ಭಾನುವಾರ, ಜೂಲೈ 5, 2020
24 °C

ಬೆಳಗಾವಿ | ನಿವೃತ್ತ ಜಿಲ್ಲಾಧಿಕಾರಿಗೆ ಆತ್ಮೀಯ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಹಾಗೂ ಕೊರೊನಾದಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಅತ್ಯಂತ ಸಮರ್ಥವಾಗಿ ನಿಭಾಯಿಸುವುದು ಸಾಧ್ಯವಾಯಿತು’ ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.

ಇಲ್ಲಿನ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಎಂಥದ್ದೇ ಸಂದರ್ಭ ಬಂದರೂ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಸ್ಸು ಮಾಡಿದರೆ ಯಶಸ್ವಿಯಾಗಿ ನಿಭಾಯಿಸಬಲ್ಲರು ಎನ್ನುವುದಕ್ಕೆ ಕೊರೊನಾ ಮತ್ತು ಪ್ರವಾಹ ಸ್ಥಿತಿ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿನ ಸೇವೆಯನ್ನು ಮರೆಯಲಾಗದು’ ಎಂದು ಭಾವುಕರಾಗಿ ಹೇಳಿದರು. ‘ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಿದ ಪತ್ನಿಗೆ ಸೆಲ್ಯೂಟ್ ಸಲ್ಲಿಸುತ್ತೇನೆ’ ಎಂದರು.

‘ಕೆಲಸವನ್ನು ಸಂಭ್ರಮಿಸಿದಾಗ ಬೇಸರ ಎನಿಸುವುದಿಲ್ಲ. ನಾನು ಹಾಗೆಯೇ ಸಂಭ್ರಮಿಸಿದ್ದೇನೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಅಪರೂಪದ ಅವಕಾಶಗಳನ್ನು ಮೂವರು ಮುಖ್ಯಮಂತ್ರಿಗಳು ಒದಗಿಸಿದ್ದಾರೆ. ಆ ಮುಖ್ಯಮಂತ್ರಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜನರ ಪ್ರೀತಿ-ವಿಶ್ವಾಸಕ್ಕೆ ಚಿರ ಋಣಿಯಾಗಿದ್ದೇನೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುವುದು ಮುಖ್ಯವೇ ಹೊರತು ಕ್ರಮ ತೆಗೆದುಕೊಳ್ಳುವುದಲ್ಲ. ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡುವ ವಿಶ್ವಾಸವಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.