ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದಿಂದ ದ್ವೇಷದ ರಾಜಕಾರಣ; ಸತೀಶ ಜಾರಕಿಹೊಳಿ ವಾಗ್ದಾಳಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ
Last Updated 9 ಆಗಸ್ಟ್ 2021, 12:09 IST
ಅಕ್ಷರ ಗಾತ್ರ

ಬೆಳಗಾವಿ: ‘ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಕಿಡಿಕಾರಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಾವುದೇ ಹೊಸ ಯೋಜನೆ ಮಾಡಿಲ್ಲ. ಅವರ ಸಾಧನೆ ಶೂನ್ಯವಾಗಿದೆ. ನಮ್ಮ ಸರ್ಕಾರವಿದ್ದಾಗಿನ ಯೋಜನೆಗಳ ಹೆಸರು ಹಾಗೂ ಪ್ಲೇಟ್ ಬದಲಾವಣೆ ಮಾಡುವ ಮೂಲಕ ಅದು ನನ್ನ ಸಾಧನೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾಯಿಸಿದ್ದು ಸರಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಹೆಸರುಗಳನ್ನು ಬದಲಾವಣೆ ಮಾಡುವುದರಿಂದ ನಮ್ಮ ಸಾಧನೆಯನ್ನು ಬಚ್ಚಿಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿತ್ತು. ಆದರೆ, ಈಗ ಹೆಚ್ಚಿನ ಪ್ರಚಾರ ಆಗುತ್ತಿರುವುದರಿಂದ ಬಿಜೆಪಿ ಸರ್ಕಾರ ಅನುದಾನ ಕಡಿತಗೊಳಿಸಿದೆ’ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಇನ್ನೂ ಭದ್ರವಾಗಿಲ್ಲ:

‘ರಾಜ್ಯದಲ್ಲಿ ಪ್ರವಾಹ ಇಳಿದಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರವಿನ್ನೂ ಭದ್ರವಾಗಿಲ್ಲ. ಮುಖ್ಯಮಂತ್ರಿ ಬದಲಾವಣೆ ಆಗಿದೆ. ಸಂಪುಟ ರಚನೆಯಾಗಿ, ಖಾತೆ ಹಂಚಿಕೆಯೂ ಆಗಿದೆ. ಆದರೆ, ಅಸಮಾಧಾನ ಮಾತ್ರ ಇನ್ನೂ ತಣ್ಣಗಾಗಿಲ್ಲ. ಇದರಿಂದ ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತಿರುವ ವಿಚಾರ’ ಎಂದು ಟೀಕಿಸಿದರು.

‘ಈ ಸರ್ಕಾರ ಸಮಸ್ಯೆಗಳಲ್ಲೇ ಸಾಗುತ್ತಿದೆ. ಖಾತೆ ಹಂಚಿಕೆಯಲ್ಲಿ ಅಸಮಾಧಾನದಿಂದ ಜಗಳ ನಡೆಯುತ್ತಿದೆ. ಇದು ರಾಜ್ಯದ ಜನರ ಮೇಲೆ ಪರಿಣಾಮ ಬೀರಲಿದೆ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ. ಈ ಬಗ್ಗೆ ಕಳೆದ ವರ್ಷ ಕಾಂಗ್ರೆಸ್ ಹೋರಾಟ ನಡೆಸಿದಾಗ, ₹ 5 ಲಕ್ಷ ಘೋಷಣೆ ಮಾಡಿದರು. ಆದರೆ, ಎಲ್ಲರಿಗೂ ಹಣ ದೊರೆತಿಲ್ಲ. ಈ ಬಾರಿ ಮತ್ತೆ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

‘ಸರ್ಕಾರದ ತಪ್ಪುಗಳನ್ನು ಖಂಡಿಸಿ ಪಕ್ಷದಿಂದ ನಿರಂತರವಾಗಿ ಪ್ರತಿಭಟಿಸಲಾಗುತ್ತಿದೆ. ಉದಾಹರಣೆಗೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ರಾಜ್ಯದ ತುಂಬೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರತಿಭಟನೆ ಮಾಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ನಡೆಯುತ್ತಿದೆ. ಮೊಟ್ಟೆ ಖರೀದಿ ಹಗರಣದ ವಿರುದ್ಧ ಹೋರಾಟ ಮುಂದುವರಿಯುತ್ತದೆ. ಅದನ್ನು ನಿಲ್ಲಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮುಖಂಡ ಅಶೋಕ ಪಟ್ಟಣ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಸುನೀಲ ಹನಮನ್ನವರ, ಮಲ್ಲಪ್ಪ ಮುರಗೋಡ, ಅರವಿಂದ ದಳವಾಯಿ, ವಿಶ್ವಾಸ್ ವೈದ್ಯ ಇದ್ದರು.

ಬಿಜೆಪಿಗೆ ಅಧಿಕಾರದ ದಾಹ: ಲಕ್ಷ್ಮಿ ಟೀಕೆ

ಬೆಳಗಾವಿ: ‘ಕೋವಿಡ್ ಸಂಕಷ್ಟದಿಂದ ಇಡೀ ರಾಜ್ಯ ನಲುಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಹಾನಿಯಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿಯವರು ಖಾತೆಗೋಸ್ಕರ ಕಿತ್ತಾಡುತ್ತಿದ್ದಾರೆ. ಇದು ಅಧಿಕಾರದ ದಾಹವಲ್ಲದೆ ಮತ್ತೇನೂ ಅಲ್ಲ’ ಎಂದು ಕೆಪಿಸಿಸಿ ವಕ್ತಾರೆಯೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟೀಕಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಆತಂರಿಕ ವಿಚಾರಗಳನ್ನು ನಾವು ಮಾತನಾಡಬಾರದು. ಸಂಕಷ್ಟದ ವೇಳೆಯಲ್ಲಿ ಅಧಿಕಾರಕ್ಕಾಗಿ ಜಗಳ ಮಾಡುತ್ತಿದ್ದಾಗ ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ. ಜನರಿಗೆ ವಾಸ್ತವವನ್ನು ತಿಳಿಸಲೇಬೇಕಾಗುತ್ತದೆ’ ಎಂದರು.

‘2019ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಆಗಿದ್ದ ಹಾನಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಬಾರಿ ಜಿಲ್ಲೆಯಲ್ಲಿ ₹ 2800 ಕೋಟಿ‌ ಹಾನಿಯಾಗಿದೆ ಎನ್ನುತ್ತಿದ್ದಾರೆ. ಜನರಿಗೆ ಬಿಜೆಪಿ ಸರ್ಕಾರ ಎಂದರೆ ಜುಮ್ಲಾ ಸರ್ಕಾರ ಎಂದು ಭಾಸವಾಗುತ್ತಿದೆ’ ಎಂದು ಹೇಳಿದರು.

‘ಇಂದಿರಾಗಾಂಧಿ ಅವರ ರಕ್ತ ಈ ದೇಶದ ಭೂಮಿಯಲ್ಲಿ ಉಳಿದು ಹೋಗಿದೆ. ಅವರ ಹೆಸರನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT