ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Teachers' Day Special: ಗಂಗಾಧರ ಬೆಟಗೇರಿ ಎಂಬ ‘ಬೆರಗು’

ಸೇನೆ, ಎಂಜಿನಿಯರಿಂಗ್‌, ವೈದ್ಯಕೀಯ, ಸಾರ್ವಜನಿಕ ಆಡಳಿತದಲ್ಲೂ ಪದವಿ ಗಳಿಕೆ
Published : 5 ಸೆಪ್ಟೆಂಬರ್ 2024, 5:05 IST
Last Updated : 5 ಸೆಪ್ಟೆಂಬರ್ 2024, 5:05 IST
ಫಾಲೋ ಮಾಡಿ
Comments

ಬೆಳಗಾವಿ: ಒಬ್ಬ ಪರಿಪೂರ್ಣ ಗುರು ಹೇಗಿರುತ್ತಾರೆ ಎಂಬುದಕ್ಕೆ ಇವರು ಉದಾಹರಣೆ. ಇವರು ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ, ಎಂಜಿನಿಯರಿಂಗ್‌ ಓದಿದ್ದಾರೆ, ಸೈನಿಕರಾಗಿದ್ದಾರೆ, ಸಂಶೋಧಕ, ಅನ್ವೇಷಕ, ಉಪನ್ಯಾ ಸಕರೂ ಆಗಿದ್ದಾರೆ. ಅವರ ಬಳಿ ಬರೋ ಬ್ಬರಿ 27 ಕಲಿಕಾ ಪ್ರಮಾಣ ಪತ್ರಗಳಿವೆ.

ಬೆಳಗಾವಿಯ ಸರ್ಕಾರಿ ಚಿಂತಾ ಮಣರಾವ್‌ ‍ಪದವಿಪೂರ್ವ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ಗಂಗಾಧರ ಬೆಟಗೇರಿ ಅವರ ಸಾಧನೆ ಅಚ್ಚರಿ ಮೂಡಿಸುತ್ತದೆ.

ಅವರ ಶಿಕ್ಷಣ ಕ್ಷೇತ್ರದ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ‘ರಾಜ್ಯಮಟ್ಟದ ಉತ್ತಮ ಉಪನ್ಯಾಸಕ’ ಪ್ರಶಸ್ತಿ ನೀಡಿದೆ. ಅವರ ಬಹುಮುಖ ಪ್ರತಿಭೆ ಈ ಪ್ರಶಸ್ತಿ ಮೌಲ್ಯವನ್ನೇ ಮೀರಿಸುವಂಥದ್ದು.

ಗಂಗಾಧರ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದವರು. ಅವರ ಆಸಕ್ತಿ ಅಷ್ಟಕ್ಕೇ ನಿಲ್ಲಿಲ್ಲ. ಅಲ್ಟರ್ನೇಟಿವ್‌ ಸಿಸ್ಟಮ್ ಆಫ್‌ ಮೆಡಿಸಿನ್‌ನಲ್ಲಿ ವೈದ್ಯಕೀಯ ಪದವಿ ಪಡೆದರು. ಅದಾದ ಬಳಿಕವೂ ಕನ್ನಡ– ಇಂಗ್ಲಿಷ್‌ ಮಾಧ್ಯಮದಲ್ಲಿ 6 ಪದವಿಗಳು, 5 ಸ್ನಾತಕೋತ್ತರ ಪದವಿಗಳು, 6 ಡಿಪ್ಲೊಮಾ, ಒಂದು ಪಿಜಿ ಡಿಪ್ಲೊಮಾ, ಎಂ.ಫಿಲ್‌ ಕೂಡ ಗಿಟ್ಟಿಸಿಕೊಂಡಿದ್ದಾರೆ. ಕಲಿಕೆಗೆ ಕೊನೆ ಇಲ್ಲ ಎಂಬುದನ್ನು ಅವರು ಬದುಕು ತೋರಿಸಿದ್ದಾರೆ.

20 ವರ್ಷ ಭಾರತೀಯ ಸೇನೆಯಲ್ಲಿ ಜೂನಿಯರ್ ವಾರಂಟ್ ಆಫೀಸರ್‌ ಆಗಿದ್ದರು. ನಿವೃತ್ತಿ ಬಳಿಕ ಅವರಿಗೆ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅವಕಾಶಗಳು ಹುಡುಕಿ ಬಂದವು. ಆದರೆ ‘ಕಲಿ– ಕಲಿಸು’ ಎಂಬುದರತ್ತ ಅವರ ಮನಸ್ಸು ವಾಲಿತು. ಸರ್ಕಾರಿ ಚಿಂತಾಮಣರಾವ್ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ಇಲ್ಲಿಗೆ 16 ವರ್ಷ ವೃತ್ತಿ ನಿಭಾಯಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಕಾಲೇಜಿನ ಹೊರತಾಗಿಯೂ ಅವರು ಇಂಗ್ಲಿಷ್‌ ಭಾಷಾಜ್ಞಾನ ನೀಡಲು ನಿರಂತರ ಶ್ರಮಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಇಡೀ ರಾಜ್ಯದಲ್ಲಿ ಜ್ಞಾನದ ಬೀಜ ಬಿತ್ತಿದ್ದಾರೆ.

ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ರಷಿಯನ್‌ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದಾರೆ. ಪಿಯು ಕಾಲೇಜು ಇಂಗ್ಲಿಷ್‌ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರೂ ಹೌದು. ರಷ್ಯಾದಲ್ಲಿ ‘ವಿಶೇಷ ವಿಮಾನಯಾನ ತಾಂತ್ರಿಕ ತರಬೇತಿ’ಯನ್ನೂ ಪಡೆದಿದ್ದಾರೆ.

‘ಇಂಗ್ಲಿಷ್‌ ಭಾಷೆ ಸುಲಭ’ ಎನ್ನುವುದು ನನ್ನ ಮೂಲಮಂತ್ರ. ಇದನ್ನು ಯಾರೆಲ್ಲರೂ ಸುಲಭವಾಗಿ ಕಲಿಯಬಹುದು ಎಂಬುದನ್ನು ಸಾಧಿಸುವುದೇ ಗುರಿ. ಕಲೆ, ವಿಜ್ಞಾನ, ವಾಣಿಜ್ಯ, ಭಾಷಾಜ್ಞಾನ, ಸಾರ್ವಜನಿಕ ಆಡಳಿತ, ದೇಶ ಸೇವೆ; ಹೀಗೆ ಎಲ್ಲ ವಿಷಯಗಳನ್ನೂ ಓದಿದ್ದೇನೆ. ಇದು ಎಲ್ಲರಿಂದಲೂ ಸಾಧ್ಯವಿದೆ’ ಎನ್ನುವುದು ಗಂಗಾದರ ಅವರ ಕಿವಿಮಾತು.

ರಾಯಬಾಗದ ನ್ಯೂ ಸಂಯುಕ್ತ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಣ್ಣಪ್ಪ ಸದಾಶಿವ ಕುಂಬಾರ ಅವರು ಅರ್ಥಶಾಸ್ತ್ರಕ್ಕೂ ಕಲಾತ್ಮಕ ಸ್ಪರ್ಶ ನೀಡಿದವರು. ಅರ್ಥಶಾಸ್ತ್ರ ವಿಷಯ ಅತ್ಯಂತ ಜಟಿಲವಾಗಿದ್ದರೂ ಅದನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಹಾಗೂ ಅರ್ಥ ಮಾಡಿಸುವ ಕೌಶಲ ಅವರಿಗೆ ಇದೆ. ಈ ಸಾಧನೆ ಪರಿಗಣಿಸಿ ‘ರಾಜ್ಯಮಟ್ಟದ ಉತ್ತಮ ಉ‍ಪನ್ಯಾಸಕ’ ಪ್ರಶಸ್ತಿ ನೀಡಲಾಗಿದೆ.

ಎಂ.ಎ, ಬಿಇಡಿ, ಎಂ.ಫಿಲ್‌ ಪದವಿ ಪಡೆದ ಅವರು, 17 ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅರ್ಥಶಾಸ್ತ್ರ ಬೋಧಿಸುತ್ತಿದ್ದಾರೆ. ಇಲ್ಲಿಯವರೆಗೂ ತಮ್ಮ ವಿಷಯದಲ್ಲಿ ಶೇ 100ರಷ್ಟು (ಎರಡು ಬಾರಿ ಶೇ 98) ಫಲಿತಾಂಶ ನೀಡಿದ್ದು ಹಿರಿಮೆ.

‘ಅರ್ಥಶಾಸ್ತ್ರ ಹಬ್ಬ’ವನ್ನು ಪ್ರತಿವರ್ಷ ಆಚರಿಸುವುದು ಅವರ ಹವ್ಯಾಸ. ತಾಲ್ಲೂಕಿನ ಮಕ್ಕಳಿಗೆ ರಂಗೋಲಿ, ಪೇಂಟಿಂಗ್‌, ಡಯಗ್ರಾಮ್‌ ಮೂಲಕ ಅರ್ಥಶಾಸ್ತ್ರವನ್ನು ರುಚಿಕಟ್ಟಾಗಿ ಉಣಬಡಿಸಿದ ಕೀರ್ತಿ ಅವರದು.

ಅನುತ್ತೀರ್ಣರಾದ, ಕಲಿಕೆ ಅರ್ಧಕ್ಕೆ ನಿಲ್ಲಿಸಿದ, ಬಡ ಮಕ್ಕಳನ್ನು ಮತ್ತೆ ಕಾಲೇಜಿನತ್ತ ಸೆಳೆಯುವುದು ಅವರ ಕಾಯಕ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದವರಿಗೆ, ಹಾಸ್ಟೆಲ್‌ ಮಕ್ಕಳಿಗೆ ಉಚಿತ ಮಾರ್ಗದರ್ಶನ ಮಾಡುವುದು ಅವರ ಖುಷಿ.

ಈ ಬಾರಿ ನಾನು ಉತ್ತಮ ಉಪನ್ಯಾಸಕ ಪ್ರಶಸ್ತಿ ಆಯ್ಕೆ ಸಮಿತಿಯ ನೇತೃತ್ವ ವಹಿಸಿದ್ದೆ. ಆಯ್ಕೆ ಮಾಡಲು ಕಷ್ಟವಾಗುವಷ್ಟು ಸಂಖ್ಯೆಯ ಆದರ್ಶ ಉಪನ್ಯಾಸಕರು ನಮ್ಮಲ್ಲಿದ್ದಾರೆ.
ಎಂ.ಎಂ.ಕಾಂಬಳೆ, ಡಿಡಿಪಿಯು, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT