ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭೆ ಚುನಾವಣೆ: ಭದ್ರಕೋಟೆಗೆ ಇನ್ನೂ ಸಿಗದ ಸೇನಾಪತಿ

Published 20 ಮಾರ್ಚ್ 2024, 6:45 IST
Last Updated 20 ಮಾರ್ಚ್ 2024, 6:45 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಐದು ದಿನಗಳಾದರೂ ಬೆಳಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಇನ್ನೂ ಬಹಿರಂಗವಾಗಿ ಘೋಷಿಸಿಲ್ಲ. ಒಂದು ಹಳೆ ಮುಖ, ಇನ್ನೊಂದು ಹೊಸ ಮುಖದ ಹೆಸರು ಮಾತ್ರ ಕಾರ್ಯಕರ್ತರ ಬಾಯಿಯಲ್ಲಿ ಓಡಾಡುತ್ತಿವೆ.

ಬೆಳಗಾವಿ ಕ್ಷೇತ್ರ ಕಳೆದ ಐದು ಚುನಾವಣೆಗಳಿಂದ ಬಿಜೆಪಿ ಭದ್ರಕೋಟೆ ಎಂದು ನಿರೂಪಿಸಿದೆ. ದಿವಂಗತ ಸುರೇಶ ಅಂಗಡಿ ಅವರು 2004, 2009, 2014, 2019 ಹೀಗೆ ಸತತ ನಾಲ್ಕು ಬಾರಿ ವಿಜಯ ಸಾಧಿಸಿದ್ದರು. ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಅವರು ಕೊರೊನಾ ಸಂದರ್ಭದಲ್ಲಿ ಅಕಾಲಿಕ ನಿಧನರಾದರು. 2020ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಮತ್ತೆ ಬಿಜೆಪಿಯಿಂದ ಗೆದ್ದರು.

ಐದು ಬಾರಿ ಇಲ್ಲಿನ ಮತದಾರ ಬಿಜೆಪಿಗೆ ಭದ್ರನೆಲೆ ಕಟ್ಟಿಕೊಟ್ಟಿದ್ದಾನೆ. ಆದರೂ ಕಣ್ಣುಮುಚ್ಚಿ ಒಬ್ಬ ಸಮರ್ಥ ಅಭ್ಯರ್ಥಿಯನ್ನು ಮುಂಚಿತವಾಗಿ ಘೋಷಣೆ ಮಾಡುವಂಥ ಎದೆಗಾರಿಕೆ ಕಮಲ ಪಾಳೆಯ ತೋರಿಸಲಿಲ್ಲ. ಜಗದೀಶ ಶೆಟ್ಟರ್‌ ಅವರ ಅನಿರೀಕ್ಷಿತ ಪ್ರವೇಶ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಆಗಿದೆ.

ಜಗದೀಶ ಶೆಟ್ಟರ್‌ ಸ್ಪರ್ಧಿಸುವುದು ಖಾತ್ರಿ ಎಂದು ಬಿಜೆಪಿ ವಲಯ ನಿರ್ಧರಿಸಿತ್ತು. ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆ ಆಗದ ಕಾರಣ ಮತ್ತೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಕೆಲ ಆಕಾಂಕ್ಷಿಗಳ ತಂಡ ಹಾಗೂ ಕಾರ್ಯಕರ್ತರು ಟಿಕೆಟ್‌ ತಪ್ಪಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲೂ ವಿಳಂಬ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಹೆಸರನ್ನು ಕಾಂಗ್ರೆಸ್‌ ಬಹುತೇಕ ಅಂತಿಮ ಮಾಡಿದೆ. ಆದರೆ, ಮೊದಲ ಪಟ್ಟಿಯಲ್ಲಿ ಅವರ ಹೆಸರೂ ಸೇರಿಲ್ಲ. ‘ಮಗನ ಸ್ಪರ್ಧೆಯನ್ನು ರಾಜ್ಯದ ನಾಯಕರು ಬಯಸಿದ್ದಾರೆ’ ಎಂದು ಹೇಳುವ ಮೂಲಕ ಲಕ್ಷ್ಮಿ ಹೆಬ್ಬಾಳಕರ ಸಹ ಇದನ್ನು ಖಾತ್ರಿ ಮಾಡಿದ್ದಾರೆ.

ಲೋಕಸಭೆಯಲ್ಲಿ ಐದು ಭಾರಿ ಬಿಜೆಪಿ ಗೆದ್ದಿದೆ. ಆದರೆ, ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರೇ ಹೆಚ್ಚಿದ್ದಾರೆ. ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ರಾಮದುರ್ಗ, ಸವದತ್ತಿಯಲ್ಲಿ ಕಾಂಗ್ರೆಸ್‌ ಶಾಸಕರೇ ಇದ್ದಾರೆ. ಹೀಗಾಗಿ, ಮೃಣಾಲ್‌ ಅವರಿಗೂ ಇವರು ಭದ್ರಕೋಟೆ ನಿರ್ಮಿಸುವ ಅವಕಾಶಗಳು ಇವೆ.

ಪಕ್ಷದೊಳಗೆ ಏನು ಬೇಕಾದರೂ ಬದಲಾಗಬಹುದು. ಹೀಗಾಗಿ, ಶೆಟ್ಟರ್‌ ಆಗಲೀ, ಮೃಣಾಲ್‌ ಆಗಲೀ ಇನ್ನೂ ಒಂದೇ ಒಂದು ಪ್ರಚಾರ ಸಭೆ ಮಾಡಿಲ್ಲ. ತಮಗೇ ಟಿಕೆಟ್‌ ಸಿಗುತ್ತದೆಯೇ ಎಂಬ ಅನುಮಾನ ಇನ್ನೂ ಸುಳಿದಾಡುತ್ತಿದೆ ಎಂಬುದು ರಾಜಕೀಯ ನಾಯಕರ ಅನಿಸಿಕೆ.

ಮೃಣಾಲ್‌ ಹೆಬ್ಬಾಳಕರ
ಮೃಣಾಲ್‌ ಹೆಬ್ಬಾಳಕರ

ನಿಯೋಗಕ್ಕೆ ನಿರಾಸೆ

‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲೆಯ ನಾಯಕರಿಗೆ ಅವಕಾಶ ಕೊಡಬೇಕು. ಜಗದೀಶ ಶೆಟ್ಟರ್‌ ಅವರನ್ನು ಕೈಬಿಡಬೇಕು’ ಎಂದು ಆಗ್ರಹಿಸಲು ಸೋಮವಾರ ಬೆಂಗಳೂರಿಗೆ ತೆರಳಿದ್ದ  ಜಿಲ್ಲೆಯ ಬಿಜೆಪಿ ನಾಯಕರ ನಿಯೋಗಕ್ಕೆ ನಿರಾಸೆಯಾಗಿದೆ. ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಶಾಸಕ ಅಭಯ ಪಾಟೀಲ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮಹಾಂತೇಶ ಕವಟಗಿಮಠ ಮುರುಘೇಂದ್ರಗೌಡ ಪಾಟೀಲ ಧನಂಜಯ ಜಾಧವ ಸೇರಿ ಹತ್ತಕ್ಕೂ ಹೆಚ್ಚು ಮುಖಂಡರು ಈ ನಿಯೋಗದಲ್ಲಿ ಇದ್ದರು. ಎರಡು ದಿನಗಳ ಹಿಂದಷ್ಟೇ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಬಿಜೆಪಿ ನಾಯಕ ಪ್ರಭಾಕರ ಕೋರೆ ಅವರ ಬೆಳಗಾವಿಯ ಮನೆಯಲ್ಲಿ ಗೋಪ್ಯ ಸಭೆ ಸೇರಿದ್ದರು. ಹೊರಗಿನವರಿಗೆ ಟಿಕೆಟ್‌ ಕೊಡಬಾರದು ಎಂದು ದೆಹಲಿ ನಾಯಕರ ಮೇಲೆ ಒತ್ತಡ ಹೇರುವ ಕುರಿತು ಸಭೆಯಲ್ಲಿ ನಿರ್ಧರಿಸಿದ್ದರು. ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ‌ರಾಜೇಶ ಉಸ್ತುವಾರಿ ರಾಧಾ ಮೋಹನದಾಸ್ ಅವರನ್ನು ಭೇಟಿಯಾದದರು. ಆದರೆ ತಂಡದ ಮಾತಿಗೆ ಕ್ಯಾರೆ ಎನ್ನದ ನಾಯಕರು ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ; ಪಕ್ಷ ಹೇಳಿದಂತೆ ಕೇಳಬೇಕು ಅಷ್ಟೇ’ ಎಂದು ಕಟ್ಟಪ್ಪಣೆ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗದೇ ಮರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಟಿಕೆಟ್ ಪ್ರಧಾನಿ ನೇತೃತ್ವದ ಸಭೆಯಲ್ಲಿ ತೀರ್ಮಾನ: ಶೆಟ್ಟರ್

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಚುನಾವಣಾ ಸಮಿತಿ ಸಭೆ ನಾಳೆ ಅಥವಾ ನಾಡಿದ್ದು ನಡೆಯಲಿದ್ದು ಬೆಳಗಾವಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವರು’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ಹೇಳಿದರು. ನವದೆಹಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವರು ಎಂಬ ವಿಶ್ವಾಸವಿದೆ’ ಎಂದರು. ‘ಬೆಳಗಾವಿಯ ಬಿಜೆಪಿ ನಾಯಕರಾದ ಪ್ರಭಾಕರ ಕೋರೆ ಅಭಯ ಪಾಟೀಲ ಈರಣ್ಣ ಕಡಾಡಿ ಸೇರಿ ಶಾಸಕರು ಮಾಜಿ ಶಾಸಕರು ಹಾಗೂ ಹಲವು ನಾಯಕರ ಜೊತೆ ಚರ್ಚಿಸಿದ್ದೇನೆ. ಪಕ್ಷದ ತೀರ್ಮಾನದಂತೆ ಕೆಲಸ ಮಾಡಲು ಬದ್ಧರಿರುವುದಾಗಿ ಹೇಳಿದ್ದಾರೆ. ಟಿಕೆಟ್ ತಪ್ಪಿಸಲು ಮುಂದಾದವರ ಬಗ್ಗೆ ಮಾತನಾಡಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT