ಖಾನಾಪುರ: 'ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಸುರಿಯುವ ಮಲೆನಾಡು ಪ್ರದೇಶಗಳಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನದಿ ಮತ್ತು ಹಳ್ಕಕೊಳ್ಳಗಳನ್ನು ದಾಟಲು ಅನುಕೂಲವಾಗುವಂತೆ ಕಿರುಸೇತುವೆಗಳನ್ನು ನಿರ್ಮಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಯೋಜನೆಯನ್ನು ಜಾರಿಗೆ ತರುವ ಚಿಂತನೆ ನಡೆದಿದೆ. ಇದಕ್ಕಾಗಿ ಖಾನಾಪುರ ತಾಲ್ಲೂಕನ್ನು ವಿಶೇಷ ಅಭಿಯಾನದ ಮಾದರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ' ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ತಾಲ್ಲೂಕಿನ ಭೂರಣಕಿ ಗ್ರಾಮದಲ್ಲಿ ಮಂಗಳವಾರ ಅತಿವೃಷ್ಟಿಯಿಂದ ಉಂಟಾದ ಹಾನಿ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವ ಖಾನಾಪುರ ತಾಲ್ಲೂಕಿನ ಅರಣ್ಯ ಭಾಗದ ಹಲವು ಗ್ರಾಮಗಳಿಗೆ ಮಳೆಗಾಲದಲ್ಲಿ ತೆರಳಲು ರಸ್ತೆ ಮತ್ತು ಸೇತುವೆಗಳಿಲ್ಲದಿರುವುದು ಗಮನಕ್ಕೆ ಬಂದಿದೆ. ಹಳ್ಳಿಯ ಜನರು ನದಿ-ಹಳ್ಳ ದಾಟಲು ಅನುಕೂಲವಾಗುವಂತೆ ₹5 ಲಕ್ಷದಿಂದ ₹10 ಲಕ್ಷ ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಇಲಾಖೆಯಿಂದ ಯೋಜನೆ ರೂಪಿಸಲಾಗುತ್ತದೆ’ ಎಂದು ಘೋಷಿಸಿದರು.
‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡಲಾಗುತ್ತಿದೆ. ಸಂಪೂರ್ಣವಾಗಿ ಕುಸಿದ ಮನೆಗಳ ನಿರ್ಮಾಣಕ್ಕೆ ₹5 ಲಕ್ಷ ಪರಿಹಾರವನ್ನು ನೀಡುವ ಯೋಚನೆಯಿದೆ. ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ. ಹಾಳಾದ ರಸ್ತೆಗಳ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಇದುವರೆಗೆ ಖಾನಾಪುರ ತಾಲ್ಲೂಕಿನಲ್ಲಿ 4 ಮನೆ ಸಂಪೂರ್ಣವಾಗಿ ಮತ್ತು 87 ಮನೆಗಳು ಭಾಗಶಃ ಕುಸಿದಿವೆ. ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿರುತ್ತದೆ. ವೇದಗಂಗಾ-ದೂಧಗಂಗಾ ಸೇರಿದಂತೆ ಎಲ್ಲ ನದಿಗಳ ಒಳಹರಿವು ಪ್ರಮಾಣದ ಮೇಲೆ ನಿಗಾವಹಿಸಲಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಅಧಿಕಾರಿಗಳ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಮಾಹಿತಿ ಪಡೆದರು. ಸಚಿವರ ಭೇಟಿ ಸಂದರ್ಭದಲ್ಲಿ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಡಿಸಿ ನಿತೇಶ್ ಪಾಟೀಲ, ಜಿ.ಪಂ. ಸಿಇಒ ಹರ್ಷಲ್ ಭೋಯರ್ ಉಪಸ್ಥಿತರಿದ್ದರು.
Cut-off box - ಚೆಕ್ ವಿತರಣೆ ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದಿರುವುದನ್ನು ಪರಿಶೀಲಿಸಿದ ಸಚಿವರು ಸಂತ್ರಸ್ತರಾದ ಗ್ರಾಮದ ಖೈರುನ್ನೀಸಾ ಹೇರೆಕರ ಹಾಗೂ ಗೋಪಾಲ್ ತಾರೋಡಕರ್ ಕುಟುಂಬಕ್ಕೆ ತಲಾ ₹1.20 ಲಕ್ಷ ಮೊತ್ತದ ಅತಿವೃಷ್ಟಿ ಪರಿಹಾರದ ಚೆಕ್ ವಿತರಿಸಿದರು. ಜೊತೆಗೆ ಅವರಿಗೆ ದೈನಂದಿನ ಬಳಕೆಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಒಳಗೊಂಡಿರುವ ಆಹಾರ ಕಿಟ್ ಹಸ್ತಾಂತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.