ಬೈಲಹೊಂಗಲ/ಹುಬ್ಬಳ್ಳಿ: ‘ಕಾಂಗ್ರೆಸ್‌ನವರೇ ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಿದ್ದಾರೆ. ಬಹುದಿನಗಳ ಹಿಂದಿನ ಪ್ರಕರಣವನ್ನು ಬಯಲಿಗೆಳೆದವರು ಮೂಲ ಕಾಂಗ್ರೆಸ್‌ನವರು. ಬಿಜೆಪಿಯ ಸಮರ್ಪಕ ಹೋರಾಟದಿಂದ ಪ್ರಕರಣ ಈ ಹಂತಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ತನಿಖೆ ಎದುರಿಸಲಿ. ಆಗದಿದ್ದರೆ ರಾಜೀನಾಮೆ ನೀಡಲಿ’ ಎಂದು ವಿಜಯಪುರ ನಗರ ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.
‘ನ್ಯಾಯಾಲಯ ತೀರ್ಪು ಕೊಟ್ಟ ಬಳಿಕ ರಾಜ್ಯದ ಜನ ನಿಮ್ಮನ್ನು ಒಪ್ಪಲ್ಲ. ನಿಮ್ಮ ಸುತ್ತಮುತ್ತಲಿನವರ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ರಾಜ್ಯದಲ್ಲಿ ನಿಮ್ಮ (ಸಿದ್ದರಾಮಯ್ಯ) ಶಕ್ತಿ ಇದ್ದಷ್ಟು ಯಾರ ಕಡೆಗೂ ಇಲ್ಲ. ನಿಮ್ಮ ಹಿಂದೂ ವಿರೋಧಿ ಚಟುವಟಿಕೆ ಬಿಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೆ ಸೂಕ್ತ ರೀತಿ ತನಿಖೆ ನಡೆಸಬೇಕು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ನ್ಯಾಯಾಂಗ ವ್ಯವಸ್ಥೆ ವಿರುದ್ಧ ಸಚಿವ ಜಮೀರ್ ಅಹಮದ್ ಖಾನ್ ನೀಡಿದ ಹೇಳಿಕೆ ಸರಿಯಲ್ಲ. ಈಗಾಗಲೇ ನಮ್ಮ ವಕೀಲರ ಸಲಹೆ ಪಡೆಯುತ್ತಿರುವೆ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಿರುವೆ’ ಎಂದರು.