ಬೈಲಹೊಂಗಲ: ತಾಲ್ಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಮೃತ ಯೋಧ ಬಸವರಾಜ ಸುರೇಶ ಹುಬ್ಬಳ್ಳಿ (31) ಅವರ ಅಂತ್ಯಕ್ರಿಯೆ ಸರ್ಕಾರಿ ಸಕಲ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು.
ಎಎಂಸಿ ರೆಜಿಮೆಂಟನ್ ಉತ್ತರ ಪ್ರದೇಶ ಮಿರತನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಯೋಧ ಕಳೆದ 11 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅನಾರೋಗ್ಯದಿಂದ ಪುನಾ ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ನ.1 ರಂದು ನಿಧನರಾಗಿದ್ದರು.
ಮೃತ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಯಿತು. ಗ್ರಾಮದಲ್ಲಿ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಅಂತಿಮ ದರ್ಶನ ಪಡೆದರು.
ಬೆಳಗಾವಿ ಮರಾಠಾ ರೆಜಿಮೆಂಟ್ ಯೋಧರು ಗಾಳಿಯಲ್ಲಿ ತೋಪು ಹಾರಿಸುವುದರೊಂದಿಗೆ ಮೃತ ಯೋಧನಿಗೆ ಗೌರವ ಸಲ್ಲಿಸಿದರು. ಅವರಿಗೆ ತಂದೆ, ತಾಯಿ, ಸಹೋದರ, ಸಹೋದರಿಯರು ಇದ್ದಾರೆ.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯೆ ರೋಹಿಣಿ ಪಾಟೀಲ, ತಹಶೀಲ್ದಾರ್ ಸಚ್ಚಿದಾನಂದ ಕುಚನೂರ, ಕಂದಾಯ ನಿರೀಕ್ಷಕ ಬಸವರಾಜ ಬೋರಗಲ್, ಬಿ.ಬಿ.ಕ್ಯಾತನವರ, ವಿ.ಎ.ಸುಮಲತಾ ಕೋಟಗಿ, ರುದ್ರಗೌಡ ಪಾಟೀಲ, ಚಂದ್ರಯ್ಯ ಹಿರೇಮಠ, ನಾಗನಗೌಡ ಪಾಟೀಲ, ಬಸಯ್ಯ ಮುನ್ನದಮಠ, ನಿಂಗಪ್ಪ ಮುಂಡೊಳ್ಳಿ, ವೀರನಗೌಡ ಪಾಟೀಲ, ಫಕೀರ ವಿಭೂತಿ, ಈರಣ್ಣ ಮುಂಡೊಳ್ಳಿ, ಗ್ರಾಮಗಳ ಸಾವಿರಾರು ಜನರು ಅಂತಿಮ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.