ಭಾನುವಾರ, ಜುಲೈ 3, 2022
25 °C

ಕೃಷಿ ಇಲಾಖೆಯಲ್ಲಿ ಶೇ 55ರಷ್ಟು ಸಿಬ್ಬಂದಿ ಕೊರತೆ: ಸಚಿವ ಬಿ.ಸಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೃಷಿ ಇಲಾಖೆಯಲ್ಲಿ ಶೇ 55ರಷ್ಟು ಸಿಬ್ಬಂದಿ ಕೊರತೆ ಇದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್ ಕಾರಣದಿಂದಾಗಿ, ಹೋದ ವರ್ಷ ಹಾಗೂ ಈ ಬಾರಿ ನೇಮಕಾತಿ ನಡೆದಿಲ್ಲ. ರೈತ ಮಿತ್ರರ ನೇಮಕಕ್ಕೆ ಯೋಜಿಸಲಾಗಿತ್ತು. ಅದನ್ನೂ ಮಾಡಿಕೊಳ್ಳಲು ಆಗಿಲ್ಲ. ಸಹಾಯಕ ನಿರ್ದೇಶಕರು ಮತ್ತು ಅದಕ್ಕಿಂತ ಮೇಲಿನ ಹುದ್ದೆಯವರು ಇದ್ದಾರೆ. ಕೆಳಹಂತದ ಸಿಬ್ಬಂದಿ ಇಲ್ಲದೆ ಕ್ಷೇತ್ರಮಟ್ಟದಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತೊಂದರೆ ಆಗುತ್ತಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಗಮನಸೆಳೆಯಬೇಕಿದೆ. ಶಾಸಕರು ಕೂಡ ದನಿಗೂಡಿಸಬೇಕು’ ಎಂದರು.

‘ರಾಜ್ಯ ಮಾರುಕಟ್ಟೆ ಒಕ್ಕೂಟದ ಮೂಲಕ ಸೊಸೈಟಿಗಳಿಗೆ ಸರಿಯಾಗಿ ರಸಗೊಬ್ಬರ ಹೋಗುತ್ತಿಲ್ಲ. ಈ ಬಗ್ಗೆ, ನನ್ನ ಜಿಲ್ಲೆಯಾದ ಹಾವೇರಿ ಬಹಳ ದೂರುಗಳಿವೆ. ಇನ್ನು ಇತರ ಜಿಲ್ಲೆಗಳಲ್ಲಿ ಕಥೆ ಏನು? ಯಾವುದೇ ಕಾರಣಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೇ 18ಕ್ಕೆ ಇಂಡೆಂಟ್ ಕೊಟ್ಟು, ಹಣ ನೀಡಿದ್ದರೂ ಪೂರೈಕೆಯಾಗಿಲ್ಲ ಎಂದರೆ ಏನರ್ಥ? ಇದನ್ನು ಒಕ್ಕೂಟದವರು ಗಂಭೀರವಾಗಿ ಪರಿಗಣಿಸಬೇಕು’ ಎಂದು ತಾಕೀತು ಮಾಡಿದರು.

‘ರಾಜ್ಯ ಬೀಜ ನಿಗಮದಿಂದಲೂ ರಸಗೊಬ್ಬರ ವಿತರಣೆ ಕಾರ್ಯವನ್ನು ಈ ವರ್ಷದಿಂದ ಆರಂಭಿಸಲಾಗುವುದು. ಇದಕ್ಕಾಗಿ ₹ 150 ಕೋಟಿ ನೀಡಲಾಗಿದೆ. ಇಲಾಖೆಯಿಂದ ವಿವಿಧ ಯೋಜನೆಗಳಲ್ಲಿ ಸಹಾಯಧನ ಮುಂದುವರಿಸಲು ಆದೇಶಿಸಲಾಗಿದೆ’ ಎಂದು ತಿಳಿಸಿದರು.

‘ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು