ಮಂಗಳವಾರ, ಆಗಸ್ಟ್ 16, 2022
22 °C

ಮುಜುಗರಕ್ಕೀಡು ಮಾಡುವ ಚಿಹ್ನೆಗಳು!

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ‘ನನ್ನ ಗುರುತು ಬೂಟು, ಅದಕ್ಕೆ ಮತ ಹಾಕಿ. ನನ್ನ ಚಿಹ್ನೆ ‘ಕತ್ತರಿ’, ಅದಕ್ಕೆ ಕೈಜೋಡಿಸಿ. ನನ್ನದು ಬಕೆಟ್‌; ಅದನ್ನು ಬೆಂಬಲಿಸಿ. ನನ್ನ ಗುರುತು ‘ಚಪ್ಪಲಿ’ಗೆ ಮತ ನೀಡಿ.

ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸಿಗುವ ಕೆಲವು ಚಿಹ್ನೆಗಳು, ಮತ ಕೇಳುವ ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗುತ್ತಿರುವ ಕುರಿತು ಚರ್ಚೆ ನಡೆದಿದೆ.

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ಕೋಷ್ಟಕ-4ರ ಮುಕ್ತ ಚಿಹ್ನೆಗಳನ್ನು (100ಕ್ಕೂ ಹೆಚ್ಚು) ಬಿಡುಗಡೆ ಮಾಡಿದೆ. ಅವುಗಳಲ್ಲಿ ಬೂಟು, ಕಾಲುಚೀಲ, ಕತ್ತರಿ, ಬಕೆಟ್, ಜೋಡು ಚಪ್ಪಲಿ (ಪಾದರಕ್ಷೆ), ಟೋಪಿ, ಲಂಗ ಮೊದಲಾದ ಚಿಹ್ನೆಗಳನ್ನು ಪ್ರಕಟಿಸಿದೆ. ಇಂತಹ ಕೆಲವು ಚಿಹ್ನೆಗಳು ಸಿಕ್ಕಲ್ಲಿ ಮತದಾರರ ಬಳಿಗೆ ಹೋಗಿ ಅದನ್ನು ತಿಳಿಸಿ ಮತ ಯಾಚನೆ ಮಾಡಬೇಕಾದ ಅನಿವಾರ್ಯತೆ ಅಭ್ಯರ್ಥಿಗಳದಾಗಿದೆ.

ಚಪ್ಪಲಿ, ಕತ್ತರಿ, ಟೋಪಿ, ಲಂಗ, ಬಕೆಟ್, ಮೊದಲಾದ ಚಿಹ್ನೆಗಳನ್ನು ಬಳಸಿ ಎದುರಾಳಿಗೆ ನೋವನ್ನುಂಟು ಮಾಡುವ ಸಾಧ್ಯತೆಯೂ ಇದೆ. ಇಂತಹ ಚಿಹ್ನೆಗಳನ್ನು ರದ್ದುಪಡಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

‘ಪಾದರಕ್ಷೆ, ಬೂಟು, ಲಂಗದಂತಹ ಚಿಹ್ನೆಗಳನ್ನು ನೀಡಿರುವುದು ಅಭ್ಯರ್ಥಿಗಳ ಮುಜುಗರಕ್ಕೆ ಕಾರಣವಾಗಿದೆ. ಮತ ಪತ್ರದಲ್ಲಿ ಇವುಗಳನ್ನು ಚಿಹ್ನೆಯನ್ನಾಗಿ ಬಳಸಬಾರದಿತ್ತು. ಪವಿತ್ರವಾಗಿರುವ ತಮ್ಮ ಮತವನ್ನು ಚಪ್ಪಲಿ, ಬೂಟು, ಲಂಗದ ಗುರುತಿನ ಮೇಲೆ ಮುದ್ರೆಯನ್ನೊತ್ತಲು ಮತದಾರರು ಹಿಂದೆ ಮುಂದೆ ನೋಡುತ್ತಾರೆ. ಚುನಾವಣಾ ಆಯೋಗ ಇಂತಹ ಚಿಹ್ನೆಗಳನ್ನು ರದ್ದುಪಡಿಸಬೇಕು’ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್. ಸಂಗಪ್ಪಗೋಳ ಒತ್ತಾಯಿಸುತ್ತಾರೆ.

‘ಮುನುಷ್ಯನಿಗೆ ಪ್ರತಿಯೊಂದು ವಸ್ತು ಕೂಡ ಅಗತ್ಯವೇ. ಮತ ಮತ್ತು ಮತದಾನ ಕೇಂದ್ರ ಎಂಬುದು ಪವಿತ್ರವಾದುದು. ಆದರೆ, ಮತಪತ್ರದಲ್ಲಿ ಚಪ್ಪಲಿ, ಬೂಟುಗಳಂತಹ ಚಿಹ್ನೆ ಬಳಸುವುದು ಸರಿಯೇ? ಚುನಾವಣಾ ಆಯೋಗ ಇಂತಹ ಮುಜುಗರಕ್ಕೀಡು ಮಾಡುವಂತಹ ಚಿಹ್ನೆಗಳನ್ನು ನೀಡಬಾರದು’ ಎಂದು ಮುಖಂಡ ಮಲಗೌಡ ನೇರ್ಲಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು