ಮಂಗಳವಾರ, ಸೆಪ್ಟೆಂಬರ್ 28, 2021
23 °C

ಗಡಿಯಲ್ಲಿ ಕನ್ನಡ ಕಲಿಕೆಗೆ ಒತ್ತು ನೀಡಿದ ಹೇಮಾ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿ ಭಾಂದೂರ ಗಲ್ಲಿಯ ಮರಾಠಿ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕಿ ಹೇಮಾ ಪ್ರಭಾಕರ ಅಂಗಡಿ 2021–22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನವಾಗಿದ್ದಾರೆ.

21 ವರ್ಷಗಳಿಂದ ಗಡಿ ಭಾಗದಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಪುಣೆಯಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್ ವಿಷಯದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ, ರಾಜ್ಯ, ಜಿಲ್ಲಾಮಟ್ಟದ ವಸ್ತುಪ್ರದರ್ಶನಗಳಲ್ಲಿ ವಿಚಾರ ಮಂಡಿಸಿದ್ದಾರೆ. ವೇಣುಧ್ವನಿ ರೇಡಿಯೊ ಕಾರ್ಯಕ್ರಮದಲ್ಲಿ ಮಕ್ಕಳ ಬಾಲ್ಯ ಹಾಗೂ ಶಿಕ್ಷಣ ಕುರಿತು ವಿಚಾರ ಮಂಡನೆ ಮಾಡಿದ್ದಾರೆ.

ಮಕ್ಕಳ ದಾಖಲಾತಿ ಹೆಚ್ಚಿಸಲು ಹಾಗೂ ಮಕ್ಕಳು ಶಾಲೆ ಬಿಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ. ಮಕ್ಕಳು ಮನೆಯಲ್ಲಿ ಕುಳಿತು ಅಭ್ಯಸಿಸಲು 20 ಪಾಠಗಳ ಬೋಧನೆಯ ವಿಡಿಯೊಗಳನ್ನು ಮಾಡಿದ್ದಾರೆ. ಶಿಕ್ಷಕರಿಗಾಗಿ ಚಟುವಟಿಕೆ ಬ್ಯಾಂಕ್‌ ತಯಾರಿಸುವಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತ್ಯ ರಚನೆ ಮಾಡಿದ್ದಾರೆ. ಕಲಿಕೆಯ 5 ಹಂತಗಳಲ್ಲಿ ಶಿಕ್ಷಕರು ಅಳವಡಿಸಿಕೊಳ್ಳಬಹುದಾದ ಚಟುವಟಿಕೆಗಳ ಸಂಪೂರ್ಣ ವಿವರ ಹೊಂದಿರುವ ‘ಬ್ಯಾಂಕ್’ ತಯಾರಿಸಿ ಗಮನಸೆಳೆದಿದ್ದಾರೆ.

ಮಕ್ಕಳ ಸಂತೋಷದಾಯಕ ಕಲಿಕೆಗಾಗಿ ಕನ್ನಡ ಭಾಷೆ ಪ್ರಯೋಗಾಲಯ ಮಾಡಿದ್ದಾರೆ. ತಂತ್ರಜ್ಞಾನದ ಮೂಲಕ ಬೋಧನೆ, ಬ್ರೇನ್ ಟ್ರೇನಿಂಗ್ ವ್ಯಾಯಾಮಗಳ ಮೂಲಕ ಮಕ್ಕಳಲ್ಲಿ ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಬೆಳೆಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಕನ್ನಡ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ವಿವಿಧ ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ಶಾಲಾ ಭೌತಿಕ ಸೌಲಭ್ಯಗಳ ವಿಸ್ತರಣೆಗೆ ಕ್ರಮ ವಹಿಸಿದ್ದಾರೆ.

ಬಿಎ, ಬಿಇಡಿ, ಎಂ.ಎ. ಪಿಜಿಡಿಇಎಲ್‌ಟಿ (ಆರ್‌ಐಇ ಬೆಂಗಳೂರಿನಿಂದ) ಹೆಚ್ಚುವರಿ ವಿದ್ಯಾರ್ಹತೆ ಗಳಿಸಿದ್ದಾರೆ. ಉತ್ತಮ ಸೇವೆಗಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಕನ್ನಡ ಶಿಕ್ಷಕಿ ಪ್ರಶಸ್ತಿ, ನೇಷನ್‌ ಬಿಲ್ಡರ್ ಅವಾರ್ಡ್ ಪಡೆದಿದ್ದಾರೆ. ಇಲಾಖೆ ನೀಡುವ ತರಬೇತಿಗಳಲ್ಲದೆ, ವಿವಿಧ ಸಂಘ–ಸಂಸ್ಥೆಗಳು ನೀಡುವ ತರಬೇತಿಗಳಲ್ಲೂ ಪಾಲ್ಗೊಂಡು ಕೌಶಲ ವೃದ್ಧಿಗೆ ಆದ್ಯತೆ ಕೊಟ್ಟಿದ್ದಾರೆ. ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದಾರೆ. ಬಡ ಹಾಗೂ ಜಾಣ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ಕೊಟ್ಟು ಗಮನಸೆಳೆದಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಇಲಾಖೆಯು ಪ್ರಶಸ್ತಿ ನೀಡಿದೆ.

‘ಗುಂಪು ಚಟುವಟಿಕೆ, ಭಾಷಾ ಮೇಳ, ಸಂದರ್ಶನ ಕೀರ್ತನೆ, ಘೋಷಣೆ, ಕ್ಷೇತ್ರ ದರ್ಶನ, ಆಟದ ಕಾರ್ಡಗಳು ಮೊದಲಾದ ಚಟುವಟಿಕೆಗಳ ಮೂಲಕ ಕಲಿಸುತ್ತಿದ್ದೇನೆ. ‘ನನ್ನ ಬರಹ ಸುಂದರ ಬರಹ’ ಯೋಜನೆಯ ಸಾಹಿತ್ಯ ರಚನೆಯಲ್ಲಿ ಭಾಗಿಯಾಗಿ, ಇಂಗ್ಲಿಷ್ ಸಾಹಿತ್ಯದ ಸಂಪೂರ್ಣ ರಚನೆ ಮಾಡಿದ್ದೇನೆ. ನಿತ್ಯವೂ ಹೊಸ ವಿಚಾರ, ವಿಶಿಷ್ಟ ಯೋಜನೆಗಳೊಂದಿಗೆ ಮಕ್ಕಳಿಗೆ ಕಲಿಸುತ್ತಿದ್ದೇನೆ. ಪ್ರಶಸ್ತಿಯು ಮತ್ತಷ್ಟು ಹೆಚ್ಚಿನ ಸೇವೆಗೆ ಪ್ರೋತ್ಸಾಹ ನೀಡಿದೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು