ಶುಕ್ರವಾರ, ಜುಲೈ 30, 2021
22 °C
ಗಮನಸೆಳೆದ ಮುಗಳಿಹಾಳ ಗ್ರಾಮ ಪಂಚಾಯಿತಿ ಕ್ರಮ

ಸವದತ್ತಿ: ‘ಉದ್ಯೋಗ ಖಾತ್ರಿ’ಯಲ್ಲಿ ಶಾಲೆಗೆ ಮೈದಾನ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಆಟದ ಮೈದಾನ ನಿರ್ಮಿಸಿರುವುದು ಗಮನಸೆಳೆದಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಾನ್ಯವಾಗಿ ರಸ್ತೆ, ಚರಂಡಿ, ಕೃಷಿ ಹೊಂಡ, ಬದುಗಳ ನಿರ್ಮಾಣ ಮೊದಲಾದವುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ, ಮುಗಳಿಹಾಳದಲ್ಲಿ ಮಕ್ಕಳು ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಮೈದಾನ ಅಭಿವೃದ್ಧಿಪಡಿರುವುದು ವಿಶೇಷವಾಗಿದೆ. ಸಮುದಾಯಕ್ಕೆ ಆಸ್ತಿ ನಿರ್ಮಿಸುವ ಈ ಕಾರ್ಯ ಎರಡು ತಿಂಗಳಿಂದ ಪ್ರಗತಿಯಲ್ಲಿದ್ದು, ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಶಾಲೆ ಪುನರಾರಂಭಗೊಳ್ಳುವ ವೇಳೆಗೆ ಮೈದಾನವು ಸಂಪೂರ್ಣವಾಗಿ ಸಿದ್ಧವಾಗಲಿದ್ದು, ಮಕ್ಕಳನ್ನು ಆಕರ್ಷಿಸಲಿದೆ.

‘200 ಮೀ. ಮತ್ತು 100 ಮೀ. ಟ್ರ್ಯಾಕ್, ಕೊಕ್ಕೊ ಮೈದಾನ, ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ವಾಲಿಬಾಲ್‌ ಮತ್ತು ಥ್ರೋಬಾಲ್ ಅಂಕಣ, ಕಬ್ಬಡ್ಡಿ ಅಂಕಣ, ಎತ್ತರ ಜಿಗಿತ ಹಾಗೂ ಉತ್ತರ ಜಿಗಿತ ಅಭ್ಯಾಸಕ್ಕೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಟ್ರ್ಯಾಕ್‌, ಕೊ ಕ್ಕೊ ಹಾಗೂ ವಾಲಿಬಾಲ್‌ ಅಂಕಣದ ಕಂಬಗಳಿಗೆ ಬಣ್ಣ ಬಳಿದರೆ ಕಾಮಗಾರಿ ಪೂರ್ಣಗೊಳ್ಳಲಿದೆ. ಶಾಲಾ ಮಕ್ಕಳಿಗೆ ಹಾಗೂ ಸ್ಥಳೀಯ ಯುವಕರಿಗೆ ಕ್ರೀಡಾ ಚಟುವಟಿಕೆಗಳಿಗೆ ಮತ್ತು ವ್ಯಾಯಾಮಕ್ಕೆ ಅನುಕೂಲವಾಗಲೆಂದು ಮೈದಾನ ನಿರ್ಮಿಸಲಾಗಿದೆ’ ಎಂದು ಪಿಡಿಒ ಅಮಿತ್ ಯಲ್ಲಪ್ಪ ನಾಯಿಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈದಾನಕ್ಕಾಗಿ ಸ್ಥಳೀಯರಿಂದಲೂ ಬೇಡಿಕೆ ಇತ್ತು. ₹ 7 ಲಕ್ಷ ವೆಚ್ಚದ ಕಾರ್ಯಕ್ರಮ ಇದಾಗಿದೆ. ಸ್ಥಳೀಯರೇ ಆದ 35ರಿಂದ 40 ಮಂದಿ ಕೂಲಿಕಾರ್ಮಿಕರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಈವರೆಗೆ 503 ಮಾನವ ದಿನಗಳನ್ನು ಸೃಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘1999ರಲ್ಲಿ ಆರಂಭವಾದ ಈ ಪ್ರೌಢಶಾಲೆಗೆ ಮುಗಳಿಹಾಳ ಗ್ರಾಮದೊಂದಿಗೆ ಸುತ್ತಮುತ್ತಲಿನ ಮೆಳ್ಳಿಕೇರಿ, ದಾಸನಾಳ, ಅಕ್ಕಿಸಾಗರ, ಕೊಡ್ಲಿವಾಡ,  ಗೋಣಕೊಪ್ಪ, ರಾಮದುರ್ಗ ತಾಲ್ಲೂಕಿನ ಬಾಗೋಜಿಕೊಪ್ಪ ಹಾಗೂ ಹಿರೇಕೊಪ್ಪ ಗ್ರಾಮಗಳ ಮಕ್ಕಳು ಬರುತ್ತಾರೆ. ಒಟ್ಟು 300 ವಿದ್ಯಾರ್ಥಿಗಳಿದ್ದಾರೆ. ಹಿಂದೆ ಇಲ್ಲಿ ಖಾಲಿ ಜಾಗವನ್ನು ಮೈದಾನವನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ಈಗ, ಸುಸಜ್ಜಿತ ಮೈದಾನ ಸಿದ್ಧಗೊಂಡಿರುವುದರಿಂದ ಮಕ್ಕಳ ಆಟೋಟಕ್ಕೆ ಅನುಕೂಲವಾಗಲಿದೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಬಹುದಾಗಿದೆ’ ಎನ್ನುತ್ತಾರೆ ಅವರು.

***

ಗೋಪಾಲಗೌಡ ಗಂಗರೆಡ್ಡಿ ಎನ್ನುವವರು ತಾಯಿ ಹೆಸರಿನಲ್ಲಿ ಶಾಲೆಗೆ 3 ಎಕರೆ ದಾನವಾಗಿ ಕೊಟ್ಟಿದ್ದರು. ಹಿಂದೆ ಇದ್ದ ಮೈದಾನ ಸಮತಟ್ಟಾಗಿರಲಿಲ್ಲ. ನಿರ್ದಿಷ್ಟ ಅಂಕಣ ಇರಲಿಲ್ಲ. ಈಗ ಯೋಜಿತವಾಗಿ ನಿರ್ಮಿಸಿರುವುದರಿಂದ ಮಕ್ಕಳಿಗೆ ಅನುಕೂಲವಾಗಲಿದೆ

- ವಿಠ್ಠಲ ದಳವಾಯಿ, ಗ್ರಾಮಸ್ಥ, ಮುಗಳಿಹಾಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು