ಬೆಂಗಳೂರಿನಿಂದ ಹೊರಬಂದು ಪ್ರವಾಹ ವೀಕ್ಷಿಸಲಿ: ಆರ್.ಅಶೋಕ್‌ಗೆ ಜಾರಕಿಹೊಳಿ ಒತ್ತಾಯ

ಬೆಳಗಾವಿ: ‘ಬೆಳಗಾವಿಯೂ ಸೇರಿದಂತೆ ರಾಜ್ಯದ ಹಲವೆಡೆ ಪ್ರವಾಹ ಬಂದಿದ್ದು, ಕಂದಾಯ ಸಚಿವ ಆರ್.ಅಶೋಕ ಅವರು ಬೆಂಗಳೂರು ಬಿಟ್ಟು ಹೊರಬರಬೇಕು. ಈ ಸ್ಥಳಗಳಿಗೆ ಭೇಟಿ ನೀಡಿ, ಪರಿಹಾರಗಳ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಉತ್ತರ ಕರ್ನಾಟಕದ ಹಲವೆಡೆ ತೊಂದರೆಯಾಗಿದೆ. ಆದರೆ, ಇವ್ಯಾವ ಸ್ಥಳಗಳಿಗೂ ಆರ್.ಅಶೋಕ ಭೇಟಿಯಾಗಿದ್ದು ನಾನು ಕಂಡಿಲ್ಲ. ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅಂದಿನ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಎಲ್ಲೆಡೆ ಪ್ರವಾಸ ಮಾಡಿದ್ದರು’ ಎಂದು ಸ್ಮರಿಸಿದರು.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪೊಲೀಸ್ ಆಯುಕ್ತರಿಗೆ ‘ಮಿಸ್ಟರ್’ ಎಂದು ಹೇಳಿರುವುದರಲ್ಲಿ ಧಮ್ಕಿ ಇಲ್ಲ. ಡಿ.ಜೆ ಹಳ್ಳಿ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಪಕ್ಷದ ಮುಖಂಡರನ್ನು, ಮಾಜಿ ನಗರಸಭಾ ಸದಸ್ಯರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡಬೇಡಿ, ಫಿಕ್ಸ್ ಮಾಡಬೇಡಿ ಎಂದು ಅವರು ಆಯುಕ್ತರಿಗೆ ಹೇಳಿದ್ದಾರಷ್ಟೆ. ಇದರರ್ಥ ಧಮ್ಕಿ ಹಾಕಿದಂತಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಡಿ.ಜೆ ಹಳ್ಳಿ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಿದರೆ ಸತ್ಯಾಂಶ ಹೊರಬರಲಿದೆ. ಪಕ್ಷದ ವತಿಯಿಂದಲೂ ಸತ್ಯ ಶೋಧನಾ ಸಮಿತಿ ರಚಿಸಲಾಗಿದ್ದು, ಸದ್ಯದಲ್ಲಿಯೇ ಇದು ಕೂಡ ವರದಿಯನ್ನು ಸಲ್ಲಿಸಲಿದೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ನಾಲ್ಕು ಜನರು ಸಚಿವರಿದ್ದರೂ ಒಬ್ಬರಿಗೊಬ್ಬರು ಸಂಬಂಧ ಇಲ್ಲದಂತೆ ಇದ್ದಾರೆ. ಎಲ್ಲರೂ ತಮ್ಮ ತಾಲ್ಲೂಕಿಗೆ ಸೀಮಿತವಾಗಿದ್ದಾರೆ’ ಎಂದು ಟೀಕಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.