ಶನಿವಾರ, ಜನವರಿ 18, 2020
26 °C
ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಪ್ರಗತಿ ವೀಕ್ಷಿಸಿದ ಸಚಿವರ ಸೂಚನೆ

ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಗುರುವಾರ ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಿರುವ ‘ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್‌ ಸೆಂಟರ್’ನ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಬಸ್ ನಿಲ್ದಾಣ, ಕಣಬರ್ಗಿ ಕೆರೆ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ರಾಮತೀರ್ಥನಗರ, ಶ್ರೀನಗರ ರಸ್ತೆ, ಕೆಪಿಟಿಸಿಎಲ್ ರಸ್ತೆ, ಕಾಲೇಜು ರಸ್ತೆ, ಶುಕ್ರವಾರ ಪೇಟ್ ರಸ್ತೆ ಹಾಗೂ ಮಹಾತ್ಮ ಫುಲೆ ರಸ್ತೆ ಮತ್ತು ವಂಟಮೂರಿಯಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ  ಕಾಮಗಾರಿ ಪರಿಶೀಲಿಸಿದರು.

‘ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು. ಅನಗತ್ಯವಾಗಿ ವಿಳಂಬ ಮಾಡಬಾರದು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕಮಾಂಡ್ ಅಂಡ್ ಕಂಟ್ರೋಲ್‌ ಕೇಂದ್ರದ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಇದರ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದೇವೆ. ಶೀಘ್ರವೇ ಸಮಾರಂಭ ಆಯೋಜಿಸಲಾಗುವುದು. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಸೇವೆ ಒದಗಿಸಲಾಗುವುದು’ ಎಂದರು.

‘ಕಾಮಗಾರಿ ವೇಳೆ ಸ್ಥಳೀಯರು ಸಹಕಾರ ನೀಡಬೇಕು. ಕಾಮಗಾರಿ ಸ್ಥಳದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ರೇಡಿಯಂ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲು ತಿಳಿಸಲಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಒಬ್ಬರು ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದು ಗಮನಕ್ಕೆ ಬಂದಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು. ಮುಂದೆ ಪ್ರಾಣ ಹಾನಿಯಾದರೆ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಮಳೆಗಾಲ ಆರಂಭಕ್ಕೂ ಮುನ್ನವೇ ಕೆಲಸ ಪೂರ್ಣಗೊಳಿಸಬೇಕು. ಅಲ್ಲಿವರೆಗೆ ಸಾರ್ವಜನಿಕರಿಗೆ ಸ್ವಲ್ಪ ತೊಂದರೆಯಾಗಲಿದ್ದು, ಸಹಕರಿಸಬೇಕು. ಕೆಲಸ ವಿಳಂಬವಾದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಲಾಭವಾಗುತ್ತದೆ. ಇದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಲು ಚುರುಕು ಮುಟ್ಟಿಸಲಾಗುತ್ತಿದೆ’ ಎಂದರು.

ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಕುಂಟುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಅಡಿಗಲ್ಲನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದರು. ಹೀಗಾಗಿ ತಡವಾಗಿದೆ. ನಾವು ತ್ವರಿತವಾಗಿ ನಡೆಸಿ ಮುಖ್ಯಮಂತ್ರಿಯಿಂದ ಉದ್ಘಾಟನೆ ಮಾಡಿಸುತ್ತೇವೆ’ ಎಂದರು.

ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಕಾಮಗಾರಿಗಳ ಮಾಹಿತಿ ವಿವರಿಸಿದರು. ಎಇಇ ಕಿರಣ ಸುಬ್ಬರಾವ್, ಉದಯಕುಮಾರ ಬಿ.ಟಿ., ಆರ್.ಎಸ್. ನಾಯಕ, ಅಜಿತ ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು