ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಿಯಾಂಕಾ ಗೆಲ್ಲಿಸಿದ್ದು ಜನರಲ್ಲಿನ ಹಠ’

Published 5 ಜೂನ್ 2024, 14:59 IST
Last Updated 5 ಜೂನ್ 2024, 14:59 IST
ಅಕ್ಷರ ಗಾತ್ರ

ಗೋಕಾಕ: ‘ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ಅವರನ್ನು ಗೆಲ್ಲಿಸಬೇಕೆಂದು ಜನರ ಹಠವಾಗಿತ್ತು. ಅವರ ಬೆಂಬಲ, ಶಕ್ತಿಯಿಂದ ಪ್ರಿಯಾಂಕಾ ಗೆದ್ದಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಸಮಯಕ್ಕೂ ಮೊದಲೇ ಆ ಕ್ಷೇತ್ರದಲ್ಲಿ ನಾವು ಸಕ್ರಿಯರಾಗಿದ್ದೆವು. ಜನರನ್ನು ಭೇಟಿ ಮಾಡಿ, ಅವರ ಕುಂದುಕೊರತೆ ಪರಿಹರಿಸುತ್ತಿದ್ದೆವು. ಬಿಜೆಪಿಯವರು ತಮ್ಮ ತಂತ್ರಗಳನ್ನು ಬಳಸಿ, ಚುನಾವಣೆ ಎದುರಿಸಿದರು. ನಾವು ನಮ್ಮ ತಂತ್ರ ಬಳಸಿ, ಯಶಸ್ವಿಯಾಗಿದ್ದೇವೆ. ಸುಲಭವಾಗಿ ಗೆಲ್ಲುವಷ್ಟು ಕ್ಷೇತ್ರ ಅದಾಗಿರಲಿಲ್ಲ’ ಎಂದರು.

‘ಗುರುವಾರದಿಂದಲೇ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಪ್ರಿಯಾಂಕಾ ಜನರ ನಿರೀಕ್ಷೆಯಂತೆ ಕೆಲಸ ಮಾಡಲಿದ್ದಾರೆ’ ಎಂದರು.

‘ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಅಸಮಾಧಾನವಿತ್ತು. ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಪ್ರಿಯಾಂಕಾ ಕಣಕ್ಕಿಳಿಸಿದ್ದರಿಂದ ಮತದಾರರಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನಗಳು ನಡೆದವು. ಜಾತಿ ಮತ್ತು ಅಭ್ಯರ್ಥಿ ಹೊರಗಿನವರು ಎಂದು ಅಪಪ್ರಚಾರ ಮಾಡಲಾಯಿತು. ಆದರೆ, ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದ ಜನರು ಪ್ರಿಯಾಂಕಾಗೆ ಮತ ನೀಡಿ ಗೆಲ್ಲಿಸಿದರು’ ಎಂದರು.

‘ಕಾಂಗ್ರೆಸ್‌ನ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ದೂರು ನೀಡಲ್ಲ. ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT