ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮಕ್ಕಳಿಗೆ ನರ್ಸರಿ ಶಾಲೆ

ಕಮಿಷನರೇಟ್‌ ವತಿಯಿಂದ ಆರಂಭ
Last Updated 12 ಜುಲೈ 2018, 11:21 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಬಳಿ ಪೊಲೀಸ್‌ ಕಮಿಷನರೇಟ್ ವತಿಯಿಂದ ಆರಂಭಿಸಿರುವ ನರ್ಸರಿ (ಪೂರ್ವ ಪ್ರಾಥಮಿಕ) ಶಾಲೆಗೆ ಗುರುವಾರ ಅಧಿಕೃತ ಚಾಲನೆ ನೀಡಲಾಯಿತು.

ಉದ್ಘಾಟನೆ ನೆರವೇರಿಸಿದ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ, ಮಕ್ಕಳೊಂದಿಗೆ ಕೆಲ ಸಮಯ ಕಳೆದರು. ಮಕ್ಕಳ ನಲಿ–ಕಲಿ ಚಟುವಟಿಕೆಗಳಿಗೆ ಮಾಡಿರುವ ವ್ಯವಸ್ಥೆಯನ್ನು ವೀಕ್ಷಿಸಿದರು.

‘ಸಿಬ್ಬಂದಿಯ ಮಕ್ಕಳನ್ನು ಶಾಲೆಗೆ ಸೇರಿಸಲು ಆಗುತ್ತಿದ್ದ ತೊಂದರೆಗಳನ್ನು ನಿವಾರಿಸುವುದಕ್ಕಾಗಿ ನರ್ಸರಿ ಶಾಲೆ ಆರಂಭಿಸಲಾಗಿದೆ. ಪೊಲೀಸ್‌ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲಾಗಿದೆ. ಇತರ ಕೆಲವು ನಗರಗಳಲ್ಲೂ ಈ ರೀತಿ ಶಾಲೆ ನಡೆಸಲಾಗುತ್ತಿದೆ. ಏಕಸ್‌ ಸಂಸ್ಥೆಯು ಪಾಠೋಪಕರಣ ಹಾಗೂ ಆಟಿಕೆಗಳನ್ನು ಖರೀದಿಸಲು ಹಣಕಾಸಿನ ನೆರವು ನೀಡಿದೆ’ ಎಂದು ತಿಳಿಸಿದರು.

‘ಪ್ರಸ್ತುತ 22 ಮಕ್ಕಳು ಪ್ರವೇಶ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ಮಕ್ಕಳು ಪ್ರವೇಶ ಪಡೆಯುವ ಸಾಧ್ಯತೆ ಇದೆ. ಬೇರೆ ಶಾಲೆಗಳಿಗೆ ಹೋಗಿರುವ ಮಕ್ಕಳನ್ನು ಇಲ್ಲಿಗೆ ಕಳುಹಿಸುವಂತೆ ಪೋಷಕರ ಮನವೊಲಿಸಲಾಗುವುದು. ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್, ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ, ಡಿಸಿಪಿಗಳಾದ ಸೀಮಾ ಲಾಟ್ಕರ್, ಮಹಾನಿಂಗ ನಂದಗಾವಿ, ಎಸಿಪಿ ಶಂಕರ ಮಾರಿಹಾಳ, ಇನ್‌ಸ್ಪೆಕ್ಟರ್‌ಗಳು ಭಾಗವಹಿಸಿದ್ದರು.

ಉದ್ದೇಶಗಳೇನು?
* ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಅನುಕೂಲ ಮಾಡಿಕೊಡಲು ನಿರ್ಮಾಣ.
* ಪೊಲೀಸ್ ಕಲ್ಯಾಣ ಕಾರ್ಯಕ್ರಮದಡಿ ಆರಂಭಿಸಲಾಗಿದೆ.
* ಹಳೆಯ ಕ್ವಾರ್ಟಸ್‌ ನವೀಕರಣಗೊಳಿಸಿ ಶಾಲೆಯ ರೂಪ ಕೊಡಲಾಗಿದೆ.
* ಮಕ್ಕಳ ಕಲಿಕೆಗೆ, ಆಟಕ್ಕೆ ಎರಡು ಕೊಠಡಿಗಳಿವೆ.
* ಆಟಿಕೆಗಳನ್ನೂ ಒದಗಿಸಲಾಗಿದೆ.
* ಮಕ್ಕಳು ನಿದ್ರಿಸಿದರೆ ಅದಕ್ಕೂ ವ್ಯವಸ್ಥೆ ಇದೆ.
* ಸೊಳ್ಳೆಗಳಿಂದ ರಕ್ಷಿಸಲು ಪರದೆ ಹಾಕಲಾಗಿದೆ.
* ನಲಿಯುತ್ತಾ ಕಲಿಯುವುದಕ್ಕಾಗಿ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ.
* ಇದರಿಂದಾಗಿ ಸಮೀಪದಲ್ಲಿರುವ ಪೊಲೀಸ್ ವಸತಿಗೃಹಗಳಲ್ಲಿರುವ, ಸಿಬ್ಬಂದಿಯು ಮಕ್ಕಳನ್ನು ಇಲ್ಲಿಗೆ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಸೇರಿಸಬಹುದಾಗಿದೆ.
* ಸೀಟುಗಳಿಗಾಗಿ ಖಾಸಗಿ ಶಾಲೆಗಳಿಗೆ ಹೋಗುವುದು ತಪ್ಪುತ್ತದೆ.

ಪ್ರವೇಶ ಹೇಗೆ?
* ಪೊಲೀಸ್‌ ಸಿಬ್ಬಂದಿಯ ಮಕ್ಕಳಿಗೆ ಮಾತ್ರ ಅವಕಾಶ.
* 3 ವರ್ಷದಿಂದ 5 ವರ್ಷ 10 ತಿಂಗಳ ಮಕ್ಕಳನ್ನು ದಾಖಲಿಸಿಕೊಳ್ಳಲಾಗುವುದು.
* ಒಂದು ಮಗುವಿಗೆ ವರ್ಷಕ್ಕೆ ₹ 5000 ಶುಲ್ಕ ನಿಗದಿಪಡಿಸಲಾಗಿದೆ.
* ಒಬ್ಬ ನುರಿತ ಶಿಕ್ಷಕಿ ನೇಮಿಸಿಕೊಳ್ಳಲಾಗಿದೆ.
* ಬಿ.ಇಡಿ. ಮಾಡಿರುವ ಮಹಿಳಾ ಕಾನ್‌ಸ್ಟೆಬಲ್ ಒಬ್ಬರನ್ನು ಪಾಠ ಮಾಡುವುದಕ್ಕಾಗಿ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.
* ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಆಯಾ ನೇಮಿಸಲಾಗಿದೆ.
* ಯಾವುದೇ ಅವಧಿಯಲ್ಲಿ ಬೇಕಾದರೂ ಮಕ್ಕಳಿಗೆ ಪ್ರವೇಶ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT