ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣ: ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಅವಕಾಶವಿಲ್ಲ

ಮನೆಯಲ್ಲೇ ಆಚರಣೆಗೆ ಭಕ್ತರಿಗೆ ಸಲಹೆ
Last Updated 6 ಆಗಸ್ಟ್ 2021, 13:45 IST
ಅಕ್ಷರ ಗಾತ್ರ

ಉಗರಗೋಳ (ಸವದತ್ತಿ ತಾ.): ಆ. 8ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ಅರ್ಚಕರು, ಅಧಿಕಾರಿಗಳು ಹಾಗೂ ಕೆಲವೇ ಹಿರಿಯರ ಸಮ್ಮುಖದಲ್ಲಿ ನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷವೂ ಶ್ರಾವಣ ಮಾಸದಲ್ಲಿ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ.

ಪ್ರತಿ ವರ್ಷ ಶ್ರಾವಣ ಮಾಸ ಆರಂಭಗೊಳ್ಳುತ್ತಲೇ ಏಳುಕೊಳ್ಳದ ನಾಡಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತಿತ್ತು. ದೇಶದ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದು ಬರುತ್ತಿತ್ತು. ಸವದತ್ತಿ, ಉಗರಗೋಳ, ಹಿರೇಕುಂಬಿ, ಚಿಕ್ಕುಂಬಿ, ಚುಳಕಿ, ಹಂಚಿನಾಳ ಹಾಗೂ ದಢೇರಕೊಪ್ಪ ಗ್ರಾಮಗಳ ಭಕ್ತರು ನಿತ್ಯ ನಸುಕಿನ ಜಾವ ಪಾದಯಾತ್ರೆಯಲ್ಲೇ ಬರುತ್ತಿದ್ದರು. ಈ ಸಂಭ್ರಮದ ಮೇಲೆ ಕೋವಿಡ್ ಕಾರ್ಮೋಡ ಈ ಬಾರಿಯೂ ಕವಿದಿದೆ.

ಇಲ್ಲಿಗೆ ನೆರೆಯ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. ಆ ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಿದ್ದರಿಂದ 2020ರ ಮಾರ್ಚ್‌ ಅಂತ್ಯದಿಂದಲೇ ಯಲ್ಲಮ್ಮದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಹಾವಳಿ ತಗ್ಗಿದ್ದರಿಂದ 10 ತಿಂಗಳ ನಂತರ ಅಂದರೆ 2020ರ ಫೆ.1ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮತ್ತೆ ಕೋವಿಡ್ ಹೆಚ್ಚಿದ್ದರಿಂದ ಇಪ್ಪತ್ತು ದಿನಗಳಲ್ಲೇ ಸಾರ್ವಜನಿಕ ದರ್ಶನ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದರು.

ಜಿಲ್ಲಾಡಳಿತದ ಆದೇಶದ ಹೊರತಾಗಿಯೂ ಕೆಲವರು ಯಲ್ಲಮ್ಮನಗುಡ್ಡಕ್ಕೆ ಬರುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಹೆಚ್ಚಿನ ಭಕ್ತರು ಬರುವ ಸಾಧ್ಯತೆ ಇದೆ. ಹೀಗಾಗಿ, ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ ಹಾಗೂ ಸವದತ್ತಿ ಮಾರ್ಗದ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಆ ಮಾರ್ಗದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ.

‘ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದೇವಿ ದರ್ಶನ ನಿರ್ಬಂಧಿಸಲಾಗಿದೆ. ಭಕ್ತರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಶ್ರಾವಣ ಮಾಸದಲ್ಲೂ ಸಹಕರಿಸಬೇಕು. ಮನೆಯಲ್ಲೇ ಧಾರ್ಮಿಕ ಆಚರಣೆ ಕೈಗೊಂಡು, ಯಲ್ಲಮ್ಮದೇವಿ ಕೃಪೆಗೆ ಪಾತ್ರರಾಗಬೇಕು’ ಎಂದು ದೇವಸ್ಥಾನದ ಇಒ ರವಿ ಕೋಟಾರಗಸ್ತಿ ಕೋರಿದರು.

‘ಯಲ್ಲಮ್ಮನಗುಡ್ಡಕ್ಕೆ ಭಕ್ತರು ಬಾರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದ್ವಿಚಕ್ರವಾಹನ ಸವಾರರು ಸಹಕರಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಸವದತ್ತಿ ಠಾಣೆ ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಶಿವಾನಂದ ಗುಡಗನಟ್ಟಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT