ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಕ್ಕಿರಿದ ಬಸ್‌ನಲ್ಲಿ ಉಸಿರುಗಟ್ಟಿ ವಿದ್ಯಾರ್ಥಿನಿಯರು ಅಸ್ವಸ್ಥ

Last Updated 23 ಫೆಬ್ರುವರಿ 2021, 14:43 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ಉತ್ತರ ಕನ್ನಡ ಜಿಲ್ಲೆಯ ರಾಮನಗರದಿಂದ ತಾಲ್ಲೂಕಿನ ಲೋಂಡಾ, ಗುಂಜಿ ಮಾರ್ಗವಾಗಿ ಮಂಗಳವಾರ ಬೆಳಿಗ್ಗೆ ಪಟ್ಟಣಕ್ಕೆ ಬರುತ್ತಿದ್ದ ರಾಮನಗರ-ಬೆಳಗಾವಿ ಬಸ್‌ನಲ್ಲಿ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿಸಿದ್ದರಿಂದ ಪ್ರಯಾಣಿಕರ ಮಧ್ಯೆ ಸಿಲುಕಿದ್ದ ಇಬ್ಬರು ವಿದ್ಯಾರ್ಥಿನಿಯರು ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದಾರೆ.

ಬಸ್‌ನಲ್ಲಿ ಲೋಂಡಾದಿಂದ ಪಟ್ಟಣದ ಕಾಲೇಜಿಗೆ ಹೊರಟಿದ್ದ 60-70 ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಹತ್ತಿದ್ದಾರೆ. ರಾಮನಗರ-ಖಾನಾಪುರ ಮಾರ್ಗದ ರಸ್ತೆ ದುಃಸ್ಥಿತಿಯಲ್ಲಿರುವ ಕಾರಣ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಧೂಳಿನ ಭಯದಿಂದಾಗಿ ಬಸ್‌ನ ಎಲ್ಲ ಕಿಟಕಿ-ಬಾಗಿಲುಗಳನ್ನು ಮುಚ್ಚಿದ್ದರು. ಬಸ್‌ ಗುಂಜಿ ಗ್ರಾಮದ ಬಳಿ ಬರುತ್ತಲೇ ಇಬ್ಬರು ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಬಸ್ ನಿರ್ವಾಹಕ ಮತ್ತು ಚಾಲಕ ಬಸ್‌ಅನ್ನು ನೇರವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಂದು ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಸುದ್ದಿ ತಿಳಿದು ಆಸ್ಪತ್ರೆಯ ಮುಂದೆ ವಿದ್ಯಾರ್ಥಿಗಳು, ಪಾಲಕರು ಮತ್ತು ಸ್ಥಳೀಯರು ಸೇರಿದ್ದರು. ಸ್ಥಳಕ್ಕಾಗಮಿಸಿದ ವಾಯವ್ಯ ಸಂಸ್ಥೆಯ ಅಧಿಕಾರಿಗಳಿಗೆ ಹೆಚ್ಚಿನ ಬಸ್‌ ಬಿಡಲು ಆಗ್ರಹಿಸಿದರು. ’ಶಾಲಾ-ಕಾಲೇಜು ಅವಧಿಯಲ್ಲಿ ರಾಮನಗರದಿಂದ ಪಟ್ಟಣಕ್ಕೆ ಇದ್ದ ಒಂದೇ ಬಸ್ಸಿನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯ ಇದೆ. ತರಗತಿಗಳು ತಪ್ಪದಿರಲೆಂದು ಲೋಂಡಾ ಗ್ರಾಮದ ವಿದ್ಯಾರ್ಥಿನಿಯರು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಹತ್ತಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳಗ್ಗೆ 7 ಮತ್ತು 8 ಗಂಟೆಗೆ ರಾಮನಗರ-ಖಾನಾಪುರ ಮತ್ತು ಮಧ್ಯಾಹ್ನ 2 ಮತ್ತು 3 ಗಂಟೆಗೆ ಖಾನಾಪುರ-ರಾಮನಗರ ನಡುವೆ ಹೆಚ್ಚುವರಿ ಬಸ್ಸುಗಳನ್ನು ಓಡಿಸಬೇಕು‘ ಎಂದು ಆಗ್ರಹಿಸಿದರು.

ಘಟನೆ ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆಗೆ ಬಂದ ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಮತ್ತು ಖಾನಾಪುರ ಠಾಣೆಯ ಪಿ.ಎಸ್.ಐ ಬಸಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಕೂಡಲೇ ರಾಮನಗರ-ಖಾನಾಪುರ ರಸ್ತೆ ದುರಸ್ತಿಗೆ ಮತ್ತು ಈ ಮಾರ್ಗದಲ್ಲಿ ನಿಯಮಿತ ಬಸ್ ಸೇವೆ ಒದಗಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT