ಶುಕ್ರವಾರ, ಜನವರಿ 22, 2021
21 °C
ಕಬ್ಬು ಬೆಳೆಗಾರರಿಗೆ ದೊರೆಯದ ಕಾನೂನು ನೆರವು

ಬೆಳಗಾವಿ: ಬಿಲ್ ಬಾಕಿ, ವಿಚಾರಣೆಗೆ ‘ಗ್ರಹಣ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಿಲ್ ಬಾಕಿ ಮತ್ತು ವ್ಯತ್ಯಾಸದ ಹಣ ಕೊಡಿಸುವಂತೆ ಕಬ್ಬು ಬೆಳೆಗಾರರು ಸಲ್ಲಿಸಿರುವ ದೂರು ಅರ್ಜಿಗಳ ವಿಚಾರಣೆ ಪ್ರಕ್ರಿಯೆಯು 2019ರ ಫೆಬ್ರುವರಿಯಿಂದಲೂ ನನೆಗುದಿದೆ ಬಿದ್ದಿದೆ.

ದಿನಾಂಕ ನಿಗದಿಯಾಗುವುದು, ಒಂದಿಲ್ಲೊಂದು ಕಾರಣದಿಂದ ವಿಚಾರಣೆ ಮುಂದೂಡುವುದು ನಡೆಯುತ್ತಲೇ ಇದೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತರು ತ್ವರಿತವಾಗಿ ವಿಚಾರಣೆ ನಡೆಸಿ, ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ತಮಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

2017–18ನೇ ಸಾಲಿನಲ್ಲಿ ಕಬ್ಬಿನ ಬಾಬ್ತು ‍ಪೂರ್ಣ ಮೊತ್ತವನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಿಲ್ಲವೆಂದು, ಕಬ್ಬು ಬೆಳೆಗಾರರಿಗೆ ಪಾವತಿಸಬೇಕಿರುವ ಬಾಕಿ ಮೊತ್ತವನ್ನು ಬಡ್ಡಿಯೊಂದಿಗೆ ವಸೂಲಿ ಮಾಡಿಕೊಡುವಂತೆ ರೈತರು ಅಧಿಕಾರಿಗಳ ಸಲಹೆಯ ಮೇರೆಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ಹೋರಾಟ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ‘ಲಿಖಿತವಾಗಿ ದೂರು ನೀಡಿದರೆ ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಅಧಿಕಾರಿಗಳೇ ಬೆಳೆಗಾರರಿಗೆ ತಿಳಿಸಿದ್ದರು. ಅದರಂತೆ, ನೊಂದ ಬೆಳೆಗಾರರು ಸಲ್ಲಿಸಿದ್ದಾರೆ.

ಹಾಜರಾಗಿರಲಿಲ್ಲ: 2019ರ ಜ. 25, ಜುಲೈ 31 ಹಾಗೂ ಸೆ. 24ರಂದು ಸಭೆ ನಿಗದಿಪಡಿಸಲಾಗಿತ್ತು. ಆದರೆ, ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಾಗಿರಲಿಲ್ಲ.

ಇದಾದ ಬಳಿಕ ಹೋದ ವರ್ಷ ಡಿ.17 ಹಾಗೂ 18ರಂದು ಇಲ್ಲಿನ ಗಣೇಶಪುರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನಿಗದಿಪಡಿಸಿದ್ದ ವಿಚಾರಣೆಯನ್ನು  ಮುಂದೂಡಲಾಗಿತ್ತು. ಇದಾಗಿ, ಹಲವು ದಿನಗಳೇ ಉರುಳಿದ್ದರೂ ವಿಚಾರಣೆಯ ದಿನಾಂಕ ಘೋಷಣೆಯಾಗಿಲ್ಲ. ಹೀಗೆ ಕಾಲಹರಣ ಮಾಡುತ್ತಿರುವುದರಿಂದ  ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯ ಪ್ರಗತಿ ಕಾಣುತ್ತಿಲ್ಲ. ಅರ್ಜಿಗಳು ಸಂಬಂಧಿಸಿದ ಕಚೇರಿಯಲ್ಲಿ ಧೂಳು ತಿನ್ನುತ್ತಿವೆ! ಈ ನಿಟ್ಟಿನಲ್ಲಿ ಸಕ್ಕರೆ ಸಚಿವರು ನೀಡಿದ್ದ ಭರವಸೆಯೂ ಈಡೇರಿಲ್ಲ.

ಬಿಲ್‌ ವ್ಯತ್ಯಾಸ ಕುರಿತ ತಕರಾರಿಗೆ ಸಂಬಂಧಿಸಿದಂತೆ 369 ಮಂದಿ ಹಾಗೂ ಬಾಕಿ ಬಿಲ್ ಮತ್ತು ಚೆಕ್‌ ಬೌನ್ಸ್ ವಿಷಯದಲ್ಲಿ 331 ಮಂದಿ ಕಬ್ಬು ಬೆಳೆಗಾರರು ಅಫಿಡವಿಡ್ ಮೂಲಕ ಸಕ್ಕರೆ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಇವುಗಳ ವಿಚಾರಣೆ ಪದೇ ಪದೇ ಮುಂದೂಡಿಕೆ ಆಗುತ್ತಲೇ ಇದೆ. ಪರಿಣಾಮ, ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಕಲ್ಪಿಸುವುದು ಸಾಧ್ಯವಾಗುತ್ತಿಲ್ಲ.

ಆಯುಕ್ತರ ಕಚೇರಿಯನ್ನು ಇಲ್ಲೇ ಸ್ಥಾಪಿಸಬೇಕು ಎಂಬ ಕಬ್ಬು ಬೆಳೆಗಾರರು ಬೇಡಿಕೆಯೂ ಈಡೇರಿಲ್ಲ. ವಿಚಾರಣೆಯೂ ನಡೆಯುತ್ತಿಲ್ಲ. ಇದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿನಿಯಮದ ಪ್ರಕಾರ
ಈ ಅರ್ಜಿಗಳನ್ನು ಕಬ್ಬು (ನಿಯಂತ್ರಣ) ಆದೇಶ 1996ರ ಭಾಗ (ಖಂಡ) 8ರ ಅವಕಾಶಗಳಂತೆ ಮತ್ತು ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ 2013ರ ತಿದ್ದುಪಡಿಯ 2014ರ ಅವಕಾಶಗಳಂತೆ ವಿಚಾರಣೆ ಕೈಗೆತ್ತಿಕೊಳ್ಳಲು ನಿಯಮದ ಪ್ರಕಾರ ಅವಕಾಶವಿದೆ. ಕಾಯಂ ಆಯುಕ್ತರು ಇಲ್ಲದಿರುವುದು ಕೂಡ ವಿಚಾರಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.

ಕೆಲವು ಕಾರ್ಖಾನೆಗಳು 2017–18ನೇ ಸಾಲಿನಲ್ಲಿ ಸಂಪೂರ್ಣ ಬಿಲ್ ಬಾಕಿ ಉಳಿಸಿಕೊಂಡಿವೆ, ಕೆಲವು ಕಾರ್ಖಾನೆಗಳವರು ಘೋಷಿಸಿದಷ್ಟು ಬಿಲ್ ಕೊಟ್ಟಿಲ್ಲ. ಟನ್‌ ಕಬ್ಬಿಗೆ ₹ 400ರಿಂದ ₹ 500 ಕಡಿಮೆ ಕೊಟ್ಟಿವೆ. ಈ ಬಗ್ಗೆ ವಿಚಾರಣೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೆತ್ತಿಕೊಂಡಿಲ್ಲ. ಬೆಳೆಗಾರರ ಸಂಕಷ್ಟ ನಿವಾರಣೆಯಾಗಿಲ್ಲ.

***

ಹೋದ ವರ್ಷ ಡಿ.17ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಆಡಳಿತಾತ್ಮಕ ಕಾರಣದಿಂದ ಮುಂದೂಡಲಾಗಿತ್ತು. ಮುಂದಿನ ದಿನಾಂಕ ನಿಗದಿ ಅಥವಾ ಸ್ಥಳದ ಬಗ್ಗೆ ನಮಗೆ ಆಯುಕ್ತಾಲಯದಿಂದ ಸೂಚನೆ ಬಂದಿಲ್ಲ.
-ಡಾ.ಆರ್.ಬಿ ಖಂಡಗಾವೆ, ನಿರ್ದೇಶಕರು, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು