ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಲಿಂಗಪ್ಪ ಸಂಸ್ಥೆಗೆ ರಾಜ್ಯಮಟ್ಟದ ಸ್ಥಾನ

ಮಂಡ್ಯದಲ್ಲಿ ಕೇಂದ್ರವಷ್ಟೆ ಕಾರ್ಯನಿರ್ವಹಣೆ
Last Updated 11 ಜನವರಿ 2021, 9:44 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಇನ್ಮುಂದೆ ರಾಜ್ಯ ಮಟ್ಟದ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಸಕ್ಕರೆ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಸಂಸ್ಥೆಯಲ್ಲಿ ಸೋಮವಾರ ನಡೆದ 14ನೇ ವಾರ್ಷಿಕ ಸರ್ವ ಸಾಧಾರಣಾ ಮಹಾಸಭೆಯಲ್ಲಿ ಈ ವಿಷಯ ಘೋಷಿಸಲಾಯಿತು.

ಮಂಡ್ಯದಲ್ಲಿ 2011ರಲ್ಲಿ ಸ್ಥಾಪಿಸಿರುವ ‘ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆ’ಯನ್ನು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯೊಂದಿಗೆ ವಿಲೀನಕ್ಕೆ ತೀರ್ಮಾನಿಸಲಾಯಿತು. ‘ಈ ಮೂಲಕ ಸಂಸ್ಥೆಯು, ರಾಜ್ಯಮಟ್ಟದ ಉತ್ತರ ಹಾಗೂ ದಕ್ಷಿಣ ಭಾಗದ ಕಬ್ಬು ಬೆಳೆ ಮತ್ತು ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದ ಸಂಶೋಧನೆ, ಅಭಿವೃದ್ಧಿ ಮೊದಲಾದ ಚಟುವಟಿಕೆಗಳನ್ನು ಕೈಗೊಳ್ಳಲಿದೆ. ಮಂಡ್ಯದಲ್ಲಿ ಸಂಸ್ಥೆಯ ಕೇಂದ್ರವಷ್ಟೆ ಕಾರ್ಯನಿರ್ವಹಿಸಲಿದೆ. ಅಲ್ಲಿ ಪ್ರತ್ಯೇಕ ಸಂಸ್ಥೆ ನಿರ್ವಹಿಸುವುದಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿತ್ತು. ಇದನ್ನು ತಪ್ಪಿಸಲು ವಿಲೀನದ ನಿರ್ಣಯ ಕೈಗೊಳ್ಳಲಾಗಿದೆ. ಆಡಳಿತ ಮಂಡಳಿಗೆ ಆ ಭಾಗದವರನ್ನು ಕೂಡ ಸೇರಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಮಂಡ್ಯದಲ್ಲಿ ಸಂಸ್ಥೆ ಸ್ಥಾಪನೆಯಾದ ಬಳಿಕ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಬೆಳಗಾವಿ ಹಾಗೂ ಕಲಬುರ್ಗಿ ಕಂದಾಯ ವಿಭಾಗಗಳಿಗೆ ಸೀಮಿತವಾಗಿತ್ತು.

ರೈತರಿಗೆ ಸಕ್ಕರೆಯೊಂದಿಗೆ ಇತರ ಬೆಳೆಗಳಿಗೂ ತಾಂತ್ರಿಕ ಮಾರ್ಗದರ್ಶನ ಮತ್ತು ವಿಸ್ತರಣಾ ಸೇವೆ ನೀಡುವುದಕ್ಕಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಆರಂಭಿಸಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಲಾಯಿತು.

‘2020–21ನೇ ಸಾಲಿನಿಂದ ಎಂ.ಎಸ್ಸಿ. (ಸಕ್ಕರೆ ತಂತ್ರಜ್ಞಾನ) ಹಾಗೂ ಎಂ.ಎಸ್ಸಿ. (ಆಲ್ಕೊಹಾಲ್ ಟೆಕ್ನಾಲಜಿ) ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಇದರಿಂದ, ಸಕ್ಕರೆ ಉದ್ಯಮಕ್ಕೆ ಮಧ್ಯಮ ಮತ್ತು ಮೇಲಿನ ಹಂತದಲ್ಲಿ ನುರಿತ ಮಾನವ ಸಂಪನ್ಮೂಲ ಒದಗಿಸಬಹುದಾಗಿದೆ. ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದೂ ಸಾಧ್ಯವಾಗಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ. ಖಾಂಡಗಾವೆ ತಿಳಿಸಿದರು.

ಬಳಿಕ, ಉತ್ತರ ಸಕ್ಕರೆ ಕಾರ್ಖಾನೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

***

2019-20ನೇ ಸಾಲಿನ ಪ್ರಶಸ್ತಿ ಪ್ರದಾನ

* ರಾಜ್ಯದ ಒಟ್ಟಾರೆ ಉತ್ತಮ ತಾಂತ್ರಿಕ ಕಾರ್ಯದಕ್ಷತೆ: ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ.

* ಉತ್ತಮ ಕಾರ್ಯದಕ್ಷತೆ ಸಹಕಾರಿ ಸಕ್ಕರೆ ಕಾರ್ಖಾನೆ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಚಿದಾನಂದಬಸವಪ್ರಭು ಸಹಕಾರಿ ಸಕ್ಕರೆ ಕಾರ್ಖಾನೆ.

ಉತ್ತರ ತಾಂತ್ರಿಕ ಸಕ್ಕರೆ ಕಾರ್ಖಾನೆ ಪ್ರಶಸ್ತಿ

ವಾಯವ್ಯ ವಲಯ: ಬೆಳಗಾವಿ ಜಿಲ್ಲೆ ರಾಮದುರ್ಗದ ಖಾನಪೇಟೆಯ ಇಐಡಿ ಪ್ಯಾರಿ ಶುಗರ್ಸ್ ಲಿ. ಪ್ರಥಮ, ವಿಜಯಪುರ ಜಿಲ್ಲೆ ಕಾರಜೋಳದ ಬಸವೇಶ್ವರ ಶುಗರ್ಸ್ ಲಿ. ದ್ವಿತೀಯ ಮತ್ತು ಬೆಳಗಾವಿ ಜಿಲ್ಲೆ ಗೋಕಾಕ ತಾ.ಹುಣಶ್ಯಾಳದ ಸತೀಶ ಶುಗರ್ಸ್ ಲಿ. ತೃತೀಯ.

ಈಶಾನ್ಯ ವಲಯ: ಬೀದರ್ ಜಿಲ್ಲೆ ಭಾಲ್ಕೇಶ್ವರ ಶುಗರ್ಸ್‌ ಲಿ. ಪ್ರಥಮ ಹಾಗೂ ಮಹಾತ್ಮ ಗಾಂಧಿ ಸಕ್ಕರೆ ಸಹಕಾರಿ ಕಾರ್ಖಾನೆ ದ್ವಿತೀಯ.

ದಕ್ಷಿಣ ಮತ್ತು ಮಧ್ಯ ವಲಯ: ಮಂಡ್ಯ ಜಿಲ್ಲೆ ಕೊಪ್ಪದ ಎನ್.ಎಸ್.ಎಲ್. ಶುಗರ್ಸ್‌ ಪ್ರಥಮ ಮತ್ತು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಬಣ್ಣಾರಿ ಅಮ್ಮನ್ ಶುಗರ್ಸ್‌ ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT