ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಕೆ.ಹುಬ್ಬಳ್ಳಿ: ನೀರಿಗಾಗಿ ರಸ್ತೆ ಬಲಿ ನೀಡಿದ ಅಧಿಕಾರಿಗಳು

64 ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್‌ ಅಳವಡಿಗೆ, ಅಗೆದ ರಸ್ತೆಗಳನ್ನು ತಿರುಗಿ ನೋಡದ ಗುತ್ತಿಗೆದಾರರು
Published 17 ಜುಲೈ 2023, 12:22 IST
Last Updated 17 ಜುಲೈ 2023, 12:22 IST
ಅಕ್ಷರ ಗಾತ್ರ

-ಶಿವಾನಂದ ವಿಭೂತಿಮಠ

ಎಂ.ಕೆ.ಹುಬ್ಬಳ್ಳಿ: ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಎಲ್ಲೆಂದರಲ್ಲಿ ರಸ್ತೆ ಅಗೆದು ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ, ರಸ್ತೆಯನ್ನು ಮತ್ತೆ ದುರಸ್ತಿ ಮಾಡದ ಕಾರಣ ಗದ್ದೆಗಳಾಗಿ ಮಾರ್ಪಟ್ಟಿವೆ. ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಹಲವು ಕಡೆ ಈ ರೀತಿ ರಸ್ತೆಗಳನ್ನೆಲ್ಲ ಹಾಳು ಮಾಡಿದ್ದು ಕಣ್ಣಿಗೆ ರಾಚುವಂತಿದೆ.

ಮಲಪ್ರಭಾ ನದಿಯಿಂದ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ನೂರಾರು ಕೋಟಿ ರೂಪಾಯಿ ಅನುದಾನ ಸುರಿದಿದೆ. ಕಾಮಗಾರಿ ಇನ್ನು ತೆವಳುತ್ತಲೇ ಸಾಗಿದೆ. ಇದರ ಪೈಪ್‌ಲೈನ್ ಅಳವಡಿಕೆಗೆ ಚೆನ್ನಾಗಿಯೇ ಇದ್ದ ರಸ್ತೆಗಳನ್ನು ಅಗೆದ ಗುತ್ತಿಗೆದಾರರು ಮರಳಿ ಸರಿಪಡಿಸಿಲ್ಲ. ಸಂಬಂಧಿಸಿದ  ಇಲಾಖೆಯ ಅಧಿಕಾರಿಗಳಾಗಲೀ, ಕಾಮಗಾರಿಯ ನೇತೃತ್ವ ವಹಿಸಿದ ಅಧಿಕಾರಿಯಾಗಲೀ ಈ ಬಗ್ಗೆ ಕಾಳಜಿ ತೋರದ ಕಾರಣ ರಸ್ತೆಗಳು ಹಾಳಾಗಿವೆ.

‘ಬೃಹತ್‌ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ನಿಷ್ಕಾಳಜಿಯ ಕಾರಣ ನಾವು ಕೆಸರುಮಯ ರಸ್ತೆಗಳಲ್ಲೇ ಸಂಚರಿಸುವಂತಾಗಿದೆ’ ಎಂದು ತವಗದಮಠ ಪ್ರದೇಶದ ನಿವಾಸಿಗಳು, ಪಾರಿಶ್ವಾಡದ ಶರಣ ವೀರೇಶ್ವರ ನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕ್ಷೇತ್ರದ ಯಾವುದೇ ಊರಿಗೆ ಹೋದರೂ ಓಣಿಗಳೆಲ್ಲ ರಾಡಿಯಿಂದ ತುಂಬಿವೆ. ಮನೆಯಿಂದ ಜನರು‌ ರಸ್ತೆಗೆ ಕಾಲಿಡದಂತಾಗಿದೆ. ಬೈಕ್, ಕಾರು, ಟ್ರ್ಯಾಕ್ಟರ್, ಚಕ್ಕಡಿ ಸೇರಿದಂತೆ ಯಾವುದೇ ವಾಹನ ಸಂಚರಿಸದ ಸ್ಥಿತಿ ಇದೆ. ವೃದ್ಧರ, ಶಾಲಾ ಮಕ್ಕಳ ಪಾಡಂತೂ ಹೇಳತೀರದಾಗಿದೆ. ರಸ್ತೆಗೆ ಕಾಲಿಟ್ಟರೆ ಕಾಲಿಗೆ ಮೆತ್ತಿಕೊಳ್ಳುವ ರಾಡಿಯಿಂದ ಜನ ಹೈರಾಣಾಗಿದ್ದಾರೆ.

ರೈತರಿಗೂ ಸಂಕಷ್ಟ: ಊರ ಒಳಗಿನ ರಸ್ತೆಗಳು ಮಾತ್ರವಲ್ಲ; ಹೊಲ– ಗದ್ದೆಗಳಿಗೆ ಹೋಗುವ ರೈತರ ರಸ್ತೆಗಳಲ್ಲೂ ಇದೇ ಸಮಸ್ಯೆ ಎದುರಾಗಿದೆ.

ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಳಿಯ ವೀರಾಪುರ ರಸ್ತೆಯ ಗಟ್ಟಿಮುಟ್ಟಾಗಿದ್ದ ಕಾಂಕ್ರೀಟ್ ರಸ್ತೆ ಅಗೆದು ಸಿಮೆಂಟ್ ಪೈಪ್‌ಲೈನ್ ಅಳವಡಿಸಿರುವ ಗುತ್ತಿಗೆದಾರರು, ಮರಳಿ ಆ ರಸ್ತೆಗೆ ಕಾಂಕ್ರೀಟ್ ಹಾಕಿ ಗಟ್ಟಿಗೊಳಿಸಿಲ್ಲ. ಇದರಿಂದ ರಸ್ತೆ ತಗ್ಗುಗಳಿಂದ ಕೂಡಿದ್ದು ಸಂಚಾರ ದುಸ್ತರವಾಗಿದೆ.

ಎಂ.ಕೆ.ಹುಬ್ಬಳ್ಳಿಯಿಂದ ಪಾರಿಶ್ವಾಡ ಕಡೆ ಸಾಗುವ ರಸ್ತೆ ಅಗೆದು ಮುಚ್ಚಿದ್ದಾರೆ. ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮಣ್ಣು ಸ್ವಚ್ಛಗೊಳಿಸದ ಕಾರಣ ರಸ್ತೆ ರಾಡಿಯಾಗಿ, ಬೈಕ್ ಸವಾರರ ಪ್ರಾಣ ಹಿಂಡುತ್ತಿದೆ. ಬೈಕ್‌ಗಳು ರಸ್ತೆಯಲ್ಲಿ ಜಾರುತ್ತಿದ್ದು, ಸವಾರರು ಬಿದ್ದು ಪೆಟ್ಟು ಮಾಡಿಕೊಂಡ ಉದಾಹರಣೆಗಳೂ ಇವೆ.

ಅಪಾಯ ಸಂಭವಿಸುವ ಮುನ್ನ ಬಹೃತ್‌ ಮತ್ತು ಮಧ್ಯಮ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಗಾಗಿ ಎಂ.ಕೆ‌.ಹುಬ್ಬಳ್ಳಿ ಪಟ್ಟಣದ ಶರಣ ವೀರೇಶ್ವರ ನಗರದ ರಸ್ತೆಯನ್ನು ಗದ್ದೆಯಂತೆ ಅಗೆಯಲಾಗಿದೆ
ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಗಾಗಿ ಎಂ.ಕೆ‌.ಹುಬ್ಬಳ್ಳಿ ಪಟ್ಟಣದ ಶರಣ ವೀರೇಶ್ವರ ನಗರದ ರಸ್ತೆಯನ್ನು ಗದ್ದೆಯಂತೆ ಅಗೆಯಲಾಗಿದೆ
ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಯಿಂದ ಸಂಪೂರ್ಣ ಹಾಳಾದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ತವಗದ ಮಠದ ಕೆಸರುಮಯ ರಸ್ತೆಯಲ್ಲಿ ಶಾಲೆಗೆ ಹೊರಟ ಮಕ್ಕಳು
ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿಯಿಂದ ಸಂಪೂರ್ಣ ಹಾಳಾದ ಎಂ.ಕೆ.ಹುಬ್ಬಳ್ಳಿ ಪಟ್ಟಣದ ತವಗದ ಮಠದ ಕೆಸರುಮಯ ರಸ್ತೆಯಲ್ಲಿ ಶಾಲೆಗೆ ಹೊರಟ ಮಕ್ಕಳು

ಪೈಪ್‌ಲೈನ್‌ಗಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳನ್ನು ಅಗೆಯಲಾಗಿದೆ. ದುರಸ್ತಿ ಮಾಡುವಂತೆ ಗುತ್ತಿಗೆದಾರರು ಕಂಪನಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ

ಶರಣ ಬಸಯ್ಯ ಮುಖ್ಯಾಧಿಕಾರಿ ಪ.ಪಂ ಎಂ.ಕೆ‌.ಹುಬ್ಬಳ್ಳಿ

ನದಿಯಿಂದ ಕೆರೆ ತುಂಬಿಸುವ ಯೋಜನೆ ಪೈಪ್‌ಲೈನಿಗಾಗಿ ನಾವು ಸಂಚಾರ ಮಾಡುವ ರಸ್ತೆಗಳನ್ನೇ ಹಾಳು ಮಾಡಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಸಂಚಾರವೇ ನರಕವಾಗಿದೆ

ನಾಗಪ್ಪ ಸಂಬಣ್ಣವರ ಶರಣ ವೀರೇಶ್ವರ ನಗರದ ನಿವಾಸಿ

ಎಂ.ಕೆ.ಹುಬ್ಬಳ್ಳಿ ಪಟ್ಟಣ ಮಾತ್ರವಲ್ಲ; ಈ ಕಾಮಗಾರಿ ನಡೆದ ಎಲ್ಲ ಗ್ರಾಮಗಳಲ್ಲೂ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಶಾಲಾ ಮಕ್ಕಳು ಹಿರಿಯರಿಗೆ ಸಂಚಾರ ಮಾಡುವುದೇ ಸರ್ಕಸ್‌ ಆಗಿದೆ

ಜಗದೀಶ ಕಮ್ಮಾರ ತವಗದ ಮಠದ ಬಳಿಯ ನಿವಾಸಿ

ಪ.ಪಂ ಅಧಿಕಾರಿಗಳೂ ಅಸಹಾಯಕ

ಕೆರೆ ತುಂಬಿಸುವ ಕಾಮಗಾರಿಗಾಗಿ ಎಂ.ಕೆ. ಹುಬ್ಬಳ್ಳಿ ಪಟ್ಟಣದ ರಸ್ತೆಗಳನ್ನೂ ಹಾಳು ಮಾಡಲಾಗಿದೆ. ಇವು ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಿದ ರಸ್ತೆಗಳು. ನಿಯಮದ ಪ್ರಕಾರ ಕಾಮಗಾರಿ ಮಾಡಿದ ಇಲಾಖೆಯೇ ಮರಳಿ ನಿರ್ಮಿಸಿಕೊಡಬೇಕು. ಈ ಬಗ್ಗೆ ಜನರು ಆಗ್ರಹ ಮಾಡಿದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಿಲ್ಲ. ಹೀಗಾಗಿ ಗುತ್ತಿಗೆದಾರರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವುದು ಜನರ ದೂರು. 3ನೇ ವಾರ್ಡ್‌ 5ನೇ ಕ್ರಾಸ್‌ ರಸ್ತೆಗಳಂತೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇತ್ತ ಪಟ್ಟಣ ಪಂಚಾಯಿತಿಯೂ ದುರಸ್ತಿ ಮಾಡಿಸುತ್ತಿಲ್ಲ. ಹೀಗಾಗಿ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT