ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಉರುಳಾದ ಕುತ್ತಿಗೆ ಹಗ್ಗ: ಜೋಡೆತ್ತು ಸಾವು

Last Updated 4 ಅಕ್ಟೋಬರ್ 2022, 10:25 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಪ್ರಭುನಗರದಲ್ಲಿ ಮಂಗಳವಾರ, ಕೊಟ್ಟಿಗೆಯಲ್ಲಿ ಕಟ್ಟಿದ ಹಗ್ಗವೇ ಉರುಳಾಗಿ ಜೋಡೆತ್ತು ಮೃತಪಟ್ಟಿವೆ.

ಪ್ರಭುನಗರದ ನಾಲ್ಕನೇ ಅಡ್ಡರಸ್ತೆಯ ನಿವಾಸಿ, ಸಾಬವ್ವ ಹುಡೇದ ಅವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ. ಇವುಗಳ ಅಂದಾಜು ಬೆಲೆ ₹ 6 ಲಕ್ಷ ಎಂದು ತಿಳಿಸಲಾಗಿದೆ.

ಹಬ್ಬದ ದಿನವಾದ್ದರಿಂದ ಮಂಗಳವಾರ ಎತ್ತುಗಳನ್ನು ಹೊಲಕ್ಕೆ ಒಯ್ದಿರಲಿಲ್ಲ. ಕೊಟ್ಟಿಗೆಯಲ್ಲಿ ಕಂಬಕ್ಕೆ ಎರಡೂ ಎತ್ತುಗಳನ್ನು ಕಟ್ಟಲಾಗಿತ್ತು. ಎತ್ತುಗಳು ಎಳೆದಾಡಿದ್ದರಿಂದ ಕಂಬ ಕಿತ್ತುಬಿದ್ದಿತು. ಅದಕ್ಕೆ ಕಟ್ಟಿದ ಹಗ್ಗ ಎತ್ತುಗಳ ಕೊರಳಿಗೆ ಬಿಗಿದುಕೊಂಡಿತು. ನೋವಿನಿಂದ ಎತ್ತುಗಳು ಎಳೆದಾಡಿದಷ್ಟು ಹಗ್ಗ ಕೊರಳಿಗೆ ಬಿಗಿಯಾಗಿ ಎರಡೂ ಎತ್ತು ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಕುಟುಂಬದವರು ಮಾಹಿತಿ ನೀಡಿದರು.

ಮುಗಿಲು ಮುಟ್ಟಿದ ಆಕ್ರಂದನ

ರೈತ ಮಹಿಳೆ ಸಾಬವ್ವ ಅವರ ಕುಟುಂಬಕ್ಕೆ ಆಧಾರವಾಗಿದ್ದ ಜೋಡೆತ್ತು ಏಕಾಏಕಿ ಸತ್ತಿದ್ದರಿಂದ ಕುಟುಂಬಕ್ಕೆ ದಿಗಿಲು ಬಡಿದಂತಾಗಿದೆ.

"ನನ್ನ ಮಕ್ಕಳಂತೆಯೇ ಎತ್ತುಗಳನ್ನು ಅಕ್ಕರೆಯಿಂದ ಸಾಕಿದ್ದೆ. ದುಡಿಯುವ ಮಕ್ಕಳೇ ಈಗ ಹೋದರು. ನಮಗೆ ಇನ್ಯಾರು ದಿಕ್ಕು ದೇವರೆ! ಹಬ್ಬದ ದಿನವೇ ನನ್ನ ಮನೆ ಸ್ಮಶಾನವಾಯಿತು. ಮೂಕ ಪ್ರಾಣಿಗಳನ್ನು ಕೊಂದು ದೇವರು ಮೋಸ ಮಾಡಿದ..." ಎಂದು ಸಾಬವ್ವ ಕಣ್ಣೀರು ಹಾಕಿದರು.

ಅವರನ್ನು ಸಮಾಧಾನ ಮಾಡಲು ಸುತ್ತಲಿನ ಜನ ಕಷ್ಟಪಡಬೇಕಾಯಿತು. ಆಳೆತ್ತರದ ಎತ್ತುಗಳು ಸತ್ತು ಬಿದ್ದಿದ್ದನ್ನು ಕಂಡು ಜನ ಮಮ್ಮಲ ಮುಗಿದರು.

ಗ್ರಾಮ ಲೆಕ್ಕಾಧಿಕಾರಿ ಪಿ.ಎಂ.ಕಮ್ಮಾರ, ಪಶು ವೈದ್ಯ ಡಾ.ಮಹೇಶ ಮೇಟಿ ಭೇಟಿ ನೀಡಿದರು.

ಅಂತಿಮ ದರ್ಶನ, ಗೌರವಯುತ ಅಂತ್ಯಕ್ರಿಯೆ

ಎತ್ತುಗಳ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಹರಿದಾಡಿತು. ಅಪಾರ ಸಂಖ್ಯೆಯಲ್ಲಿ ಜನ ಸ್ಥಳಕ್ಕೆ ಬಂದರು.

ಇದರಿಂದ ಎತ್ತುಗಳ ಅಂತಿಮ‌ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಯಿತು. ಮೈ ತೊಳೆದು, ಬಣ್ಣ ಬಳಿದು, ಅಲಂಕಾರ ಮಾಡಿ, ಪೂಜಿಸಲಾಯಿತು.

ಹಲವು ಜನ ಮಾಲೆ ಹಾಕಿ ಕೈ ಮುಗಿದು ಅಂತಿಮ ದರ್ಶನ ಪಡೆದರು. ನಂತರ ಕಳೇಬರಗಳನ್ನು ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.

ಎತ್ತುಗಳು ದುಡಿಯುತ್ತಿದ್ದ ಜಮೀನಿನಲ್ಲಿಯೇ ಸಕಲ ವಿಧಿ, ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬದ ಸದಸ್ಯರು ಅಗಲಿದಾಗ ಮಾಡುವ ಎಲ್ಲ ಕ್ರಿಯೆಗಳನ್ನೂ ಸಾಬವ್ವ ಅವರ ಬಂಧುಗಳು ನೆರವೇರಿಸಿದರು.

ಕ್ರೇನುಗಳನ್ನು ಬಳಸಿ ಎತ್ತುಗಳನ್ನು ಕುಣಿ ಸೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT