬೆಳೆಗಳು ಕೊಳೆತು ಹೋದವು.

ಜೊತೆಗೆ 900.77 ಕಿ.ಮೀ. ರಸ್ತೆ, 134 ಸೇತುವೆಗಳು, ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಲಭ್ಯಗಳಿಗೆ ಹಾನಿಯಾಯಿತು. ಜಿಲ್ಲೆಯಲ್ಲಿ ಒಟ್ಟು ಆದ ನಷ್ಟ ₹ 1,702.49 ಕೋಟಿ.

ವೈಮಾನಿಕ ಸಮೀಕ್ಷೆ, ಅಧ್ಯಯನ

ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್, ದೂಧ್‍ಗಂಗಾ ಮತ್ತು ವೇದಗಂಗಾ ನದಿಗಳ ಮೂಲಕ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.51 ಕ್ಯುಸೆಕ್ ನೀರು ಹರಿದು ಬಂದಿದ್ದರಿಂದ ಕೃಷ್ಣೆ ಮೈದುಂಬಿಕೊಂಡು ಹರಿದು ನೆರೆ ಭೀತಿ ಸೃಷ್ಟಿಯಾಗಿತ್ತು. ಆ. 18ರಂದು ಕೃಷ್ಣಾ ನದಿಗೆ 1.81 ಲಕ್ಷ ಕ್ಯುಸೆಕ್ ನೀರು ಹರಿದು ಬಂದ ಪರಿಣಾಮ ಜಲಾವೃತಗೊಳ್ಳುತ್ತಿದ್ದ ಇಂಗಳಿ ಗ್ರಾಮದ ಮಾಳಭಾಗ ತೋಟಪಟ್ಟಿ ಜನವಸತಿ ಪ್ರದೇಶಗಳಿಂದ ಜನ ಮತ್ತು ಜಾನುವಾರುಗಳನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಅ.2ರಂದು ಚಿಕ್ಕೋಡಿ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಮತ್ತು ತಂಬಾಕು ಬೆಳೆಗಳು ಹಾನಿಗೀಡಾದವು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿಯಿಂದಲೇ ವೈಮಾನಿಕ ಸಮೀಕ್ಷೆ ನಡೆಸಿದರು. ಕೇಂದ್ರ ಅಧ್ಯಯನ ತಂಡವೂ ಜಿಲ್ಲೆಗೆ ಭೇಟಿ ನೀಡಿ, ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ಅಧ್ಯಯನ ನಡೆಸಿತು. ಇಂದಿಗೂ ಬಹಳಷ್ಟು ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ಆಗ್ರಹಿಸಿ ಅವರಿಂದ ಪ್ರತಿಭಟನೆಗಳು ಮುಂದುವರಿದಿವೆ.

ಅತಿವೃಷ್ಟಿಯಿಂದಾಗಿ ಜಲ ಮೂಲಗಳು ಭರ್ತಿಯಾದದ್ದು ಧನಾತ್ಮಕ ಸಂಗತಿ. 2019ರಲ್ಲೂ ಅತಿಯಾಗಿ ಮಳೆಯಾಗಿ ಜಲಾಶಯಗಳು ತುಂಬಿದ್ದರಿಂದಾಗಿ 2020ರ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಅಷ್ಟಾಗಿ ಬಾಧಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT