ಗುರುವಾರ , ಅಕ್ಟೋಬರ್ 29, 2020
26 °C
ಸಂಘ ಪರಿವಾರದಿಂದ ಸುರೇಶ ಅಂಗಡಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸುರೇಶ ಅಂಗಡಿ ನಿರ್ಲಕ್ಷ್ಯ ವಹಿಸದಿದ್ದರೆ ಇರುತ್ತಿದ್ದರು: ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Shetter

ಬೆಳಗಾವಿ: ‘ಸುರೇಶ ಅಂಗಡಿ ಅವರು ಮಾಸ್ಕ್ ಹಾಕುವುದರಲ್ಲಿ ನಿರ್ಲಕ್ಷ್ಯ ವಹಿಸಿದರು. ಯಾವುದೇ ಚಟವಿಲ್ಲದ ನನಗೆ ಏನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿತ್ತು. ನಿರ್ಲಕ್ಷ್ಯ ತಾಳದೇ ಇದ್ದಿದ್ದರೆ ಬದುಕುತ್ತಿದ್ದರೇನೋ...’

– ಹೀಗೆ ಹೇಳಿದ ಕೈಗಾರಿಕಾ ಸಚಿವ ಹಾಗೂ ಅಂಗಡಿ ಅವರ ಬೀಗರೂ ಆದ ಜಗದೀಶ ಶೆಟ್ಟರ್‌ ಒಂದು ಕ್ಷಣ ಭಾವುಕರಾದರು.

ಇಲ್ಲಿ ಸಂಘ ಪರಿವಾರದಿಂದ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು; ಮಾಸ್ಕ್‌ ಧರಿಸಿ ಎಂದು ಹಲವು ಬಾರಿ ಹೇಳಿದ್ದೆ. ಆಸ್ಪತ್ರೆಯಲ್ಲೂ ಅವರು ಆರಾಮಿದ್ದೇನೆ ಎಂದೇ ವೈದ್ಯರಿಗೆ ಹೇಳಿದ್ದರು’ ಎಂದು ತಿಳಿಸಿದರು.

ಪಕ್ಷಕ್ಕೆ ಅಪಾರ ಕೊಡುಗೆ:

‘ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದಾಗಲೂ ನನ್ನೊಂದಿಗೆ ಕೈಜೋಡಿಸಿದ್ದರು. ಇಲ್ಲಿ ಏನೂ ಇಲ್ಲದಿದ್ದ ಬಿಜೆಪಿ ಹೆಮ್ಮರವಾಗಿ ಬೆಳೆಯಲು ಅವರ ಕೊಡುಗೆಯೂ ಅಪಾರವಾಗಿದೆ’ ಎಂದು ನೆನದರು.

ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದೆವು. ಏನೇ ಹೇಳಿದರೂ ಸಿಟ್ಟು ಮಾಡಿಕೊಳ್ಳಲಿಲ್ಲ. ಸದಾ ಹಸನ್ಮುಖಿ ಆಗಿದ್ದರು’ ಎಂದು ಸ್ಮರಿಸಿದರು.

‘ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಅವರು ಮಾಸ್ಕ್ ಹಾಕಿಕೊಳ್ಳುತ್ತಿರಲಿಲ್ಲ. ಈ ವಿಷಯದಲ್ಲಿ ಹಲವು ಬಾರಿ ಸಲಹೆ ನೀಡಿದ್ದೆ. ತಾವು ಓದಿದ್ದ ಶಾಲೆಗೆ ಹೋಗಿದ್ದರು. ಆಪ್ತರೆಲ್ಲರೊಂದಿಗೆ ಮಾತನಾಡಿದ್ದರು’ ಎಂದು ತಿಳಿಸಿದರು.

ಜನಪ್ರತಿನಿಧಿಗೆ ಮಾದರಿ:

ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಜನಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಎಲ್ಲರಿಗೂ ತೋರಿಸಿಕೊಟ್ಟು ಹೋಗಿದ್ದಾರೆ.  ಸಮಾಜದಿಂದ ಲೇಸೆನಿಸಿಕೊಂಡು, ಆದರ್ಶದ ಬದುಕು ಬದುಕಿದವರು. ಕಾಯಕದಿಂದ ಜೀವನ ರೂಪಿಸಿಕೊಂಡವರು’ ಎಂದು ನೆನೆದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ಸಾಮಾನ್ಯ ಕುಟುಂಬದಿಂದ ಸಾಧಿಸಬಹುದು ಎನ್ನುವುದಕ್ಕೆ ಅಂಗಡಿ ಉದಾಹರಣೆಯಾಗಿದ್ದಾರೆ. ಕೆಲಸಗಳ ಮೂಲಕ ಈ ಭಾಗಕ್ಕೆ ಗೌರವ ತಂದುಕೊಟ್ಟರು. ಯಾವಾಗಲೂ ರಾಜಕಾರಣಕ್ಕೇ ಸಮಯ ಕೊಡಬೇಡಿ ಉದ್ಯೋಗವನ್ನೂ ಮಾಡಿ ಎಂದು ಸಲಹೆ ನೀಡುತ್ತಿದ್ದರು’ ಎಂದು ಸ್ಮರಿಸಿದರು.

ಶಾಸಕ ಅನಿಲ ಬೆನಕೆ, ‘ಅವರು ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ವ್ಯಾಪಾರಿ ಆಗಿದ್ದರಿಂದ ಬಿಜೆಪಿಯ ವಿಚಾರಗಳನ್ನು ಅವರು ಚೆನ್ನಾಗಿ ಮಾರ್ಕೆಟಿಂಗ್  ಮಾಡಿದರು. ಸುಲಭವಾಗಿ ಸಿಗುತ್ತಿದ್ದ ಸಂಸದರಾಗಿದ್ದರು. ಬೇರೆ ಪಕ್ಷದವರಿಗೂ ಕೆಲಸ ಮಾಡಿಕೊಡುತ್ತಿದ್ದರು' ಎಂದು ಒಡನಾಟ ಹಂಚಿಕೊಂಡರು.

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ಅಂಗಡಿ ಕುಟುಂಬದವರು, ಮುಖಂಡರು ಇದ್ದರು.

ಕೊನೆಯ 9 ದಿನಗಳು...

ಅಳಿಯ ಡಾ.ರಾಹುಲ್ ಪಾಟೀಲ ಮಾತನಾಡಿ, ‘ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಯೋಜನೆಗೆ ಅನುಮೋದನೆ ಸಿಕ್ಕಿದ್ದಕ್ಕೆ ಬಹಳ ಸಂತಸ ಪಟ್ಟಿದ್ದರು. ಸೆ.8ರಂದು ಅವರಿಗೆ ಜ್ವರ ಬಂದಿದ್ದರೂ ಮಾತ್ರೆ ತೆಗೆದುಕೊಂಡು ಜನರ ಕೆಲಸಕ್ಕೆ ಒತ್ತು  ನೀಡಿದರು. ಪುತ್ರಿಯರು ಹೇಳಿದರೂ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ಸೋಂಕಿನ ಅಪಾಯ ಬಹಳ ಕೈಮೀರಿ ಹೋಗಿತ್ತು. ಸದಾ ಜನರ ಮಧ್ಯದಲ್ಲಿರುತ್ತಿದ್ದ ಅವರು, ಕೊನೆಯ 9 ದಿನಗಳು ಯಾರೊಂದಿಗೂ ಸಂಪರ್ಕಕ್ಕೆ ಬಾರದಿದ್ದರಿಂದ ನೊಂದಿದ್ದರು. ಕಾಯಕವೇ ಕೈಲಾಸ ಎನ್ನುವುದಕ್ಕೆ ಅವರು ಉದಾಹರಣೆಯಾಗಿದ್ದಾರೆ’ ಎಂದು ಹೇಳಿದರು.

ಸುರೇಶ ಅಂಗಡಿ ಅವರ ಅಗಲಿಕೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಬಡವಾಗಿದೆ. ಅವರ ಸ್ಥಾನ ತುಂಬುವುದು ಬಹಳ ಕಠಿಣವಿದೆ
ಈರಣ್ಣ ಕಡಾಡಿ
ರಾಜ್ಯಸಭಾ ಸದಸ್ಯ

***

ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಕಟ್ಟುವಾಗ ನಾನು ಹಾಗೂ ಸುರೇಶ ಅಂಗಡಿ ವಿರೋಧ ಮಾಡಿದ್ದೆವು. ವಿಚಾರಕ್ಕಾಗಿ ಇಲ್ಲಿದ್ದೇವೆ, ನಿಮ್ಮೊಂದಿಗೆ ಬರುವುದಿಲ್ಲ ಎಂದು ಅಂಗಡಿ ನೇರವಾಗಿಯೇ ಹೇಳಿದ್ದರು
ಸಂಜಯ ಪಾಟೀಲ
ಅಧ್ಯಕ್ಷ, ಬಿಜಿಪಿ ಜಿಲ್ಲಾ ಗ್ರಾಮಾಂತರ ಘಟಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು