ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರಸ್ತೆಗಳು ದುಃಸ್ಥಿತಿಯಲ್ಲಿವೆ, ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿ!

ಜಿಲ್ಲೆಯಾದ್ಯಂತ ಹಾಳಾದ ರಸ್ತೆಗಳು; ಸಾರ್ವಜನಿಕರು ಹೈರಾಣ
Last Updated 19 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಬೆಳಗಾವಿ: ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿ...!

– ಇದು ಕೊರೊನಾ ವಿಷಯದಲ್ಲಿ ನೀಡುತ್ತಿರುವ ಸಲಹೆಯಲ್ಲ. ಜಿಲ್ಲೆಯಾದ್ಯಂತ ರಸ್ತೆಗಳು ದುಃಸ್ಥಿತಿಗೆ ತಲುಪಿರುವುದರಿಂದಾಗಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಕೊಡುತ್ತಿರುವ ಮುನ್ಸೂಚನೆ.

ಹೌದು. ಸತತ ಮಳೆಯಿಂದಾಗಿ ಹೆದ್ದಾರಿಗಳು, ಜಿಲ್ಲಾ ಪ್ರಮುಖ ರಸ್ತೆಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ‘ಹೊಂಡ’, ‘ಗುಂಡಿ’ಮಯವಾಗಿವೆ. ಕೆಲವೆಡೆ ಕೆಸರು ಗದ್ದೆಗಳಂತಾಗಿವೆ. ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಯೊಳಗೆ ಮುಳುಗಿವೆಯೋ ಎನ್ನುವಂತಹ ಚಿತ್ರಣಗಳು ಅಲ್ಲಲ್ಲಿ ಇವೆ.

ವಾಹನಗಳು ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾದ ಸ್ಥಿತಿ ಹಲವು ಕಡೆಗಳಲ್ಲಿದೆ. ಕೊಂಚ ನಿಯಂತ್ರಣ ತಪ್ಪಿದರೂ ಅನಾಹುತ ಖಚಿತ ಎನ್ನುವಂತಹ ಸ್ಥಿತಿ ನಗರವೂ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲ ಮುಗಿಯುವವರೆಗೂ ದುರಸ್ತಿ ಅಥವಾ ಅಭಿವೃದ್ಧಿ ಕಾಮಗಾರಿ ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ, ಜನರು ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ!

‘ಸ್ಮಾರ್ಟ್‌’ ಆಗಲಿಲ್ಲ!:ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ವಿವಿಧ ಪ್ಯಾಕೇಜ್‌ಗಳ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಕೆಲವು ಕಡೆಗಳಲ್ಲಿ ಮುಗಿದಿದೆ. ಬಹುತೇಕ ಕಡೆಗಳಲ್ಲಿ ಇನ್ನೂ ಪ್ರಗತಿಯಲ್ಲೇ ಇದೆ. ಕೋವಿಡ್–19 ಲಾಕ್‌ಡೌನ್ ಹಾಗೂ ಮಳೆಯಿಂದ ಅಭಿವೃದ್ಧಿ ಕಾಮಗಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ‘ಹೊಂಡ ಸಿಟಿ’ಯಿಂದಾಗಿ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ.

ನಗರದ ಹಲವು ಕಡೆಗಳಲ್ಲಿ ಒಂದು ಬದಿಯಲ್ಲಿ ಕಾಮಗಾರಿ ನಡೆದಿದ್ದರೆ, ಇನ್ನೊಂದು ಬದಿಯಲ್ಲಷ್ಟೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಡಕು ಉಂಟಾಗುತ್ತಿದೆ. ದುರಸ್ತಿಗೆ ಜನಪ್ರತಿನಿಧಿಗಳು ಗಮನಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಆಗ್ರಹವಾಗಿದೆ.

‘ಜಿಲ್ಲೆಯಲ್ಲಿ ಇಲಾಖೆ ವ್ಯಾಪ್ತಿಗೆ ಸೇರಿದ ರಸ್ತೆಗಳಲ್ಲಿ ಅ. 14ರವರೆಗೆ 294.79 ಕಿ.ಮೀ. ಪ್ರಮುಖ ರಸ್ತಗಳು, 143.26 ಕಿ.ಮೀ. ರಾಜ್ಯ ಹೆದ್ದಾರಿಗಳು ಮಳೆ ಮತ್ತು ಪ್ರವಾಹದಿಂದ ಹಾಳಾಗಿವೆ. ದುರಸ್ತಿಗಾಗಿ ₹ 301.92 ಕೋಟಿ ಅನುದಾನ ಕೋರಿದ್ದೇವೆ. ಆಗಸ್ಟ್‌ನಲ್ಲಿ ಆದ ಹಾನಿಗೆ ಸಂಬಂಧಿಸಿದಂತೆ ಚಿಕ್ಕೋಡಿ ವಿಭಾಗಕ್ಕೆ ₹ 20 ಕೋಟಿ, ಬೆಳಗಾವಿಗೆ ₹ 25 ಕೋಟಿ ದೊರೆತಿದೆ. ಅದರಲ್ಲಿ ಕೆಲವು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಪಿ.ವೈ. ಪವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಳೆ ನಿಂತ ನಂತರ ಗುಂಡಿಗಳನ್ನು ಮುಚ್ಚಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

ರಸ್ತೆ ತುಂಬಾ ಗುಂಡಿಗಳು:ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಅಂತರರಾಜ್ಯ ರಸ್ತೆಯು ಚಿಕ್ಕೋಡಿ ತಾಲ್ಲೂಕಿನ ಶಮನೇವಾಡಿ-ಬೇಡಕಿಹಾಳ ಕ್ರಾಸ್‌ನಿಂದ ನೇಜ್ ಕ್ರಾಸ್‌ವರೆಗೆ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ಲಘು ಮತ್ತು ಭಾರಿ ವಾಹನಗಳು ಸಂಚರಿಸುತ್ತವೆ. ಚಾಲಕರು ಹಾಗೂ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ!

ಸಚಿವೆ ಶಶಿಕಲಾ ಜೊಲ್ಲೆ ಅವರು ₹ 1 ಕೋಟಿ ಅನುದಾನದಲ್ಲಿ ಬೇಡಕಿಹಾಳ ಕ್ರಾಸ್‌ನಿಂದ 1,100 ಮೀಟರ್ ರಸ್ತೆ ಡಾಂಬರೀಕರಣ ಮಾಡಿಸಿದ್ದಾರೆ. ಉಳಿದ ಒಂದೂವರೆ ಕಿ.ಮೀ. ನಷ್ಟು ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಸುಧಾರಣೆಗೆ ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಸುಗಮ ಸಂಚಾರಕ್ಕೆ ತೊಂದರೆ:ಖಾನಾಪುರ ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಪ್ರಮುಖ ಸಂಪರ್ಕ ರಸ್ತೆಗಳಾದ ಸಿಂಧನೂರು-ಹೆಮ್ಮಡಗಾ, ಜಾಂಬೋಟಿ-ಜತ್ತ, ಬೆಳಗಾವಿ– ತಾಳಗುಪ್ಪ, ನಾಗರಗಾಳಿ-ಕಟಕೋಳ ರಾಜ್ಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನಗಳು ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಖಾನಾಪುರ-ಲೋಂಡಾ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಕಾರಣ ಜೋರು ಮಳೆ ಬಂದರೆ ಸಂಚಾರ ಸ್ಥಗಿತಗೊಂಡು ಸಮಸ್ಯೆ ಸೃಷ್ಟಿಯಾಗುತ್ತಿದೆ. ಪಾರಿಶ್ವಾಡ-ಅವರೊಳ್ಳಿ, ನೀಲಾವಡೆ-ಕಾನಸುಲಿ, ಗರ್ಲಗುಂಜಿ-ರಾಜಹಂಸಗಡ, ತೋರಾಳಿ-ಬೈಲೂರು ಮತ್ತಿತರ ಗ್ರಾಮೀಣ ರಸ್ತೆಗಳೂ ದುಃಸ್ಥಿತಿಯಲ್ಲಿವೆ.

ಕೆಸರು ಗದ್ದೆಯಾಗಿವೆ:ಸತತ ಮಳೆಯಿಂದ ಸವದತ್ತಿ ತಾಲ್ಲೂಕಿನ ಭಾಗಶಃ ರಸ್ತೆಗಳು ಹಾಳಾಗಿದ್ದು, ಜನರು ರಸ್ತೆಗಿಳಿಯಲು ಯೋಚಿಸುವಂತಾಗಿದೆ. ಲಾಕ್‌ಡೌನ್‌ ಹಾಗೂ ‌ನಂತರದಲ್ಲಿ ನಿರಂತರ ಮಳೆಯಿಂದ ರಸ್ತೆ ನಿರ್ಮಾಣ ಕಾಮಗಾರಿಗಳೂ ವಿಳಂಬವಾಗಿವೆ. ಇದರಿಂದ ರಸ್ತೆಗಳಲ್ಲಿ ಬಿದ್ದಿದ್ದ ತೆಗ್ಗು ಹೊಂಡಗಳಾಗಿ ಮಾರ್ಪಟ್ಟಿವೆ.

ಹೀರೆಕುಂಬಿ-ಹಂಚಿನಾಳ ಮಾರ್ಗದ ಏಳೆಂಟು ಕಿ.ಮೀ.ಗಳಷ್ಟು ರಸ್ತೆ ಜಿಲ್ಲಾ ಗಡಿಯವರೆಗೂ ಸಂಪೂರ್ಣ ಹಾಳಾಗಿದೆ. ಕೆಸರಿನಿಂದ ಕೂಡಿದೆ. ಇದರಿಂದ ಹುಬ್ಬಳ್ಳಿ, ಅಳಗೋಡಿ ಹಾಗೂ ನವಲಗುಂದ ತೆರಳುವವರು ಪರದಾಡುವಂತಾಗಿದೆ.

ಡಿಸಿಎಂ ಮನೆ ಮುಂದೆಯೂ...

ಅಥಣಿ ಪಟ್ಟಣದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮನೆಯ ರಸ್ತೆ ಗುಂಡಿಗಳಿಂದ ತುಂಬಿದೆ. ಎರಡು ತಿಂಗಳಿಗೊಮ್ಮೆ ಗುಂಡಿ ಮುಚ್ಚುವುದು ನಡೆಯುತ್ತಿದೆ. ಮತ್ತೆ ಅವು ಬಾಯ್ತೆರೆಯುತ್ತಿವೆ. ಎರಡು ವರ್ಷಗಳಿಂದಲೂ ಹೀಗೆಯೇ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅಥಣಿ-ಕೊಟ್ಟಲಗಿ ರಸ್ತೆಯೂ ದುಃಸ್ಥಿತಿಯಲ್ಲಿದೆ. ಸಾರ್ವಜನಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ದುರಸ್ತಿಯಾಗಿಲ್ಲ.

ಸಾರ್ವಜನಿಕರಿಗೆ ತೊಂದರೆಬೈಲಹೊಂಗಲ ಪಟ್ಟಣ ಸೇರಿದಂತೆ ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಮುರಗೋಡ, ಹೊಸೂರ ರಸ್ತೆಯಿಂದ ಬೆಳಗಾವಿ-ಬೈಲಹೊಂಗಲ ಬೈಪಾಸ್ ಚನ್ನಮ್ಮನ ವೃತ್ತದವರೆಗಿನ ಜೋಡಿ ರಸ್ತೆಗಳು ಪೂರ್ತಿಹಾಳಾಗಿವೆ. ಶಾಸಕರ ಮನೆ ಎದುರು ಗುಂಡಿ ಬಿದ್ದಿದ್ದರೂ ಅದನ್ನು ಮುಚ್ಚುವ ಕಾರ್ಯ ಕೂಡ ನಡೆದಿಲ್ಲ. ಬಜಾರ್‌ ರಸ್ತೆಯಲ್ಲಿ 6 ತಿಂಗಳ ಹಿಂದೆ ಅರ್ಧ ಭಾಗ ರಸ್ತೆ ನಿರ್ಮಿಸಲಾಗಿದೆ. ಇನ್ನರ್ಧ ಭಾಗ (ವಾಸನಕೂಟದಿಂದ ಅಂಬೇಡ್ಕರ್‌ ಉದ್ಯಾನ) ರಸ್ತೆ ನಿರ್ಮಾಣ ಪೂರ್ಣಗೊಂಡಿಲ್ಲ. ಇದರಿಂದ ಅಂಗಡಿಕಾರರಿಗೂ ತೊಂದರೆ ಆಗಿದೆ.

ದೊಡ್ಡ ಕೆರೆ ಪಕ್ಕದ ಸಾಯಿಮಂದಿರ, ಮರಡಿ ಬಸವೇಶ್ವರ ದೇವಸ್ಥಾನ ರಥ ಬೀದಿ, ಗುರು ಮಡಿವಾಳೇಶ್ವರ ದೇವಸ್ಥಾನ, ಎಂ.ಜೆ. ಹೌಸಿಂಗ್ ಕಾಲೊನಿಯ ಈಟಿ ಬಸವೇಶ್ವರ ದೇವಸ್ಥಾನ, ಪ್ರಭುನಗರದ ರಾಘವೇಂದ್ರ ಸ್ವಾಮಿ ದೇವಸ್ಥಾನ ಸಂಪರ್ಕಿಸುವ ಮುಖ್ಯ ರಸ್ತೆಗಳೂ ಹಾಳಾಗಿವೆ. ತಾಲ್ಲೂಕಿನ ಆನಿಗೋಳ, ವಕ್ಕುಂದ, ಕೊರವಿನಕೊಪ್ಪ, ಬೈಲವಾಡ, ಯರಡಾಲ, ನೇಗಿನಹಾಳ, ಹೊಳಿಹೊಸೂರ, ಎಂ.ಕೆ. ಹುಬ್ಬಳ್ಳಿಯಲ್ಲೂ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್ ಕಂಡುಬರುತ್ತಿದೆ.

ಅಂಕಿ ಅಂಶ

*ಜಿಲ್ಲೆಯಲ್ಲಿ ‍ಆಗಸ್ಟ್‌ ಪ್ರವಾಹದಿಂದ ಹಾಳಾಗಿರುವ ರಸ್ತೆಗಳು:900.77 ಕಿ.ಮೀ.

* ಆಗಿರುವ ಅಂದಾಜು ನಷ್ಟ:₹ 207.36 ಕೋಟಿ

* ಪಿಡಬ್ಲ್ಯುಡಿ ಇಲಾಖೆ ವ್ಯಾಪ್ತಿಯ ಜಿಲ್ಲಾ ‍ಪ್ರಮುಖ ರಸ್ತೆಗಳು ಹಾಳಾಗಿವೆ:300 ಕಿ.ಮೀ.

* ದುಃಸ್ಥಿತಿಯಲ್ಲಿರುವ ರಾಜ್ಯ ಹೆದ್ದಾರಿ:143.26 ಕಿ.ಮೀ.

* ಪಿಡಬ್ಲ್ಯುಡಿ ಇಲಾಖೆಯಿಂದ ಕೇಳಿರುವ ಅನುದಾನ:₹ 301.92 ಕೋಟಿ

* ಪಿಡಬ್ಲ್ಯುಡಿ ಇಲಾಖೆಗೆ ರಸ್ತೆ ದುರಸ್ತಿಗೆ ಬಂದಿರುವ ಅನುದಾನ:₹ 45 ಕೋಟಿ

ಪ್ರತಿಕ್ರಿಯೆ

ಜಮಖಂಡಿ ಸಂಪರ್ಕಿಸುವ ಡಿಸಿಎಂ ಲಕ್ಷ್ಮಣ ಸವದಿ ಅವರ ಮನೆ ಎದುರಿನ ರಸ್ತೆ ಹಾಳಾಗಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅವರಿಂದ ಅಭಿವೃದ್ಧಿಯ ನಿರೀಕ್ಷೆ ಹುಸಿಯಾಗಿದೆ
-ಬಾಬು ಮಾಂಗ,ಅಥಣಿ

ಬೈಲಹೊಂಗಲದಲ್ಲಿ ಮಳೆಯಿಂದಾಗಿ ಕಾಮಗಾರಿ ನಡೆಸಲಾಗಿಲ್ಲ. ಮಳೆ ಕಡಿಮೆಯಾದ ತಕ್ಷಣ ರಾಯಣ್ಣ ವೃತ್ತದಿಂದ ಇಂಚಲ ಕ್ರಾಸ್ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು.
- ವಿ.ಎಸ್. ಆನಿಕಿವಿ,ಲೋಕೋಪಯೋಗಿ ಇಲಾಖೆ ಅಧಿಕಾರಿ,ಬೈಲಹೊಂಗಲ

ಬೆಳಗಾವಿ ನಗರದ ರಸ್ತೆಗಳ ಅಭಿವೃದ್ಧಿಗೆ ₹ 320 ಕೋಟಿ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಕೋರಿದ್ದೇನೆ
- ಅಭಯ ಪಾಟೀಲ,ಶಾಸಕ, ಬೆಳಗಾವಿ ದಕ್ಷಿಣ

(ಪ್ರಜಾವಾಣಿ ತಂಡ: ಪರಶುರಾಮ ನಂದೇಶ್ವರ, ಪ್ರಸನ್ನ ಕುಲಕರ್ಣಿ, ರವಿ ಎಂ. ಹುಲಕುಂದ, ಸುಧಾಕರ ತಳವಾರ, ಬಸವರಾಜ ಶಿರಸಂಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT