ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನಾಕರವರ್ಣಿ ಕಾವ್ಯ ಕಾಲಾತೀತವಾದುದು

ಆರ್‌ಸಿಯು: ವಿಚಾರಸಂಕಿರಣದಲ್ಲಿ ಪ್ರೊ.ಜೆ.ಎಂ. ನಾಗಯ್ಯ ಅಭಿಮತ
Last Updated 23 ಫೆಬ್ರುವರಿ 2021, 13:30 IST
ಅಕ್ಷರ ಗಾತ್ರ

ಬೆಳಗಾವಿ: ‘ಕವಿ ರತ್ನಾಕರವರ್ಣಿ ಅವರ ಕಾವ್ಯ ಕಾಲಾತೀತವಾದುದು’ ಎಂದುಪ್ರೊ.ಜೆ.ಎಂ. ನಾಗಯ್ಯ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರತ್ನಾಕರವರ್ಣಿ ಅಧ್ಯಯನ ಪೀಠದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ರತ್ನಾಕರವರ್ಣಿ: ಮೌಲ್ಯಪ್ರಮೇಯ ದರ್ಶನ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕನ್ನಡದ ಸಂದರ್ಭದಲ್ಲಿ ರತ್ನಾಕರವರ್ಣಿ ಪಂಪನ ಆದಿಪುರಾಣಕ್ಕಿಂತ ಭಿನ್ನವಾಗಿ ಭರತೇಶ ವೈಭವವನ್ನು ಯೋಗ-ಭೋಗಗಳ ಸಮ್ಮಿಲನದಲ್ಲಿ ನಿರೂಪಿಸಿದ್ದಾರೆ. ಇದು ತುಂಬಾ ಅಪರೂಪವಾದ ಪ್ರಯತ್ನವಾಗಿದೆ. ಈವರೆಗಿನ ಜೈನ ಕಾವ್ಯಗಳ ರಚನೆಯ ಸ್ವರೂಪಕ್ಕಿಂತ ಭಿನ್ನವಾಗಿ ಸಾಂಗತ್ಯದಲ್ಲಿ ರತ್ನಾಕರವರ್ಣಿಯು ತಮ್ಮ ಕಾವ್ಯಕ್ಕೆ ಹೊಸ ಶಕ್ತಿ ತುಂಬಿದ್ದಾರೆ’ ಎಂದು ತಿಳಿಸಿದರು.

ಉದ್ಘಾಟಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ಪ್ರಾಚೀನ ಕವಿಗಳು ಮೌಲ್ಯಿಕವಾದ ಕಾವ್ಯಗಳನ್ನು ರಚಿಸಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಅವುಗಳನ್ನು ಚರ್ಚಿಸುವ ಮೂಲಕ ನಮ್ಮ ಚಿಂತನೆಗಳನ್ನು ವಿಸ್ತರಿಸಿಕೊಳ್ಳಬೇಕು. ಬೇರೆ ಬೇರೆ ವಿಶ್ವವಿದ್ಯಾಲಯಗಳು ಜೊತೆಯಾಗಿ ವಿಚಾರಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸುವ ಮೂಲಕ ಸಾಂಸ್ಕೃತಿಕ ಬಾಂಧವ್ಯ ಬೆಸೆದುಕೊಳ್ಳಬೇಕು’ ಎಂದು ಆಶಿಸಿದರು.

ಮೊದಲನೇ ಗೋಷ್ಠಿಯಲ್ಲಿ ‘ಭರತೇಶ ವೈಭವ: ತ್ಯಾಗ ಭೋಗದ ಸಮನ್ವಯತೆ’ ಎಂಬ ವಿಷಯ ಕುರಿತು ಮಾತನಾಡಿದ ಡಾ.ವಿ.ಎಸ್. ಮಾಳಿ, ‘ಭೋಗ ತ್ಯಾಗವನ್ನು ಯೋಗದ ಮೂಲಕ ಹೇಳಿದ ಅನನ್ಯ ಕವಿ ರತ್ನಾಕರವರ್ಣಿ’ ಎಂದು ಬಣ್ಣಿಸಿದರು.

2ನೇ ಗೋಷ್ಠಿಯಲ್ಲಿ ಡಾ.ಬಾಳಣ್ಣ ಶೀಗಿಹಳ್ಳಿ ಜೈನ ಕಾವ್ಯಗಳ ಪರಂಪರೆಯನ್ನು ಪರಿಚಯಿಸಿದರು.

‘ಭರತೇಶ ವೈಭವ: ವೀರಶೈವ ಮತ್ತು ಜೈನ ತಾತ್ವಿಕ ನಿಲುವುಗಳ ಸಮನ್ವಯ’ ವಿಷಯದ ಕುರಿತು ಶಿವಮೊಗ್ಗದ ಡಾ.ಎಚ್.ಎಂ. ನಾಗಾರ್ಜುನ ಮಾತನಾಡಿದರು. ‘ರತ್ನಾಕರವರ್ಣಿಯ ಕಾಲದಲ್ಲಿ ಜೈನ ಧರ್ಮವು ಇಳಿಮುಖದ ಸ್ಥಿತಿಯಲ್ಲಿತ್ತು. ಆ ಸಂದರ್ಭದಲ್ಲಿ ಆಗಮಿಕ ಮತ್ತು ಲೌಕಿಕ ಎರಡನ್ನೂ ಒಂದೇ ಕಾವ್ಯದಲ್ಲಿ ನಿರೂಪಿಸಿದ್ದಾರೆ. ಪ್ರಮುಖ ಧಾರ್ಮಿಕ ತತ್ವಗಳಾದ ವೀರಶೈವ ಮತ್ತು ಜೈನ ಎರಡನ್ನೂ ಸಮಾನವಾಗಿ ಪರಿಗಣಿಸಿದ್ದಾರೆ. ಇದರೊಂದಿಗೆ, ಜೈನ ಮತಾವಲಂಬಿಯಾಗಿದ್ದರೂ ಮತ್ತೆ ಲಿಂಗಧಾರಣೆ ಮಾಡಿ ಪುನಃ ಜೈನನಾಗಿರುವುದು ವಿಶಿಷ್ಟವಾಗಿದೆ’ ಎಂದು ತಿಳಿಸಿದರು.

ಡಾ.ಎಂ.ಕೆ. ಮಾಧವ, ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ.ಸೋಮಣ್ಣ ಹೊಂಗಳ್ಳಿ ಮಾತನಾಡಿದರು.

ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎಂ. ಗಂಗಾಧರಯ್ಯ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಸಮಾರೋಪ ನುಡಿಗಳನ್ನಾಡಿದರು. ಪ್ರೊ.ಸೋಮಣ್ಣ ಹೊಂಗಳ್ಳಿ, ಪ್ರಾಧ್ಯಾಪಕರಾದ ಡಾ.ಗಜಾನನ ನಾಯ್ಕ, ಡಾ.ಮಹೇಶ ಗಾಜಪ್ಪನವರ, ಡಾ.ಶೋಭಾ ನಾಯಕ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಡಾ.ಪಿ. ನಾಗರಾಜ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT