ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಡ್ಡಿ ಸಮಾಜ ಒಗ್ಗಟ್ಟು ಪ್ರದರ್ಶಿಸಲಿ: ಸಚಿವ ರಾಮಲಿಂಗಾರಡ್ಡಿ

ಹೇಮರಡ್ಡಿ ಮಲ್ಲಮ್ಮನ ಜಯಂತ್ಯುತ್ಸವದಲ್ಲಿ ಸಚಿವ ರಾಮಲಿಂಗಾರಡ್ಡಿ
Published 23 ಮೇ 2024, 15:39 IST
Last Updated 23 ಮೇ 2024, 15:39 IST
ಅಕ್ಷರ ಗಾತ್ರ

ರಾಮದುರ್ಗ: ಸಮಾಜದ ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಿದರೆ ಸಮುದಾಯದ ಪ್ರಗತಿ ಸಾಧ್ಯ ಎಂದು ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವ ರಾಮಲಿಂಗಾರಡ್ಡಿ ಹೇಳಿದರು.

ರಾಮದುರ್ಗ ತಾಲ್ಲೂಕಿನ ಚಿಪ್ಪಲಕಟ್ಟಿ ಗ್ರಾಮದಲ್ಲಿ ರಡ್ಡಿ ಸಮಾಜದವರು ಏರ್ಪಡಿಸಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟಿನ ಫಲವಾಗಿ ವೇಮನ, ಮಲ್ಲಮ್ಮನ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಡ್ಡಿ ಸಮುದಾಯದ ಅನೇಕ ಬೇಡಿಕೆಗಳನ್ನು ಈಡೆರಿಸಿದ್ದಾರೆ. ವೇಮನ ಪೀಠ, ಕೆ.ಸಿ. ರೆಡ್ಡಿ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘಟಿತ ಹೋರಾಟದ ಮೂಲಕ ಸಮುದಾಯದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ವರ್ಷದಲ್ಲಿ ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಗಳ ಮಧ್ಯಭಾಗದಲ್ಲಿ ಅಖಿಲ ಭಾರತ ರಡ್ಡಿ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕ ಸೇರಿದಂತೆ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಒಳಗೊಂಡು ಅನೇಕ ರಾಜ್ಯಗಳ ರಡ್ಡಿ ಬಂಧುಗಳನ್ನು ಒಗ್ಗೂಡಿಸಲಾಗುವುದು ಎಂದು ಹೇಳಿದರು.

ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕು. ಇದರಿಂದ ಕೇವಲ ರಡ್ಡಿ ಸಮುದಾಯದ ಮಕ್ಕಳಿಗೆ ಅನುಕೂಲತೆ ಜೊತೆಗೆ ಇತರೆ ಸಮುದಾಯದ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರಮುಖರು ಚಿಂತನೆ ನಡೆಸಬೇಕು ಎಂದು ಹೇಳಿದರು.

ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜೀವನ ಚರಿತ್ರೆ ಅತ್ಯಂತ ಮಹತ್ವದ್ದಾಗಿವೆ.. ಇಂದಿನ ಮಹಿಳೆಯರು ಮಲ್ಲಮ್ಮನ ಆದರ್ಶಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಕುಟುಂಬ ಮಾಡಿಕೊಳ್ಳಬೇಕು ಎಂದರು.

ಮಾಜಿ ಸಚಿವ ಹಾಗೂ ಬಾಗಲಕೋಟೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬೆಂಗಳೂರ ರೆಡ್ಡಿ ಜನಸಂಘದ ನಿರ್ದೇಶಕರಾದ ಶೇಖರ ರೆಡ್ಡಿ, ಕೃಷ್ಣಾರೆಡ್ಡಿ ಸೇರಿದಂತೆ ಅನೇಕರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.

ಯರೇಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಚಿಪ್ಪಲಕಟ್ಟಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಪ್ಪಲಕಟ್ಟಿ ಹಿರೇಮಠದ ಕಲ್ಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಸಂತ ಕುಲಗೋಡ ಸ್ವಾಗತಿಸಿದರು. ಆರ್.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಬೂದಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT