ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮಕನಮರಡಿ: ಪಾಳುಬಿದ್ದ ಕೆರೆಗೆ ಹೊಸ ರೂಪ

Published 6 ಆಗಸ್ಟ್ 2023, 5:18 IST
Last Updated 6 ಆಗಸ್ಟ್ 2023, 5:18 IST
ಅಕ್ಷರ ಗಾತ್ರ

ಭೀಮಪ್ಪ ಕೋತೇಕರ

ಯಮಕನಮರಡಿ: ಕೆಲವೇ ವರ್ಷಗಳ ಹಿಂದೆ ಅವ್ಯವಸ್ಥೆಯ ಆಗರವಾಗಿದ್ದ ಇಲ್ಲಿನ ಹೊರವಲಯದ ಕೆರೆ, ಇಂದು ಮಾದರಿ ಕೆರೆಯಾಗಿ ಹೊರಹೊಮ್ಮಿದೆ. ನರೇಗಾ ಯೋಜನೆಯಡಿ ಇದಕ್ಕೆ ಹೊಸ ರೂಪ ಕೊಡಲಾಗಿದೆ.

ಮರಾಠಾ ಪೇಶ್ವೆಯವರ ಆಡಳಿತಕ್ಕೆ ಒಳಪಟ್ಟ (17ನೇ ಶತಮಾನ) ವೇಳೆ, ಸ್ಥಳೀಯ ಪಾಳೆಯಗಾರ ವಿಷ್ಣುಪಂಥ ಕೆರೆ ನಿರ್ಮಿಸಿದ್ದರು. ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಅವರ ಉದ್ದೇಶವಾಗಿತ್ತು. ಆದರೆ, ಗ್ರಾಮ ಪಂಚಾಯ್ತಿಯಿಂದ ನಿರ್ಲಕ್ಷ್ಯದಿಂದ  ಪ್ರಮುಖ ಜಲಮೂಲ ಹಾಳಾಗಿತ್ತು. ಅದರಲ್ಲಿನ ನೀರು ಕಲುಷಿತಗೊಂಡಿದ್ದರಿಂದ ಇದ್ದೂ ಇಲ್ಲದಂತಿತ್ತು.

ಕೆರೆ ದುಸ್ಥಿತಿಗೆ ತಲುಪಿರುವುದನ್ನು ಅರಿತ ಗ್ರಾಮ ಪಂಚಾಯ್ತಿಯವರು ಕಳೆದ ವರ್ಷ ನರೇಗಾ ಯೋಜನೆಯಡಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಅದರಲ್ಲಿನ ಹೂಳು ತೆಗೆಸಿದ್ದಾರೆ. ಈಗ ಮೈದುಂಬಿಕೊಂಡಿರುವ ಕೆರೆ ಕಂಗೊಳಿಸುತ್ತಿದ್ದು, ಮೀನುಗಾರಿಕೆಗೂ ಅವಕಾಶ ಕಲ್ಪಿಸಲಾಗಿದೆ.

ವಾಯುವಿಹಾರಿಗಳಿಗೆ ಅನುಕೂಲ: ನಿತ್ಯ ಬೆಳಿಗ್ಗೆ ಮತ್ತು ಸಂಜೆ ನೂರಾರು ಜನರು ವಾಯುವಿಹಾರಕ್ಕಾಗಿ ಈ ಕೆರೆಯತ್ತ ಬರುತ್ತಾರೆ. ಅವರಿಗೆ ಅನುಕೂಲವಾಗಲೆಂದು ಕೆರೆ ಸುತ್ತಲೂ ಫುಟ್‌ಪಾತ್‌ ನಿರ್ಮಿಸಲಾಗಿದೆ. ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.  ವ್ಯಾಯಾಮಕ್ಕಾಗಿ ಕ್ರೀಡಾ ಸಾಮಗ್ರಿ ಅಳವಡಿಸಲಾಗಿದೆ. ಇದೇ ಆವರಣದಲ್ಲಿ ಅರಣ್ಯ ಇಲಾಖೆಯು ಸಸಿಗಳನ್ನು ನೆಟ್ಟು, ಪೋಷಿಸುತ್ತಿರುವುದರಿಂದ ಆರೋಗ್ಯಕರ ವಾತಾವರಣ ನಿರ್ಮಿಸಲಾಗಿದೆ. ಸುತ್ತಲೂ ತಂತಿ–ಬೇಲಿ ಹಾಕಿದ್ದರಿಂದ ಜನರು ತ್ಯಾಜ್ಯ ಪದಾರ್ಥಗಳನ್ನು ಕೆರೆಗೆ ಎಸೆಯುವುದು ತಪ್ಪಿದೆ. ಸುತ್ತಲಿನ ಕೃಷಿಭೂಮಿಯಲ್ಲಿನ ಕೊಳವೆಬಾವಿ ಮತ್ತು ತೆರೆದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ.

‘ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿಪಡಿಸಿದ್ದರಿಂದ ಜನರಿಗೆ ಅನುಕೂಲವಾಗಿದೆ. ಇಲ್ಲಿ ಇನ್ನಷ್ಟು ಸೌಕರ್ಯಗಳನ್ನು ಒದಗಿಸಿ, ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕು’ ಎನ್ನುತ್ತಾರೆ ಗ್ರಾಮಸ್ಥ ತಮ್ಮಣ್ಣಾ ಪಾತ್ರೋಟ.

ಯಮಕನಮರಡಿ ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಕೆರೆ
ಯಮಕನಮರಡಿ ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಕೆರೆ
ನರೇಗಾ ಯೋಜನೆಯಡಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ತಂಡದವರು ಇಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದು ನಮ್ಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ
–ಶಿವಲಿಂಗ ಢಂಗ ಪಿಡಿಒ ಯಮಕನಮರಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT